ಪುಸ್ತಕ ಓದು ಉನ್ನತ ಸ್ಥಾನಕ್ಕೇರಿಸುತ್ತದೆ: ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್

KannadaprabhaNewsNetwork | Published : Jul 8, 2024 12:38 AM

ಸಾರಾಂಶ

ನಾನು ಪುಸ್ತಕ ಓದಲು ಆರಂಭಿಸಿದ್ದೇ ನನ್ನ ತಾಯಿಯಿಂದ. ಆಕೆ ಪುಸ್ತಕಗಳನ್ನು ಎರವಲು ಪಡೆದು ಮನೆಗೆ ತರುತ್ತಿದ್ದಳು. ಆಕೆ ಇಷ್ಟೊಂದು ನೆಚ್ಚಿ ಓದುತ್ತಿದ್ದಾಳೆಂದರೆ. ಇದರಲ್ಲೇನಿದೆ ಎಂಬ ಕುತೂಹಲ ನನ್ನನ್ನು ಓದಿನತ್ತ ದೂಡಿತು. ಬೀಚಿ ನನ್ನ ನೆಚ್ಚಿನ ಲೇಖಕರಾದರು, ಅವರನ್ನು ಓದಿದ್ದು, ಜೀವನಕ್ಕೆ ಒಂದು ದಾರಿ ನೀಡಿತು.

ಕನ್ನಡಪ್ರಭ ವಾರ್ತೆ ಮೈಸೂರು

ಪುಸ್ತಕಗಳೊಂದಿಗಿನ ಓಡನಾಟ ನಿಮ್ಮನ್ನು ಉನ್ನತ ಸ್ಥಾನಕ್ಕೇರಿಸುತ್ತದೆ ಎಂದು ಹಾಸ್ಯಕಲಾವಿದ ಗಂಗಾವತಿ ಪ್ರಾಣೇಶ್‌ ಹೇಳಿದರು.

ನಗರದಲ್ಲಿ ನಡೆದ ಮೈಸೂರು ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನಗಿಸುವವನ ಮನದ ಮಾತು ಗೋಷ್ಠಿಯಲ್ಲಿ ತಮ್ಮ ಜೀವನದ ಅನೇಕ ಘಟನೆಗಳನ್ನು ತೆರೆದಿಡುತ್ತ, ತಾವು ಹಾಸ್ಯ ಜಗತ್ತಿಗೆ ಬಂದ ಕಥೆಯನ್ನು ಹೇಳಿದರು. ಒಂದೊಂದು ಅನುಭವಗಳ ಬಗ್ಗೆ ಮಾತನಾಡುತ್ತಲೇ, ತಣ್ಣನೆಯ ಹಾಸ್ಯವನ್ನು ತೇಲಿಬಿಟ್ಟರು.

ಗೋಷ್ಠಿ ನಿರ್ವಹಿಸುತ್ತಿದ್ದ ಲೇಖಕಿ ಮಾಧುರಿ ಕುಲಕರ್ಣಿ ಅವರು, ಹಾಸ್ಯ ಪ್ರಜ್ಞೆ ಎಂದರೆ ಏನು ಎಂದು ಪ್ರಶ್ನಿಸಿದಾಗ, ಮನುಷ್ಯ ಸ್ವತಃ ತನ್ನನ್ನೆ ಗಮನಿಸಿ ನಕ್ಕಾಗ ಅದು ಹಾಸ್ಯಪ್ರಜ್ಞೆ, ಇತರರನ್ನು ಗಮನಿಸಿ ನಕ್ಕರೆ ಅದು ಕ್ರೂರವಾಗುತ್ತದೆ. ಸ್ವವಿಮರ್ಶೆಯ ಲವಲವಿಕೆಯ ರೂಪವೇ ಹಾಸ್ಯ ಎಂದರು.

ನಾನು ಪುಸ್ತಕ ಓದಲು ಆರಂಭಿಸಿದ್ದೇ ನನ್ನ ತಾಯಿಯಿಂದ. ಆಕೆ ಪುಸ್ತಕಗಳನ್ನು ಎರವಲು ಪಡೆದು ಮನೆಗೆ ತರುತ್ತಿದ್ದಳು. ಆಕೆ ಇಷ್ಟೊಂದು ನೆಚ್ಚಿ ಓದುತ್ತಿದ್ದಾಳೆಂದರೆ. ಇದರಲ್ಲೇನಿದೆ ಎಂಬ ಕುತೂಹಲ ನನ್ನನ್ನು ಓದಿನತ್ತ ದೂಡಿತು. ಬೀಚಿ ನನ್ನ ನೆಚ್ಚಿನ ಲೇಖಕರಾದರು, ಅವರನ್ನು ಓದಿದ್ದು, ಜೀವನಕ್ಕೆ ಒಂದು ದಾರಿ ನೀಡಿತು. ಪುಸ್ತಕಗಳೊಂದಿಗಿನ ಓಡನಾಟ ನಿಮ್ಮನ್ನು ಉನ್ನತ ಸ್ಥಾನಕ್ಕೇರಿಸುತ್ತದೆ ಎಂದರು.

