ಕಂದಾಯ ವಿಭಾಗ ಮಟ್ಟದಲ್ಲಿ ಖಾಯಂ ಜನತಾ ನ್ಯಾಯಾಲಯ ಸ್ಥಾಪನೆ: ನ್ಯಾ.ರೋಣ ವಾಸುದೇವಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಪಟ್ಟ ವಿವಾದಗಳನ್ನು ರಾಜೀ ಮತ್ತು ವಿಚಾರಣೆ ಮೂಲಕ ತ್ವರಿತವಾಗಿ ಇತ್ಯರ್ಥಗೊಳಿಸಲು 1987ರ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಗೆ ತಿದ್ದುಪಡಿ ತಂದು ಪ್ರತಿ ಕಂದಾಯ ವಿಭಾಗ ಮಟ್ಟದಲ್ಲಿ ಖಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ತಿಳಿಸಿದರು.ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದಲ್ಲಿ ಶುಕ್ರವಾರ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸದ್ಯ ಖಾಯಂ ಜನತಾ ನ್ಯಾಯಾಲಯಗಳ ಕಾರ್ಯ ವೈಖರಿಯಲ್ಲಿ ಸುಧಾರಣೆ ತಂದು ಕಕ್ಷಿದಾರಿಗೆ ಅನುಕೂಲವಾಗುವಂತೆ ಕಂದಾಯ ವಿಭಾಗದಲ್ಲಿ ಬರುವ ಜಿಲ್ಲಾ ಕೇಂದ್ರಗಳಲ್ಲಿಯೂ ನಿಯಮಿತವಾಗಿ ವಿಚಾರಣೆಗಳನ್ನು ನಡೆಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದಿ ಹೇಳಿದರು.
ಸಾರ್ವಜನಿಕರಿಗೆ ವಿವಿಧ ಸೌಲಭ್ಯ ಒದಗಿಸುವ ಸೇವಾ ವಲಯಗಳ ವ್ಯಾಪ್ತಿಯಲ್ಲಿ 1 ಕೋಟಿ ಮೌಲ್ಯದವರೆಗಿನ ಕ್ಲೈಮ್ ಅಥವಾ ಹಣಕಾಸಿನ ವ್ಯವಹಾರ ಸಂಬಂಧಿಸಿದಂತೆ ಸಾರಿಗೆ ಅಂಚೆ ದೂರವಾಣಿ ವಿದ್ಯುತ್ ಬೆಳಕು ನೀರು ಸರಬರಾಜು ಮಾಡುವ ಯಾವುದೇ ಸಂಸ್ಥೆಗಳ ಸೇವೆಗಳು ಎಲ್‌ಪಿಜಿ ಸಾರ್ವಜನಿಕ ನೈರ್ಮಲ್ಯ ವಿಮೆ ಆಸ್ಪತ್ರೆ ಮತ್ತು ಔಷಧಾಲಯ ಬ್ಯಾಂಕು ಮತ್ತು ಹಣಕಾಸು ಸಂಸ್ಥೆ, ಶಿಕ್ಷಣ ಸಂಸ್ಥೆ ಗೃಹ ಮತ್ತು ರಿಯಲ್ ಎಸ್ಟೇಟ್‍ಗಳಿಗೆ ಸಂಬಂಧಿಸಿದ ಸಾರ್ವಜನಿಕ ಉಪಯುಕ್ತ ಸೇವೆಗಳ ಪ್ರಕರಣಗಳನ್ನು ಖಾಯಂ ಜನತಾ ನ್ಯಾಯಾಲಯದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ. ಇವುಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾರ್ವಜನಿಕ ಉಪಯುಕ್ತತಾ ಸೇವೆಗಳ ವಿಷಯಗಳು ಕೂಡ ಈ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ. ಇತರೆ ನ್ಯಾಯಾಲಯ ಹಾಗೂ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯಗಳಿಗಿಂತ ಖಾಯಂ ಜನತಾ ನ್ಯಾಯಾಲಯ ಭಿನ್ನವಾಗಿದೆ ಎಂದು ಹೇಳಿದರು.ಖಾಯಂ ಜನತಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಯಾವುದೇ ಶುಲ್ಕವಿರುವುದಿಲ್ಲ. ಅರ್ಜಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಪ್ರಕರಣ ದಾಖಲಿಸಬಹುದು. ಉಭಯ ಪಕ್ಷಗಾರರು ರಾಜೀ ಸಂಧಾನಕ್ಕೆ ಒಪ್ಪದಿದ್ದರೆ ವಿವಾದವನ್ನು ವಿಚಾರಣೆ ಮಾಡಿ ಕಾನೂನು ಆಧಾರದಲ್ಲಿ ತ್ವರಿತವಾಗಿ ತೀರ್ಪು ನೀಡಲಾಗುತ್ತದೆ. ಖಾಯಂ ಜನತಾ ನ್ಯಾಯಾಲಯದ ಡಿಕ್ರಿ ಅಥವಾ ತೀರ್ಪನ್ನು ಯಾವುದೇ ಸಿವಿಲ್ ಅಥವಾ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶ ಇರುವುದಿಲ್ಲ. ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ಮಾತ್ರ ಪ್ರಶ್ನಿಸಲು ಅವಕಾಶವಿರುತ್ತದೆ. ಜಿಲ್ಲಾ ನ್ಯಾಯಾಲಗಳ ಮೂಲಕ ಖಾಯಂ ಜನತಾ ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸಲಾಗುತ್ತದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅಧ್ಯಕ್ಷರಾಗಿ ಹಾಗೂ ಸಾರ್ವಜನಿಕ ಉಪಯುಕ್ತ ಸೇವೆಗಳಲ್ಲಿ ಅನುಭವ ಹೊಂದಿರುವ ಇಬ್ಬರು ನಾಮನಿರ್ದೇಶಿತ ಸದಸ್ಯರು ಖಾಯಂ ಜನತಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಮಾಹಿತಿ ನೀಡಿದರು.