ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರ ಹೊರವಲಯದ ಶಾಸಕ ಪ್ರದೀಪ್ ಈಶ್ವರ್ ಗೃಹ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ವಿವಿಧ ಕಾರ್ಮಿಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿ, "ಭಾರತವನ್ನು ನಿರ್ಮಿಸುವ ಕಾರ್ಮಿಕರು ಮತ್ತು ಕುಶಲಕರ್ಮಿಗಳು ವಾಸ್ತವವಾಗಿ ಆರ್ಥಿಕತೆಯ ಚಕ್ರವನ್ನು ತಿರುಗಿಸುತ್ತಾರೆ ಮತ್ತು ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ. ಅವರ ಕೌಶಲ್ಯಗಳಿಗೆ ತಕ್ಕ ಗೌರವ ಮತ್ತು ಅವರ ಶ್ರಮಕ್ಕೆ ಗೌರವ ಸಿಗದ ಹೊರತು, ಭಾರತ ನಿಜವಾಗಿಯೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್ ಮಾತನಾಡಿ, ವಿಶ್ವದ ಎಲ್ಲಾ ದುಡಿಯುವ ಕಾರ್ಮಿಕರು ಒಂದಾದರೆ ಮಾತ್ರ ವಿಶ್ವವನ್ನು ಶೋಷಣೆ ಮಾಡುತ್ತಿರುವ ಬಂಡವಾಳಶಾಹಿ ಸಮಾಜವನ್ನು ಸೋಲಿಸಿ, ದುಡಿಯುವ ಜನರ ಸಮಾಜವಾದಿ ಸಮಸಮಾಜವನ್ನು ಜಾರಿಗೆ ತರಲು ಸಾಧ್ಯ ಎಂದು ಹೇಳಿದರು.ನಿವೃತ್ತ ಪೋಲಿಸ್ ಅಧಿಕಾರಿ ಎಚ್.ನಜುಂಡಯ್ಯ ಮಾತನಾಡಿ, 19ನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಯುನೈಟೆಡ್ ಸ್ಟೇಟ್ಸ್ ಕಾರ್ಮಿಕ ಚಳವಳಿಯಿಂದ ಅಂತಾರಾಷ್ಟ್ರೀಯ ಕಾರ್ಮಿಕ ದಿನವು ಹುಟ್ಟಿಕೊಂಡಿತು. 1886 ರಲ್ಲಿ ಪ್ರಾರಂಭವಾದ ರಾಷ್ಟ್ರವ್ಯಾಪಿ 8 ಗಂಟೆಗಳ ಕೆಲಸದ ದಿನದ ಮುಷ್ಕರವನ್ನು ಗೌರವಿಸಲು ಮೇ 1 ಅನ್ನು ದಿನಾಂಕವಾಗಿ ಆಯ್ಕೆ ಮಾಡಲಾಯಿತು. ಆದಾಗ್ಯೂ, ಈ ನಿರ್ಣಾಯಕ ಘಟನೆಯು ಚಿಕಾಗೋದಲ್ಲಿ ದುರಂತ ಹೇ ಮಾರ್ಕೆಟ್ ವ್ಯವಹಾರದಲ್ಲಿ ಕೊನೆಗೊಂಡಿತು, ಅಲ್ಲಿ ಕಾರ್ಮಿಕ ಪ್ರದರ್ಶನವು ಹಿಂಸಾತ್ಮಕವಾಯಿತು. ಬಾಂಬ್ ಸ್ಫೋಟದಲ್ಲಿ ಏಳು ಪೊಲೀಸ್ ಅಧಿಕಾರಿಗಳು ಮತ್ತು ಕನಿಷ್ಠ ನಾಲ್ಕು ನಾಗರಿಕರು ಸಾವನ್ನಪ್ಪಿದರು.
ಬುದ್ದ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು ಮತ್ತು ವಿವಿಧ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಅಜಯ್ ಕುಮಾರ್, ಅಹಿಂದ ಮುಖಂಡರಾದ ಮುನೇಗೌಡ, ರಾಜಶೇಖರ್, ಇಬ್ರಾಹಿಂ, ರಾಮಕೃಷ್ಣಪ್ಪ, ಆನಂದ್, ಮೋಹನ್,ಮತ್ತಿತರರು ಇದ್ದರು.
ಸಿಕೆಬಿ-1ಚಿಕ್ಕಬಳ್ಳಾಪುರ ಹೊರವಲಯದ ಶಾಸಕ ಪ್ರದೀಪ್ ಈಶ್ವರ್ ಗೃಹ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ವಿವಿಧ ಕಾರ್ಮಿಕರನ್ನು ಸನ್ಮಾನಿಸಲಾಯಿತು.