ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೆಆರ್‌ಎಸ್ ಪಕ್ಷದಿಂದ ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್.ದೀಪಕ್, ಕಾರ್ಯಾಧ್ಯಕ್ಷ ರಘು ಜಾಣಗೆರೆ, ಕಾರ್ಯದರ್ಶಿ ರಮೇಶ್ ಗೌಡ, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಜಿಲ್ಲಾ ಅಧ್ಯಕ್ಷ ಮಲ್ಲೇಶ್ ಸೇರಿದಂತೆ ಹಲವರ ನೇತೃತ್ವದಲ್ಲಿ ಕಾರ್ಯಕರ್ತರು ಸಾರಿಗೆ ಬಸ್ ನಿಲ್ದಾಣದಿಂದ ಚಲೋ ಆರಂಭಿಸಿ ತಾಲೂಕು ಪಂಚಾಯ್ತಿ ಬಳಿ ಆಗಮಿಸುತ್ತಿದ್ದಂತೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರನ್ನು ಗೇಟ್ ಬಳಿಯೇ ಪೊಲೀಸರು ತಡೆದರು.
ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡರು ಬ್ಯಾನರ್ ಹಾಗೂ ಪೋಸ್ಟರ್‌ಗಳಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಭಾವಚಿತ್ರವನ್ನು ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆದು ತಳ್ಳಾಟ, ನೂಕಾಟ ನಡೆದು ದೊಡ್ಡ ಹೈಡ್ರಾಮ ಸೃಷ್ಟಿಯಾಯಿತು.ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್.ದೀಪಕ್ ಮಾತನಾಡಿ, ನಾವು ಶಾಂತಯುತವಾಗಿ ಹೋರಾಟ ಮಾಡಲು ಮುಂದಾಗಿದ್ದವು. ಆದರೆ, ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಮೇಲೆ ದೌರ್ಜನ್ಯ ನಡೆಸಿ ನಮ್ಮ ಪ್ರತಿಭಟನೆ ಹತ್ತಿಕ್ಕಲು ಮುಂದಾಗಿದ್ದಾರೆ. ಇಂಥ ಬೆದರಿಕೆ ಹೆದರುವುದಿಲ್ಲ, ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಕಿಡಿ ಕಾರಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮುಟ್ಟನಹಳ್ಳಿ ಅಂಬರೀಶ್ ಮಾತನಾಡಿ, ಕೆಆರ್‌ಎಸ್ ಪಕ್ಷದ ಹೋರಾಟದ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ, ಅನಗತ್ಯವಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ತೇಜೋವಧೆ ಮಾಡುವುದು ಸರಿಯಲ್ಲ, ಅಲ್ಲದೇ, ಇಲ್ಲಿ ಬಂದಿರುವವರು ಬಹುತೇಕ ಮಂದಿ ಹೊರಗಡೆಯವರು ಎಂದು ಕಿಡಿಕಾರಿದರು.
ಕೆಆರ್‌ಎಸ್ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಇದೇ ವೇಳೆ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್, ಟಿಎಪಿಸಿಎಂಎಸ್ ನಿರ್ದೇಶಕರಾದ ಮಲ್ಲಯ್ಯ, ದಿಲೀಪ್ ಕುಮಾರ್, ಮನು, ಮುಖಂಡರಾದ ಪಿ.ಮಾದೇಶ, ಬಂಕ್ ಮಹದೇವು, ಸಂತೋಷ್ ಕುಮಾರ್, ಆನಂದ್ ಕುಮಾರ್, ಎಚ್.ಎಂ.ಮಹೇಶ್, ಮಂಜು, ಚೇತನ್ ನಾಯಕ್, ಚಿಕ್ಕಸ್ವಾಮಿ ಪಾಲ್ಗೊಂಡಿದ್ದರು.