ಪ್ರೋತ್ಸಾಹಧನವಾಗಿ ೫೨ ಲಕ್ಷ ರು. । ೧೧.೩೬ ಲಕ್ಷ ನಿವ್ವಳ ಲಾಭ
ವೆಂಕಟಯ್ಯನಛತ್ರ ಹಾಲು ಉತ್ಪಾದಕರ ಸಹಕಾರ ಸಂಘವು ೧೧ ಕೋಟಿ ರು.ಗೂ ಹೆಚ್ಚು ವಹಿವಾಟು ನಡೆಸಿ, ೧೧,೩೬,೨೮೫ ರು. ನಿವ್ವಳ ಲಾಭ ಗಳಿಸಿದ್ದು, ಜಿಲ್ಲೆಯಲೇ ಪ್ರಥಮ ವಾರ್ಷಿಕ ಸಭೆ ನಡೆಸುತ್ತಿರುವ ಕೀರ್ತಿ ಈ ಡೇರಿಗೆ ಇದೆ ಎಂದು ಚಾಮುಲ್ ಹಿರಿಯ ನಿರ್ದೇಶಕ ಹಾಗೂ ಸಂಘದ ಅಧ್ಯಕ್ಷ ಎಚ್.ಎಸ್.ಬಸವರಾಜು ತಿಳಿಸಿದರು.
ತಾಲೂಕಿನ ವೆಂಕಟಯ್ಯನ ಛತ್ರ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸಂಘವು ಗುಣಮಟ್ಟದ ಹಾಲು ಸಂಗ್ರಹಣೆ ಮಾಡಿದ ಪರಿಣಾಮ ಹೆಚ್ಚಿನ ಲಾಭಾಂಶ ಬಂದಿದ್ದು, ಉತ್ಪಾದಕರಿಗೆ ೫.೨೦ ಲಕ್ಷ ರು. ಬೋನಸ್ ಅನ್ನು ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.ಸರ್ಕಾರದ ೫ ರು. ಪ್ರೋತ್ಸಾಹಧನವು ಉತ್ಪಾದಕರ ಖಾತೆಗೆ ನೇರವಾಗಿ ಜಮಾ ಆಗಿದ್ದು, ೫೨ ಲಕ್ಷ ರು. ಪ್ರೋತ್ಸಾಹಧನ ಬಂದಿದೆ. ರಾಸುಗಳ ವಿಮೆ ಯೋಜನೆಯಲ್ಲಿ ಅಕಾಲಿಕ ಮರಣ ಹೊಂದಿದ ೨೮ ರಾಸುಗಳಿಗೆ ೧೦.೮೦ ಲಕ್ಷ ರು. ವಿಮೆ ಪರಿಹಾರ ನೀಡಿದ್ದೇವೆ. ತಲಾ ೨೦ ಸಾವಿರ ರು. ಸಬ್ಸಿಡಿ ದರದಲ್ಲಿ ಐವರು ರೈತರಿಗೆ ಹಾಲು ಕರೆಯುವ ಯಂತ್ರ ಖರೀದಿ, ಏಳು ಮಂದಿ ರೈತರಿಗೆ ಮೇವು ಕಟಾವು ಯಂತ್ರಗಳನ್ನು ನೀಡಿದ್ದೇವೆ. ೧.೩೩ ಲಕ್ಷ ರು. ಸಬ್ಸಿಡಿ ದೊರೆತಿದೆ. ಶೇ.೯೫ ರಷ್ಟು ಹೆಚ್ಚು ಗುಣಮಟ್ಟ ಮತ್ತು ಪ್ಯಾಡ್ ಅಂಶವುಳ್ಳ ಹಾಲನ್ನು ಚಾಮುಲ್‌ಗೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಡೇರಿ ಕಾರ್ಯನಿರ್ವಾಹಕ ಅಧಿಕಾರಿ ಪುನೀತ್ ಸಂಘದ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು.