ಕನ್ನಡಪ್ರಭ ವಾರ್ತೆ ಧಾರವಾಡ
ಇಲ್ಲಿಯ ಜೆಎಸ್ಸೆಸ್ ಸಂಸ್ಥೆಯಲ್ಲಿ ಸೇವಾ ನಿವೃತ್ತಿಯಾದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿನದತ್ತ ಹಡಗಲಿ ಅವರಿಗೆ ಸನ್ನಧಿ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಅಭಿನಂದನೆ ಹಾಗೂ ಸ್ನೇಹಸಿಂಧು ಗ್ರಂಥ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಸಾನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಜಿನದತ್ತ ಹಡಗಲಿ ಅವರು ಸ್ನೇಹಜೀವಿಯಾಗಿ, ಸದಾ ಹಸನ್ಮುಖಿಯಾಗಿ, ಮಧುರ ಮಾತುಗಳಿಂದ ಕೂಡಿದ ಅವರ ಆದರ್ಶ ವ್ಯಕ್ತಿತ್ವ ಬೆಲ್ಲದ ಅಚ್ಚಿದ್ದಂತೆ. ಡಾ. ಜಿನದತ್ತ ಹಡಗಲಿ ಅವರ ವೈಚಾರಿಕ ಕೃತಿಯಾದ ಸಿಂಚನ ವಿವಿಧ ವಿಷಯಗಳನ್ನು ಒಳಗೊಂಡ ಬಾನುಲಿ ಭಾಷಣಗಳ ಸಂಕಲನದ ಕೃತಿಯಾಗಿದ್ದು, ಜೀವನ ಮೌಲ್ಯ ಕಾಯಕ ತತ್ವ, ಸಂಘಟನೆಯಲ್ಲಿ ಯುವಕರು, ಗರತಿಯ ಗಮ್ಮತ್ತು ಹೀಗೆ ವಿವಿಧ ವಿಷಯಗಳನ್ನು ಒಳಗೊಂಡ ಲೇಖನಗಳು ಇದರಲ್ಲಿವೆ. ಇವತ್ತಿನ ಜನಾಂಗಕ್ಕೆ ಇವು ಉಪಯುಕ್ತ ಕೊಡುಗೆಯಾಗಿವೆ ಎಂದರು.
ಡಾ. ಜಿನದತ್ತ ಅವರ ಕೃತಿ ಜಿನಪರ್ವವು ಏಳು ಬಗೆಯ ಲೇಖನ ಒಳಗೊಂಡಿದೆ. ಈ ಕೃತಿಯು ಜೈನ ಧರ್ಮದ ಇತಿಹಾಸ, ಜೈನ ಧರ್ಮದ ಮುನಿಗಳು, ಜೈನ ಧರ್ಮದ ತತ್ವಗಳು ಹೀಗೆ ಅನೇಕ ವಿಚಾರಗಳನ್ನು ಈ ಕೃತಿಯಲ್ಲಿ ನೋಡಬಹುದಾಗಿದೆ ಎಂದು ಸಾಹಿತಿ ಡಾ. ವೈ.ಎಂ.ಯಾಕೊಳ್ಳಿ ಮಾತನಾಡಿದರು.ಹಡಗಲಿ ಅವರ ಸಂಪಾದಿತ ಕೃತಿಗಳ ಕುರಿತು ಡಾ. ಅರ್ಜುನ ಗೊಳಸಂಗಿ ಮಾತನಾಡಿದರು. ಇವರ ಸಂಪಾದಿತ ಕೃತಿಗಳಲ್ಲಿ ವಿಷಯ ವಸ್ತುಗಳ ವಿಂಗಡಣೆ, ಪ್ರಸ್ತಾವನೆ, ನಿರೂಪಣೆ, ದೃಷ್ಟಿಯಿಂದ ಇವರ ಸಂಪಾದಿತ ಕೃತಿಗಳು ಮಹತ್ವದ್ದಾಗಿವೆ. ಸಚ್ಚಾರಿತ, ಸಾಹಿತ್ಯ ಪರಿಚಾರಕ, ಸಮಾಜರತ್ನ ಹೀಗೆ ಇನ್ನೂ ಅನೇಕ ಕೃತಿಗಳು ಇವರ ಸಂಪಾದಕತ್ವದಲ್ಲಿ ಮೂಡಿ ಬಂದಿವೆ.
ವಜ್ರದರ್ಶನ ಅವಲೋಕನ, ಮಗಳಿಗೊಂದು ಪತ್ರ, ಧರ್ಮಾಧಿಕಾರಿಗಳು ನುಡಿದಂತೆ, ಚೆನ್ನುಡಿಯ ಏಳು ಭಾಗಗಳು ಸೇರಿದಂತೆ ಇನ್ನಿತರ ಕೃತಿಗಳು ಇವರ ಸಹ ಸಂಪಾದಕತ್ವದಲ್ಲಿ ಮೂಡಿಬಂದಿವೆ. ಪಠ್ಯ ಪುಸ್ತಕ ಸಂಪಾದನಾ ಜವಾಬ್ದಾರಿಯನ್ನು ಸಹ ಇವರು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಯಾಕೊಳ್ಳಿ ನುಡಿದರು.ಹಡಗಲಿ ಅವರ ಬಾನುಲಿ ಬರಹಗಳು ಬಹಳ ಅರ್ಥಪೂರ್ಣವಾಗಿವೆ. ಅವುಗಳಲ್ಲಿ ಬಳಕೆಯಾದ ಶಬ್ಧ ಪ್ರಯೋಗ, ವಿಷಯ ವಸ್ತು, ವಿಷಯ ಸಮಗ್ರತೆಯ ದೃಷ್ಟಿಯಿಂದ ಇವರ ಬಾನುಲಿ ಬರಹಗಳು ವಿಶಿಷ್ಚವಾಗಿವೆ. ಜೊತೆಗೆ ನಾಟಕ ಕ್ಷೇತ್ರದಲ್ಲಿಯೂ ಹಡಗಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಸಾಹಿತಿ ಡಾ. ಶಶಿಧರ ನರೇಂದ್ರ ನುಡಿದರು.
ಸಾಹಿತಿ ಡಾ. ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ಅವರಿಗೆ ಶಿಕ್ಷಣ ನೀಡಿ ಮಾರ್ಗದರ್ಶನ ನೀಡುತ್ತ ಮುನ್ನಡೆಸಿದ ಗುರುಗಳಿಗೆ ಗುರುವಂದನೆ ಕಾರ್ಯಕ್ರಮ ಹಡಗಲಿ ಕುಟುಂಬದವರಿಂದ ನಡೆಯಿತು.ಡಾ. ಬಿ.ಎಂ. ಶರಭೇಂದ್ರ ನಿರೂಪಿಸಿದರು. ಡಾ. ಆರ್.ವಿ. ಪಾಟೀಲ ಸ್ವಾಗತಿಸಿದರು. ಡಾ. ಶಿವಾನಂದ ಟವಳಿ ಗುರುವಂದನೆ ನಡೆಸಿಕೊಟ್ಟರು. ಡಾ. ಸಂಗಯ್ಯ ಶಿವಪ್ಪಯ್ಯನಮಠ ವಂದಿಸಿದರು.