ನಾನು ಬಯಸಿದ ಶಿಕ್ಷಣ ಪಡೆಯಲಾಗಲಿಲ್ಲ. ಬಡತನವೂ ಇತ್ತು. ಪಕ್ಕದ ಮನೆಯ ಹುಡುಗಿ ಏನ್ ಓದ್ತಾಳೋ ಅದನ್ನ ಓದಬೇಕಿತ್ತು. ಅವಳ ಮೇಲೆ ಇಷ್ಟ ಅಂತಲ್ಲ. ಅವಳು ಓದಿದ ಪುಸ್ತಕವನ್ನು ಪಡೆದು ನಾನು ಓದಬೇಕಿತ್ತು. ನನಗೆ ಇಷ್ಟವಿಲ್ಲದಿದ್ದರೂ ಅವಳು ವಾಣಿಜ್ಯ ವಿಭಾಗ ಸೇರಿದ್ದರಿಂದ ನಾನು ಸೇರಬೇಕಾಯಿತು. ಎಂದಾಗ ನಗು ಮತ್ತು ಗಂಭೀರತೆಯ ಮಿಶ್ರಭಾವ ಕಾಣಿಸಿತು.

ಲೇಖಕಿ ಮಾಧುರಿ ಕುಲಕರ್ಣಿ ಇದ್ದರು.

ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ರಾವಣನ ತಂಗಿ

ಕನ್ನಡಪ್ರಭ ವಾರ್ತೆ ಮೈಸೂರುನಗರದಲ್ಲಿ ನಡೆದ ಮೈಸೂರು ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ದಿವಾಕರ ಹೆಗಡೆ ಮತ್ತು ತಂಡದವರು ರಾವಣನ ತಂಗಿ ಏಕವ್ಯಕ್ತಿ ತಾಳಮದ್ದಲೆ ಪ್ರಸ್ತುತಪಡಿಸಿದರು.

ರಾವಣ ತಂಗಿ ಪ್ರಸಂಗವನ್ನು ಯಕ್ಷಗಾನ ಪದ್ಯದ ಮೂಲಕ ಪ್ರಸ್ತುತ ಪಡಿಸುವ ಮೂಲಕ ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ಎಲ್ಲರ ಗಮನ ಸೆಳೆದರು.ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ದಿವಾಕರ ಹೆಗಡೆ ಅವರ ಪ್ರಸ್ತುತಿಯಲ್ಲಿ ದಂಡಾರಣ್ಯದಲ್ಲಿ ಶೂರ್ಪಣಕಿಗೆ ಮನುಷ್ಯರ ವಾಸನೆ ಮೂಗಿಗೆ ಬಡಿದು ಅವರನ್ನು ಭಕ್ಷಿಸುವ ಆಲೋಚನೆಯಲ್ಲಿ ಹತ್ತಿರ ಬಂದು ನೋಡಿದಾಗ ಅವಳ ಕಣ್ಣಿಗೆ ರಾಮ-ಲಕ್ಷ್ಮಣ ಸೀತೆ ಬೀಳುತ್ತಾರೆ.

ರಾಮನ ರೂಪಕ್ಕೆ ಮನಸೋತು ಅವನಲ್ಲಿ ಪ್ರೇಮ ನಿವೇದನೆ ಮಾಡುತ್ತಾಳೆ. ರಾಮ ಲಕ್ಷ್ಮಣನ ಕಡೆಗೆ ತೋರಿಸುತ್ತಾನೆ. ಆ ಸಂದರ್ಭದಲ್ಲಿ ಲಕ್ಷ್ಮಣನಿಂದ ಅವಮಾನಿತಳಾದ ಶೂರ್ಪನಖಿಯೂ ಸೀತೆಯನ್ನು ಹೊತ್ತೊಯ್ದು ರಾಮನ ದಾಂಪತ್ಯವನ್ನು ಕೆಡಿಸುವ ಪ್ರತಿಜ್ಞೆ ಮಾಡುತ್ತಾಳೆ. ಈ ಸಂದರ್ಭವನ್ನು ತಾಳಮದ್ದಳೆ ಮೂಲಕ ಆಶು ನಾಟಕ ರೂಪದಲ್ಲಿ ನಡೆಸಿಕೊಟ್ಟರು.ಇವರಿಗೆ ಭಾಗವತರಾದ ಪ್ರಸನ್ನ ಹೆಗಡೆ ಮತ್ತು ಮದ್ದಲೆಯಲ್ಲಿ ಚಿನ್ಮಯ್ ಸಾಥ್ ನೀಡಿದರು.

Share this article