2030ರ ವೇಳೆಗೆ ಭಾರತದಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚಾಗಲಿದೆ: ಡಾ.ಸಿ.ಎನ್. ಮಂಜುನಾಥ್

KannadaprabhaNewsNetwork | Published : Feb 26, 2024 1:34 AM

ಸಾರಾಂಶ

ಪ್ರಚಲಿತ ವಿದ್ಯಾಮಾನದಲ್ಲಿ ಶೇ.65 ಸಾವುಗಳಿಗೆ ಜೀವನಶೈಲಿಯ ಕಾಯಿಲೆಗಳೇ ಕಾರಣವಾಗುತ್ತಿವೆ. 2030 ರ ವೇಳೆಗೆ ಭಾರತವು ಅತಿ ಹೆಚ್ಚು ಹೃದಯಾಘಾತ ಪ್ರಕರಣಗಳಿಗೆ ಸಾಕ್ಷಿಯಾಗಲಿದ್ದು, ನಿಮಿಷಕ್ಕೆ ನಾಲ್ಕು ಮಂದಿ ಮರಣ ಹೊಂದಲಿದ್ದಾರೆ. ಇದು ಆತಂಕಕಾರಿ ಸಂಗತಿಯಾಗಿದೆ ಎಂದು ಡಾ. ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಪ್ರಸ್ತುತ ಕಾಲಘಟ್ಟದಲ್ಲಿ ವಾಯುಮಾಲಿನ್ಯ ಮತ್ತು ಒತ್ತಡದ ಬದುಕು ಹೆಚ್ಚಿನ ಕಾಯಿಲೆಗಳಿಗೆ ರಹದಾರಿಯಾಗುತ್ತಿವೆ. ಕೆಲಸದ ಒತ್ತಡದ ಪರಿಣಾಮದಿಂದಲೇ ಶೇಕಡ 23ರಷ್ಟು ಮಂದಿ ಹೃದಯಾಘಾತಕ್ಕೊಳಗಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಬೆಂಗಳೂರು ಶ್ರೀಜಯದೇವ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯೋವ್ಯಾಸ್ಕುಲರ್ ಸೈನ್ಸಸ್ ಇದರ ವಿಶ್ರಾಂತ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಶನಿವಾರ ಡಾ. ಅಮರನಾಥ್ ಹೆಗ್ಡೆ ಅವರ ಸ್ಮರಣಾರ್ಥ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪ್ರೊಫೈಲ್ ಆಫ್ ಹಾರ್ಟ್ ಡಿಸೀಸಸ್’ ಎಂಬ ವಿಷಯದ ಕುರಿತು ಮಾತನಾಡಿದರು.

ಪ್ರಚಲಿತ ವಿದ್ಯಾಮಾನದಲ್ಲಿ ಶೇ.65 ಸಾವುಗಳಿಗೆ ಜೀವನಶೈಲಿಯ ಕಾಯಿಲೆಗಳೇ ಕಾರಣವಾಗುತ್ತಿವೆ. 2030 ರ ವೇಳೆಗೆ ಭಾರತವು ಅತಿ ಹೆಚ್ಚು ಹೃದಯಾಘಾತ ಪ್ರಕರಣಗಳಿಗೆ ಸಾಕ್ಷಿಯಾಗಲಿದ್ದು, ನಿಮಿಷಕ್ಕೆ ನಾಲ್ಕು ಮಂದಿ ಮರಣ ಹೊಂದಲಿದ್ದಾರೆ. ಇದು ಆತಂಕಕಾರಿ ಸಂಗತಿಯಾಗಿದೆ ಎಂದರು.

ಇಂದು ನಗರದಲ್ಲಿ ವಾಸಿಸುವರ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದೆ ಶೇ.80ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದರೆ ಶೇ.20 ರಷ್ಟು ಮಂದಿ ನಗರದಲ್ಲಿದ್ದರು. ಆದರೆ ಈಗ ಇದರ ಪ್ರಮಾಣ 60/ 40 ರಷ್ಟಾಗಿದೆ. ನಗರವಾಸಿಗಳಲ್ಲಿ ದೈಹಿಕ ವ್ಯಾಯಾಮ ಕ್ಷಮತೆಗಳು ಕಡಿಮೆಯಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಭಾರತೀಯ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಮರೆಯಾಗಿರುವುದು ಕೂಡಾ ಇದಕ್ಕೆ ಪ್ರಮಖ ಕಾರಣವಾಗಿದೆ ಎಂದರು.

ಡಿಜಿಟಲ್ ಮೆಡಿಕಲ್ ಪ್ರಾಕ್ಟೀಸ್ ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳಿಗೆ ಕಾರಣವಾಗಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪರಂಪರೆಯ ಪ್ರಾಯೋಗಿಕ ವಿಧಾನದ ಮಹತ್ವವನ್ನೂ ನಾವು ಅರಿತಿರಬೇಕಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ ಮತ್ತು ಅನುಭವ ಪ್ರಮುಖವಾಗಿರುತ್ತದೆ. ಪ್ರಸ್ತುತ ಆಧುನಿಕತೆಯಲ್ಲಿ ಎದುರಾಗಿರುವ ಸವಾಲುಗಳನ್ನು ಎದುರಿಸಿ ಮುನ್ನಡೆಯುವಲ್ಲಿ ಯುವ ವೈದ್ಯಕೀಯ ವಿದ್ಯಾರ್ಥಿಗಳ‌ಪಾತ್ರ ಮಹತ್ತರವಾದುದು ಎಂದರು.

ನಿಟ್ಟೆ ಪರಿಗಣಿತ ವಿ.ವಿ ಉಪಕುಲಾಧಿಪತಿ ಪ್ರೊ.ಎನ್.ಶಾಂತಾರಾಮ್ ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಎಂ.ಎಸ್. ಮೂಡಿತ್ತಾಯ, ವೈದ್ಯಕೀಯ ಕಾಲೇಜುಗಳ ಡೀನ್ ಡಾ.ಪಿ.ಎಸ್ ಪ್ರಕಾಶ್, ಕುಲಸಚಿವ ಹರ್ಷ ಹಾಲಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.

Share this article