ಹೃದಯಾಘಾತ: ತರಬೇತಿದಾರರಿಗೆ ತರಬೇತಿ!

KannadaprabhaNewsNetwork |  
Published : Jul 11, 2025, 12:31 AM IST
ಕೆಎಂಸಿಆರ್‌ಐ | Kannada Prabha

ಸಾರಾಂಶ

ಈ ಯೋಜನೆಗೆ ಹುಬ್ಬಳ್ಳಿ ಕೆಎಂಸಿಆರ್‌ಐ, ಕಲಬುರ್ಗಿ ಹಾಗೂ ಬೆಂಗಳೂರಿನ ಸಂಜಯಗಾಂಧಿ ಟ್ರಾಮಾ ಸೆಂಟರ್‌ಗಳು ಆಯ್ಕೆಯಾಗಿದ್ದವು. ಹುಬ್ಬಳ್ಳಿಯಲ್ಲಿ 2023ರಲ್ಲಿ ಈ ಯೋಜನೆ ಪ್ರಾರಂಭವಾಗಿದೆ. ಈವರೆಗೆ ವಿವಿಧ ವೈದ್ಯಕೀಯ ಕಾಲೇಜುಗಳ ವೈದ್ಯರಿಗೆ, ದಾದಿಯರಿಗೆ, ಪೊಲೀಸರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡುತ್ತಾ ಬರುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹೃದಯಾಘಾತ ಪ್ರಕರಣಗಳಿಂದ ಇಡೀ ರಾಜ್ಯವೇ ತಲ್ಲಣಗೊಳ್ಳುತ್ತಿದೆ. ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರಿಗೆ, ವೈದ್ಯರಿಗೆ ಕೆಎಂಸಿಆರ್‌ಐನಲ್ಲಿ ಎಮರ್ಜೆನ್ಸಿ ಲೈಫ್‌ ಸಪೋರ್ಟ್‌ ಎಂಬ ವಿಶೇಷದಲ್ಲಿ ತರಬೇತಿ ಶಿಬಿರ ನಡೆಸಲಿದೆ.

ಕೇಂದ್ರ ಸರ್ಕಾರದ ನ್ಯಾಷನಲ್‌ ಎಮೆರ್ಜೆನ್ಸಿ ಲೈಫ್‌ ಸಪೋರ್ಟ್‌ (ನೆಲ್ಸ್‌) ಕಾರ್ಯಕ್ರಮದಡಿ ಜು. 21ರಿಂದ 25ರ ವರೆಗೆ 5 ವೈದ್ಯಕೀಯ ಕಾಲೇಜುಗಳ 24 ವೈದ್ಯರಿಗೆ ಈ ತರಬೇತಿ ನೀಡಲಾಗುತ್ತಿದೆ. ಹಾಗೆ ನೋಡಿದರೆ ಕಳೆದ 2 ವರ್ಷದಿಂದ ಆಗಾಗ ಈ ತರಬೇತಿ ನೀಡುತ್ತಿದೆ. ಆದರೆ, ಇದೀಗ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ಮಹತ್ವ ಬಂದಂತಾಗಿದೆ. ತರಬೇತಿದಾರರಿಗೆ ತರಬೇತಿ ಎಂಬ ಘೋಷವಾಕ್ಯದೊಂದಿಗೆ ಈ ಶಿಬಿರ ನಡೆಸಲು ಕೆಎಂಸಿಆರ್‌ಐ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಏನಿದು ಕಾರ್ಯಕ್ರಮ: ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2015ರಲ್ಲಿ ನ್ಯಾಷನಲ್‌ ಎಮೆರ್ಜೆನ್ಸಿ ಲೈಫ್‌ ಸಪೋರ್ಟ್‌ ಎಂಬ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಗೆ ಹುಬ್ಬಳ್ಳಿ ಕೆಎಂಸಿಆರ್‌ಐ, ಕಲಬುರ್ಗಿ ಹಾಗೂ ಬೆಂಗಳೂರಿನ ಸಂಜಯಗಾಂಧಿ ಟ್ರಾಮಾ ಸೆಂಟರ್‌ಗಳು ಆಯ್ಕೆಯಾಗಿದ್ದವು. ಹುಬ್ಬಳ್ಳಿಯಲ್ಲಿ 2023ರಲ್ಲಿ ಈ ಯೋಜನೆ ಪ್ರಾರಂಭವಾಗಿದೆ. ಈವರೆಗೆ ವಿವಿಧ ವೈದ್ಯಕೀಯ ಕಾಲೇಜುಗಳ ವೈದ್ಯರಿಗೆ, ದಾದಿಯರಿಗೆ, ಪೊಲೀಸರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡುತ್ತಾ ಬರುತ್ತಿದೆ.

