ಬಿಸಿಲಿನ ತಾಪ ಹೆಚ್ಚಾಗಿರುವ ನಗರದ ಪೀಣ್ಯ, ಹೆಣ್ಣೂರು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ‘ತಂಪು ತಾಣ’ಗಳನ್ನು ನಿರ್ಮಿಸಲು ಜಿಬಿಎ ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಸಿಲಿನ ತಾಪ ಹೆಚ್ಚಾಗಿರುವ ನಗರದ ಪೀಣ್ಯ, ಹೆಣ್ಣೂರು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ‘ತಂಪು ತಾಣ’ಗಳನ್ನು ನಿರ್ಮಿಸಲು ಜಿಬಿಎ ಮುಂದಾಗಿದೆ.
ಸಾರ್ವಜನಿಕ ಕಟ್ಟಡಗಳ ಮೇಲ್ಛಾವಣಿಗಳಿಗೆ ಅಲ್ಟ್ರಾ ವೈಟ್ ಪೇಂಟಿಂಗ್, ಉದ್ಯಾನಗಳು ಹಾಗೂ ದಟ್ಟ ಕಾಡಿನಂತಹ ಪಾರ್ಕ್‌ಗಳ ಅಭಿವೃದ್ಧಿ ಮೂಲಕ ತಾಪಮಾನವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಈ ವರ್ಷ ಬೇಸಿಗೆಯಲ್ಲಿ ತಾಪಮಾನ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳ ಮೇಲ್ಛಾವಣಿಗಳಿಗೆ ಅಲ್ಟ್ರಾ ವೈಟ್ ಪೇಂಟಿಂಗ್ ಮಾಡಲಾಗುತ್ತಿದೆ. ಇದರಿಂದ ಬಿಸಿಲಿನ ತಾಪ ಕಡಿಮೆಯಾಗುತ್ತದೆ. ಅಲ್ಲದೇ, ಈ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ.
ತೀವ್ರ ಕಾಂಕ್ರೀಟಿಕರಣ, ಕೈಗಾರಿಕೆಗಳು, ಭಾರಿ ಸಂಖ್ಯೆಯ ವಾಹನಗಳ ಸಂಚಾರದಿಂದ ಪೀಣ್ಯ, ನಾಗವಾರ, ಹೆಣ್ಣೂರು, ಎಚ್.ಬಿ.ಆರ್ ಲೇಔಟ್ ಮತ್ತಿತರ ಪ್ರದೇಶಗಳಲ್ಲಿ ನಗರದಲ್ಲಿ ದಾಖಲಾಗುವ ಸರಾಸರಿ ಉಷ್ಣಾಂಶಕ್ಕಿಂತ ಸುಮಾರು ಮೂರ್ನಾಲ್ಕು ಡಿಗ್ರಿ ಸೆಲ್ಸಿಯಸ್ ಹೆಚ್ಚು ದಾಖಲಾಗುತ್ತಿದೆ. ಈ ಕುರಿತು ಸಿ40 ಸಿಟೀಸ್ ಕ್ಲೈಮೇಟ್ ಲೀಡರ್‌ಶಿಪ್ ಗ್ರೂಪ್ ಅಧ್ಯಯನ ನಡೆಸಿದ್ದು, ಕಾಂಕ್ರೀಟ್ ಮತ್ತು ಶೀಟುಗಳ ಮೇಲ್ಛಾವಣಿ ಹೊಂದಿರುವ ಪೀಣ್ಯದಂತಹ ಕೈಗಾರಿಕಾ ವಲಯಗಳು ಹಾಗೂ ಭಾರಿ ನಿರ್ಮಾಣ ಕಾರ್ಯಗಳು ನಡೆಯುತ್ತಿರುವ ನಾಗವಾರ-ಹೆಣ್ಣೂರು ಪ್ರದೇಶಗಳಲ್ಲಿ ತಾಪಮಾನ ಹೆಚ್ಚಾಗಿದೆ. ಇಲ್ಲಿ ರಾತ್ರಿ ವೇಳೆಯೂ ತಾಪಮಾನ ಹೆಚ್ಚಾಗಿಯೇ ಇರುತ್ತದೆ ಎಂದು ವರದಿ ತಿಳಿಸಿದೆ.
ಇದಕ್ಕೆ ಪರಿಹಾರವಾಗಿ ಸಾರ್ವಜನಿಕ ಕಟ್ಟಡಗಳು, ಆಸ್ಪತ್ರೆಗಳು ಮತ್ತು ಶಾಲೆಗಳ ಮೇಲ್ಛಾವಣಿಗೆ ಅಲ್ಟ್ರಾ ವೈಟ್ ಪೇಂಟಿಂಗ್ ಮೂಲಕ ಶಾಖವನ್ನು ಪ್ರತಿಫಲಿಸಿ ತಾಪಮಾನ ಕಡಿಮೆ ಮಾಡುವ ಉದ್ದೇಶವಿದೆ. ಮೊದಲ ಹಂತದಲ್ಲಿ ಪೀಣ್ಯ ಭಾಗದ ಹೆಗ್ಗನಹಳ್ಳಿ ಮತ್ತು ತಿಪ್ಪೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನುತಂಪು ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇಲ್ಲಿ ಕುಡಿಯುವ ನೀರು, ಮಜ್ಜಿಗೆ ಮತ್ತು ವಿಶ್ರಾಂತಿ ಪಡೆಯಲು ನೆರಳಿನ ವ್ಯವಸ್ಥೆಯು ಇರಲಿದೆ. ಜಿಬಿಎ ಅನುದಾನವನ್ನು ಈ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂದು ಉತ್ತರ ಮತ್ತು ಪಶ್ಚಿಮ ನಗರ ಪಾಲಿಕೆಗಳ ಅಧಿಕಾರಿಗಳು ಹೇಳಿದ್ದಾರೆ.
ಮುಂದೆ ಇಂದಿರಾ ಕ್ಯಾಂಟೀನ್ ತಂಪು ತಾಣ
ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು, ನಮ್ಮ ಕ್ಲಿನಿಕ್‌ಗಳು ಮತ್ತು ನಗರ ಆರೋಗ್ಯ ಕೇಂದ್ರಗಳನ್ನು ಹಗಲು ವೇಳೆಯ ತಂಪು ಕೇಂದ್ರಗಳಾಗಿ ಬಳಸಲು ಯೋಜಿಸಲಾಗಿದೆ. ಹೆಣ್ಣೂರು ಬಂಡೆ ಪಾರ್ಕ್ ಪ್ರದೇಶವನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗಿದೆ. ಇಲ್ಲಿನ ಕಲ್ಲು ಕ್ವಾರಿ ಪ್ರದೇಶವನ್ನು ಸಾರ್ವಜನಿಕ ಉದ್ಯಾನವನವಾಗಿ ಪರಿವರ್ತಿಸುವ ಮೂಲಕ ಹಸಿರು ಹೊದಿಕೆ ಹೆಚ್ಚಿಸಿ, ನೈಸರ್ಗಿಕವಾಗಿ ತಂಪು ವಾತಾವರಣ ನಿರ್ಮಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.