ಹೃದಯಾಘಾತಕ್ಕೆ ತುತ್ತಾದವನು ಚಿಕಿತ್ಸೆ ದೊರೆಯದ ಆಸ್ಪತ್ರೆಯಲ್ಲಿ ಸಾವು

KannadaprabhaNewsNetwork |  
Published : Dec 01, 2025, 01:15 AM IST
ಪೋಟೋ೩೦ಸಿಎಲ್‌ಕೆ೦೧ ಮೃತ ನಾಗರಾಜು ಭಾವಚಿತ್ರ. | Kannada Prabha

ಸಾರಾಂಶ

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಆರೋಗ್ಯ ಸಮುದಾಯದ ಕೇಂದ್ರದ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ನಾಯಕನಹಟ್ಟಿ ಗ್ರಾಮದ 8ನೇ ವಾರ್ಡ್‌ನಲ್ಲಿ ವಾಸವಿರುವ ಗುತ್ತಿಗೆದಾರ ಎಸ್.ನಾಗರಾಜ (52) ಎಂಬುವವರಿಗೆ ಭಾನುವಾರ ಬೆಳಗ್ಗೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಕುಟುಂಬದವರು ಅವರನ್ನು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಚಿಕಿತ್ಸೆ ದೊರೆಯದೆ ನಾಗರಾಜ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದು ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರಲ್ಲದೆ, ಮೃತ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆ ನಿರತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ಯಾವುದೇ ವೈದ್ಯರು ಕರ್ತವ್ಯ ನಿರ್ವಹಿಸುವುದಿಲ್ಲ, ವೈದ್ಯರು ಆಸ್ಪತ್ರೆಯಲ್ಲಿ ಇರದ ಕಾರಣ ರೋಗಿಗೆ ಚಿಕಿತ್ಸೆ ದೊರೆಯಲಿಲ್ಲ, ವೈದ್ಯರ ನಿರ್ಲಕ್ಷದಿಂದಲೇ ಸಾವು ಸಂಭವಿಸಿದೆ. ಮೃತನ ಕುಟುಂಬ ಶೋಕಸಾಗರದಲ್ಲಿ ಮುಳುಗಿದ್ದು ಅವರ ನೋವಿಗೆ ಸರ್ಕಾರ ಸ್ಪಂದಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸುದ್ದಿ ತಿಳಿದ ಕೂಡಲೇ ಡಿಎಚ್‌ಒ ಡಾ.ರೇಣುಪ್ರಸಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅಭಿನವ್, ತಾಲೂಕು ವೈದ್ಯಾಧಿಕಾರಿ ಡಾ.ಕಾಶಿ ಸ್ಥಳಕ್ಕೆ ಭೇಟಿನೀಡಿ ಮೃತಕುಟುಂಬ ಹಾಗೂ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರಲ್ಲದೆ, ಆದ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು ಮುಂದಿನ ದಿನಗಳಲ್ಲಿ ಇಂತಹ ಲೋಪವಾಗದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡಿದರು. ದೂರು ನೀಡಿದಲ್ಲಿ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಹೋಬಳಿ ಘಟಕ ಅಧ್ಯಕ್ಷ ಇ.ನಾಗರಾಜ್ ಮಾತನಾಡಿ, ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 48 ಗ್ರಾಮಗಳಿದ್ದು ಪ್ರತಿನಿತ್ಯವೂ ಬೆಳಗಿನಿಂದ ಸಂಜೆವರೆಗೂ ನೂರಾರು ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾವಿಸುತ್ತಾರೆ. ಬಹುತೇಕ ಸಂದರ್ಭದಲ್ಲಿ ವೈದ್ಯರು ಇರುವುದಿಲ್ಲ. ವಿಶೇಷವಾಗಿ ರಾತ್ರಿ ವೇಳೆ ಯಾವುದೇ ಅನಾಹುತ ಸಂಭವಿಸಿದರೂ ಚಳ್ಳಕೆರೆ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಆದ್ದರಿಂದ ಈ ಆಸ್ಪತ್ರೆಗೆ ಹೆಚ್ಚುವರಿ ವೈದ್ಯರು ಹಾಗೂ ಸಿಬ್ಬಂದಿ ನೇಮಿಸಬೇಕು. ಮೃತಪಟ್ಟ ರೋಗಿ ಕುಟುಂಬಕ್ಕೆ ನೆರವು ನೀಡಬೇಕೆಂದರು ಆಗ್ರಹಿಸಿದರು.

ವೈದ್ಯಾಧಿಕಾರಿ ಸಚಿನ್, ಪಿಎಸ್‌ಐ ಜಿ.ಪಾಂಡುರಂಗ, ಗ್ರಾಮದ ಮುಖಂಡರಾದ ಆರ್.ಶ್ರೀಕಾಂತ್, ಟಿ.ಶಿವದತ್ತ, ಬಸವರಾಜ, ನರಸಿಂಹಮೂರ್ತಿ, ಸೋಮಶೇಖರಪ್ಪ, ಎಸ್.ಕೃಷ್ಣಮೂರ್ತಿ, ತಾರಕೇಶ್ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಗಾಗಿ ಆಗ್ರಹಿಸಿ ಗೋಕಾಕ ಬಂದ್‌ ಇಂದು
ಒಂದೇ ಸಂಸ್ಥೆಯಿಂದ 50 ಜನ ಅಗ್ನಿವೀರರಾಗಿ ಆಯ್ಕೆ