ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬದುಕಿನ ಪರಿವರ್ತನೆಗಾಗಿ ಶಿಕ್ಷಣವೇ ಹೊರತು ಅಂಕ ಪಡೆಯಲು ಅಲ್ಲ ಎಂಬುದನ್ನು ಎಲ್ಲರೂ ಅಥೈಸಿಕೊಳ್ಳಬೇಕು. ಆಗ ಮಾತ್ರ ಮಾನವೀಯ ಮೌಲ್ಯಧಾರಿತ ಶಿಕ್ಷಣವಾಗುತ್ತದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.ನಗರ ಹೊರವಲಯದ ಎಸ್ ಜೆಸಿ ತಾಂತ್ರಿಕ ಕಾಲೇಜು ಆವರಣದ ಏರೋನಾಟಿಕಲ್ಸ್ ವಿಭಾಗದ ಬಿಜಿಎಸ್ ಸಭಾಂಗಣದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಶುಕ್ರವಾರ ಏರ್ಪಡಿಸಿದ್ದ ಶಿಕ್ಷಣ ಮಾನವೀಕರಣದತ್ತ ಒಂದು ಹೆಜ್ಜೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಕೇವಲ ಎರಡು ಅಂಕ ಕಡಿಮೆ ಬಂದಿತೆಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬದುಕಿಗೆ ಕೇವಲ ಅಂಕ ಗಳಿಕೆಯೇ ಮಾನದಂಡವಲ್ಲ ಎಂದರು.
ಸಕಾರಾತ್ಮಕ ಚಿಂತನೆಶಿಕ್ಷಣದ ಮೂಲಕ ಆತ್ಮವಿಶ್ವಾಸ, ಸ್ವಯಂ ನಿಯಂತ್ರಣ, ಹಾಗೂ ಸಕಾರಾತ್ಮಕ ಚಿಂತನೆಯನ್ನು ಬೆಳೆಸಬೇಕು. ಜೊತೆಗೆ ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಪ್ರೇರೇಪಿಸಬೇಕು. ವ್ಯಕ್ತಿಯಲ್ಲಿರುವ ಪರಿಪೂರ್ಣತೆಯನ್ನು ಹೊರತರುವುದೇ ಶಿಕ್ಷಣದ ಗುರಿ. ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಂಡು, ಸಮಗ್ರ ವ್ಯಕ್ತಿಯಾಗಿ ರೂಪುಗೊಳ್ಳುವುದೇ ಶಿಕ್ಷಣದ ಮೂಲ ಉದ್ದೇಶ. ನೈತಿಕ ಮೌಲ್ಯಗಳು, ಶಿಸ್ತು, ಮತ್ತು ಆತ್ಮಸಾಕ್ಷಾತ್ಕಾರವನ್ನು ಬೆಳೆಸುವ ಮೂಲಕ ಉತ್ತಮ ಚಾರಿತ್ರ್ಯರೂಪಿಸಬೇಕು ಎಂದರು.
ವ್ಯಕ್ತಿಯನ್ನು ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡುವುದು, ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧಪಡಿಸುವುದು. ಮೆದುಳಿಗೆ ಮಾಹಿತಿಯನ್ನು ತುಂಬುವುದಕ್ಕಿಂತಲೂ ಅದನ್ನು ಅರಗಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಕ್ರಿಯೆಯೇ ಶಿಕ್ಷಣ ವಾಗಿದೆ. ಮಕ್ಕಳಿಗೆ ಸಕಾರಾತ್ಮಕ ಶಿಕ್ಷಣವನ್ನು ನೀಡಬೇಕು, ಇದರಿಂದ ಅವರು ಆತ್ಮವಿಶ್ವಾಸ ಮತ್ತು ಆತ್ಮಗೌರವವನ್ನು ಬೆಳೆಸಿಕೊಳ್ಳುತ್ತಾರೆ. ಭೌತಿಕ ಪ್ರಗತಿಯೊಂದಿಗೆ ಆಧ್ಯಾತ್ಮಿಕ ಶಕ್ತಿಯನ್ನು ಬೆಸೆಯುವ ಶಿಕ್ಷಣಕ್ಕೆ ಒತ್ತು ನೀಡಿಬೇಕು ಎಂದರು.ಕಲಿತು ವಿದ್ಯೆ ಉಳಿಯಬೇಕು
