ರಸ್ತೆ ಪಕ್ಕ ಅವಧಿ ಮುಗಿದ ಮಾತ್ರೆಗಳ ರಾಶಿ

KannadaprabhaNewsNetwork |  
Published : Jun 22, 2025, 01:18 AM IST
೨೧ಎಚ್‌ವಿಆರ್5 | Kannada Prabha

ಸಾರಾಂಶ

ಕನಕಾಪುರ ರಸ್ತೆ ಬದಿಯಲ್ಲಿ ಹೀಗೆ ರಾಶಿ ಮಾತ್ರೆ ನೋಡಿ ರೈತರು ಹಾಗೂ ಸಾರ್ವಜನಿಕರು ಆತಂಕ

ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆ ಪಕ್ಕದ ಕನಕಾಪುರ ರಸ್ತೆ ಬದಿಯಲ್ಲಿ ಅವಧಿ ಮುಗಿದ ರಾಶಿಗಟ್ಟಲೇ ಮಾತ್ರೆಗಳು ಪತ್ತೆಯಾಗಿದ್ದು, ಆಸ್ಪತ್ರೆ ತ್ಯಾಜ್ಯ ಈ ರೀತಿ ಎಸೆದಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ತ್ಯಾಜ್ಯ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂಬ ನಿಯಮವಿದೆ. ಆದರೆ ಅವುಗಳನ್ನು ಪಾಲಿಸದೇ, ಸಾರ್ವಜನಿಕ ರಸ್ತೆಯ ಬದಿಯಲ್ಲಿ ರಾಶಿಗಟ್ಟೆಲೇ ಸುರಿದು ಹೋಗಿರುವುದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಕನಕಾಪುರ ರಸ್ತೆ ಬದಿಯಲ್ಲಿ ಹೀಗೆ ರಾಶಿ ಮಾತ್ರೆ ನೋಡಿ ರೈತರು ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಇವುಗಳನ್ನು ಜಾನುವಾರುಗಳು ಸೇರಿದಂತೆ ಸಾಕು ಪ್ರಾಣಿಗಳು ತಿಂದಲ್ಲಿ ಮುಂದಾಗುವ ಸಮಸ್ಯೆಗೆ ಯಾರು ಹೊಣೆ ಎಂದು ಸಾರ್ವಜನಿಕರು ಆರೋಗ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮಾತ್ರೆಗಳು ೨೦೧೦ರಿಂದ ೨೦೧೪ರ ಅವಧಿಯದ್ದಾಗಿವೆ ಎನ್ನಲಾಗಿದ್ದು, ಗ್ರಾಮೀಣ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಹಂಚಿಕೆಗೆ ನೀಡಲಾಗಿದ್ದ ಮಾತ್ರೆಗಳು ಎಂದು ತಿಳಿದುಬಂದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾತ್ರೆಗಳ ಸಂಗ್ರಹ ತಾಲೂಕುಮಟ್ಟದ ಅಧಿಕಾರಿಗಳಲ್ಲಿ ಮಾತ್ರ ಸಂಗ್ರಹ ಇರಲು ಸಾಧ್ಯ, ಈ ಕುರಿತು ಸಮಗ್ರ ತನಿಖೆಯಾಗಿ ಸಂಬಂಧಿಸಿದವರ ಮೇಲೆ ಕ್ರಮವಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಾತ್ರೆ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ.ಇಲ್ಲಿ ಪತ್ತೆಯಾದ ಬಹುತೇಕ ಮಾತ್ರೆಗಳು ಅವಧಿ ಮೀರಿದ್ದು, ಅವುಗಳನ್ನು ಬ್ಯಾಚ್ ಆಧಾರದ ಮೇಲೆ ಯಾರಿಗೆ,ಯಾವಾಗ ಎಷ್ಟು ಹಂಚಿಕೆ ಮಾಡಲಾಗಿತ್ತು ಎಂಬುದು ನಮಗೆ ತಿಳಿದುಬರಲಿದೆ. ಅದರ ನಂತರ ಸಂಬಂಧಿಸಿದವರ ಮೇಲೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಕಳಿಸುತ್ತೇವೆ. ಅವರು ಮುಂದಿನ ಕ್ರಮ ಜರುಗಿಸಲಿದ್ದಾರೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಪ್ರಭಾಕರ ಕುಂದೂರ ತಿಳಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