ಮೂರು ಬಗೆಯಲ್ಲಿ ತರಬೇತಿ ನೀಡಲಾಗುತ್ತದೆ. ಇಎಲ್‌ಎಸ್‌ (ಎಮಜೆನ್ಸಿ ಲೈಫ್‌ ಸಪೋರ್ಟ್‌) ಇದು ವೈದ್ಯರಿಗೆ, ಕಿರಿಯ ವೈದ್ಯರಿಗೆ ನೀಡುವ ತರಬೇತಿ, ಇಎನ್‌ಎಲ್‌ಎಸ್‌ ನರ್ಸ್‌ಗಳಿಗೆ ನೀಡುವ ತರಬೇತಿ ಇದು. ಇನ್ನು ಬಿಎಲ್‌ಎಸ್‌ ಅಂದರೆ ಬೇಸಿಕ್ ಲೈಫ್‌ ಸಪೋರ್ಟ್‌ ಅಂತರ್ಥ. ಇದನ್ನು ಸಾರ್ವಜನಿಕರಿಗೆಲ್ಲ ನೀಡುವ ತರಬೇತಿಯಾಗಿದೆ. ರಸ್ತೆ ಅಪಘಾತ, ಹೃದಯಾಘಾತ ಹೀಗೆ ತುರ್ತು ಪರಿಸ್ಥಿತಿಯಲ್ಲಿ ಯಾವ ರೀತಿ ಪರಿಸ್ಥಿತಿಯನ್ನು ನಿಭಾಯಿಸಬೇಕು. ಏನೇನು ಕ್ರಮ ಕೈಗೊಳ್ಳುವ ಮೂಲಕ ಜನರ ಬದುಕನ್ನು ಉಳಿಸಬಹುದು ಎಂಬುದರ ಬಗ್ಗೆ ತರಬೇತಿ ನೀಡುವುದಾಗಿದೆ.

ತರಬೇತಿದಾರರಿಗೆ ತರಬೇತಿ: ಹಾಗೆ ನೋಡಿದರೆ ವೈದ್ಯರು, ಪ್ರಾಧ್ಯಾಪಕರಿಗೆ ಕಲಿಸುವ ಅಗತ್ಯವೇನು?. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅವರೇ ತರಬೇತಿ ನೀಡುತ್ತಾರೆ. ಅವರಿಗೆಂಥ ತರಬೇತಿ ಎಂಬ ಪ್ರಶ್ನೆಯೂ ಬರುತ್ತದೆ. ಆದರೂ ಕೆಲವೊಂದಿಷ್ಟು ಕೌಶಲ್ಯಗಳು ಬೇಕಾಗುತ್ತದೆ. ಥೆರಾಟಿಕಲಿ ಹೆಚ್ಚಾಗಿ ಕಲಿತಿರುತ್ತಾರೆ. ಅವರಿಗೆ ಸ್ಟ್ರಕ್ಚರ್‌ ತರಬೇತಿ ಅಗತ್ಯವಿರುತ್ತದೆ. ಆ ಸ್ಟ್ರಕ್ಚರ್‌ ತರಬೇತಿ ಇಲ್ಲಿ ನೀಡಲಾಗುತ್ತದೆ. ಇದಕ್ಕೆ ಇಎಲ್‌ಎಸ್‌ ತರಬೇತಿ ಎಂದು ಕರೆಯಲಾಗುತ್ತದೆ. ಅದನ್ನೇ ವೈದ್ಯರಿಗೆ ನೀಡುತ್ತೇವೆ ಎಂದು ಇಲ್ಲಿನ ತಂಡ ತಿಳಿಸುತ್ತದೆ.

ಜು. 21 ರಿಂದ ನಡೆಯುವ ತರಬೇತಿಯಲ್ಲಿ ಹಾವೇರಿ, ಗದಗ, ಕೊಪ್ಪಳ, ಉತ್ತರ ಕನ್ನಡ, ರಾಯಚೂರು, ಮೈಸೂರು ಸೇರಿದಂತೆ ಏಳು ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳ ವೈದ್ಯರು, ಪ್ರಾಧ್ಯಾಪಕರು ಪಾಲ್ಗೊಳ್ಳಲಿದ್ದಾರೆ. ಇದೀಗ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಈ ತರಬೇತಿಯಲ್ಲಿ ಹೃದಯಾಘಾತ, ಹೃದಯಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸುತ್ತವೆ. ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರಿಗೆ ಹೆಚ್ಚಿನ ಕೌಶಲ್ಯ ಕಲಿಸಿದರೆ ಅವರು ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ ಎಂಬುದು ಈ ತರಬೇತಿಯ ಉದ್ದೇಶ.