ಕೊಠಡಿಯಲ್ಲಿ ಕಲಿತ ವಿದ್ಯೆಯ ಸಾರ ನಿಮ್ಮಲ್ಲಿ ಉಳಿಯಲಿಲ್ಲಾ ಎಂದರೆ ಅದು ವಿದ್ಯೆ ಅಲ್ಲಾ. ತರಗತಿಯಲ್ಲಿ ಕಲಿತದನ್ನು ಎಲ್ಲಾ ಮರೆತರೂ ಕೊನೆಯಲ್ಲಿ ನಿಮ್ಮಲ್ಲಿ ಉಳಿಯುವುದೇ ವಿದ್ಯೆ. ವಿದ್ಯೇಯು ಸಮಾಜ ಮತ್ತು ಮಾನವೀಯತೆಯನ್ನು ಉಳಿಸುವ ಪರಿಮಳವಾಗ ಬೇಕೆ ಹೊರತು ಮಾನವೀಯತೆ ಮರೆಯುವ ದುರ್ಗಂಧವಾಗಬಾರದು. ಸಮಾಜದ ಮತ್ತು ಜಗತ್ತಿನನ ಮಾನವ ಕುಲದ ಅಭ್ಯುದಯಕ್ಕಾಗಿ ವಿಜ್ಞಾನಿಗಳು ಕಂಡು ಹಿಡಿದ ಸೂತ್ರಗಳು ಉತ್ತಮ ನಿಸ್ವಾರ್ಥರ ಕೈಗೆ ಸಿಗಬೇಕೆ ಹೊರತು ಕೆಟ್ಟವ್ಯೆಕ್ತಿಗಳ ಕೈಗೆ ಸಿಗಬಾರದು ಎಂದರು.ಮಾನವೀಯತೆಯ ಮೌಲ್ಯ
ಹಾಗೇನಾದರೂ ಕೆಟ್ಟ ವ್ಯಕ್ತಿಗಳ ಕೈಗೆ ಸಿಕ್ಕರೆ ಜಗತ್ತು ಸರ್ವನಾಶ ವಾಗುತ್ತದೆ. ಉದಾಹರಣೆಗೆ ವಿಜ್ಞಾನಿಗಳು ಅಣು ವಿಕಿರಣ ಕಂಡು ಹಿಡಿದು ಅಣುವಿನಿಂದ ಜಗತ್ತಿಗೆ ಬೆಳಕು ಮತ್ತು ಶಕ್ತಿ ನೀಡಬಹುದು ಎಂಬುದನ್ನು ತೋರಿಸಿದರು. ಆದರೆ ಕೆಲವರು ಇದರಿಂದ ಬೆಳಕು ಮತ್ತು ಶಕ್ತಿಯನ್ನು ದೇಶಗಳ ಹಾಗೂ ಮಾನವರ ಅಭಿವೃಧ್ಧಿಗೆ ಬಳಸಿದರೆ ಇನ್ನೂ ಕೆಲವರು ಅಣು ಬಾಂಬು ತಯಾರಿಸಿ ವಿಶ್ವದ ನಾಶಕ್ಕೆ ತಯಾರಾಗಿದ್ದಾರೆ. ಯಾವ ವ್ಯಕ್ತಿಗೆ ತಾನು ಸಮಾಜಕ್ಕೆ ಮತ್ತು ಜಗತ್ತಿಗೆ ಒಳಿತು ಮಾಬೇಕೆನ್ನುವ ದೈವತ್ವ ಇರುತ್ತದೋ ಆ ಸಂದರ್ಭದಲ್ಲಿ ಮಾತ್ರ ಮಾನವೀಯ ಶಿಕ್ಷಣ ಮೌಲ್ಯವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿವಿಯ ಕುಲಪತಿ ಡಾ.ನಿರಂಜನ ವಾನಳ್ಳಿ, ಕುಲ ಸಚಿವರಾದ ಡಾ.ಎನ್.ಲೋಕನಾಥ್, ಸಿ.ಎನ್.ಶ್ರೀಧರ್, ಲೆಕ್ಕಾಧಿಕಾರಿ ವಸಂತ್ ಕುಮಾರ್, ಸಿಂಡಿಕೇಟ್ ಸದಸ್ಯರಾದ ನಿರೂಪ್,ಅರ್ಭಾಜ್,ಗೋಪಾಲಗೌಡ, ಭವತಾರಿಣಿಆಶ್ರಮದ ಅಧ್ಯಕ್ಷೆ ಮಾತಾ ವಿವೇಕಮಯಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ. ಪ್ರಾಂಶುಪಾಲ ಡಾ. ಜಿ.ಪಿ.ಬಾಹುಬಲಿ, ಪ್ರಾಧ್ಯಾಪಕ ಡಾ.ಶಂಕರ್, ವಿದ್ಯಾರ್ಥಿಗಳು ಇದ್ದರು.