ಹೆಚ್ಚೆಚ್ಚು ಜಾಗೃತಿ: ಇದು ವೈದ್ಯಕೀಯ ಕಾಲೇಜುಗಳ ಪ್ಯಾಕಲ್ಟಿಗಳಿಗೆ ನಡೆದರೆ, ಸಾರ್ವಜನಿಕರಿಗೆ, ವಿವಿಧ ಕಾಲೇಜ್‌ಗಳ ವಿದ್ಯಾರ್ಥಿಗಳಿಗೆ ಪೊಲೀಸರಿಗೆ ಹೃದಯಾಘಾತವಾದಾಗ ಹೆದರದೇ ಯಾವ ರೀತಿ ಜೀವ ಉಳಿಸಬಹುದು ಎಂಬುದರ ಕುರಿತು ಜಾಗೃತಿ ಹಾಗೂ ತರಬೇತಿ ನೀಡಲಾಗುತ್ತದೆ. ಈಗ ಹೆಚ್ಚಿನ ಹೃದಯಾಘಾತ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಇವುಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ನೆಲ್ಸ್‌ ಯೋಜನೆಯ ನೋಡಲ್‌ ಅಧಿಕಾರಿ ತಿಳಿಸುತ್ತಾರೆ.

ಒಟ್ಟಿನಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಗಟ್ಟಲು ಕೆಎಂಸಿಆರ್‌ಐನ ನೆಲ್ಸ್‌ ಕೂಡ ಜಾಗೃತಿ ಹಾಗೂ ತರಬೇತಿ ನೀಡಲು ಮುಂದಾಗಿರುವುದು ಮೆಚ್ಚುಗೆಯ ವಿಷಯ ಎಂಬುದಂತೂ ಸತ್ಯ.

ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರಿಗೆ, ವೈದ್ಯರಿಗೆ ಎಮೆರ್ಜೆನ್ಸಿ ಲೈಫ್‌ ಸಪೋರ್ಟ್‌ ಎಂಬ ತರಬೇತಿ ನೀಡಲಾಗುತ್ತಿದೆ. ಜು. 21ರಿಂದ 25ರ ವರೆಗೆ ಕೆಎಂಸಿಆರ್‌ಐನಲ್ಲಿ ನಡೆಯುತ್ತದೆ. ಕೇಂದ್ರ ಸರ್ಕಾರದ ನೆಲ್ಸ್‌ ಯೋಜನೆಯಡಿ ಈ ಕಾರ್ಯಕ್ರಮ ನಡೆಯಲಿದೆ ಕೆಎಂಸಿಆರ್‌ಐನ ನಿರ್ದೇಶಕ ಡಾ. ಈಶ್ವರ ಹೊಸಮನಿ ಹೇಳಿದರು.2023ರಿಂದಲೇ ಈ ರೀತಿ ತರಬೇತಿ ನೀಡಲಾಗುತ್ತದೆ. ಆದರೆ, ಇದೀಗ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಿಶೇಷ ಎನಿಸಿದೆ. ನಾವೂ ಹೃದಯಾಘಾತದಂಥ ಪ್ರಕರಣಗಳಿಗೆ ಹೆಚ್ಚಿನ ಒತ್ತು ನೀಡಿ ತರಬೇತಿ ನೀಡುತ್ತಿದ್ದೇವೆ. ಜತೆಗೆ ಹೃದಯಾಘಾತ ಆದಾಗ ಯಾವ ರೀತಿ ಪರಿಸ್ಥಿತಿ ನಿಭಾಯಿಸಬೇಕು. ಜೀವ ಉಳಿಸಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಸಾರ್ವಜನಿಕರಿಗೂ ತರಬೇತಿ ನೀಡಲಾಗುವುದು ಎಂದು ಕೆಎಂಸಿಆರ್‌ಐ ನೆಲ್ಸ್‌ ಸೆಂಟರ್‌ನ ನೋಡಲ್‌ ಆಫೀಸರ್‌ ಡಾ. ಎಸ್‌.ವೈ. ಮುಲ್ಕಿ ಪಾಟೀಲ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಪ್ರಿಮ್‌ ಶಾಲೆಯಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಸಂಭ್ರಮೋತ್ಸವ
ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಂತಾಪ