ಕನ್ನಡಪ್ರಭ ವಾರ್ತೆ ಗದಗ
ಎಸ್ಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಬ್ಬದ ಸಂದರ್ಭದಲ್ಲಿ ಬಂದೋಬಸ್ತ್‌ಗಾಗಿ ಹೊರ ಜಿಲ್ಲೆಗಳಿಂದ ಮೂರು ಕೆಎಸ್‌ಆರ್‌ಪಿ ತುಕಡಿಗಳು ಹಾಗೂ 450 ಹೋಮ್ ಗಾರ್ಡ್ ಗಳನ್ನು ಹೆಚ್ಚುವರಿಯಾಗಿ ಕರೆಸಿಕೊಳ್ಳಲಾಗುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆಯ ನಾಲ್ವರು ಡಿಎಸ್‌ಪಿ, 10 ಇನ್ಸಪೆಕ್ಟರ್, 29 ಪಿಎಸ್‌ಐ, 64 ಎಎಸ್‌ಐ ಸೇರಿದಂತೆ ಸುಮಾರು 600 ಸಿವಿಲ್ ಪೊಲೀಸ್ ಸಿಬ್ಬಂದಿ ಹಾಗೂ ಡಿಎಆರ್‌ನ 12 ತುಕಡಿಗಳ ಸುಮಾರು 150 ಸಿಬ್ಬಂದಿಯನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ. ಇದರೊಂದಿಗೆ ವಿವಿಧ ಇಲಾಖೆಗಳ ಸಹಕಾರ ಪಡೆಯಲಾಗಿದ್ದು, 30 ಕ್ಕೂ ಅಧಿಕ ವಾಹನಗಳನ್ನು ಬಂದೋಬಸ್ತ್ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ರಾತ್ರಿ ಗಸ್ತು ಹೆಚ್ಚಿಸಲಾಗುವುದು. ಡ್ರೋನ್‌ಗಳ ಮೂಲಕವೂ ಕಣ್ಗಾವಲು ಇರಿಸಲಾಗುವುದು.
ಈಗಾಗಲೇ ಥರ್ಡ್ ಐ ಯೋಜನೆಯಡಿ ಅಳವಡಿಸಿರುವ ಕ್ಯಾಮೆರಾಗಳ ಜತೆಗೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ 100ಕ್ಕೂ ಹೆಚ್ಚು ಹೊಸ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಕಳ್ಳತನ, ಪಿಕ್ ಪಾಕೆಟಿಂಗ್ ಸೇರಿದಂತೆ ಜನದಟ್ಟಣೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಅಪರಾಧಗಳನ್ನು ತಡೆಯಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.ಹಿಂದಿನ ಗಣೇಶೋತ್ಸವ ಹಾಗೂ ಇತರ ಸಂದರ್ಭಗಳಲ್ಲಿ ಅಹಿತಕರ ಘಟನೆಗಳಲ್ಲಿ ಭಾಗಿಯಾಗಿದ್ದವರು ಮತ್ತು ತೊಂದರೆ ಉಂಟುಮಾಡುವ ಪ್ರವೃತ್ತಿ ಹೊಂದಿರುವವರನ್ನು ಗುರುತಿಸಿ ಸುಮಾರು 135 ಜನರ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಅವರ ಚಲನವಲನದ ಮೇಲೆ ನಿಗಾ ಇರಿಸಲಾಗಿದೆ. ಗಣೇಶೋತ್ಸವಕ್ಕೆ ಸಂಬಂಧಿಸಿದ ಅನುಮತಿಗಳಿಗಾಗಿ ಜಿಲ್ಲೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಅನುಮತಿ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ.
ಹಬ್ಬದ ಸಂದರ್ಭ ಸಾಮಾಜಿಕ ಜಾಲತಾಣಗಳ ಮೇಲೂ ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಪ್ರಚೋದನಕಾರಿ ಸಂದೇಶ, ಪೋಸ್ಟ್ ಗಳನ್ನು ಹರಡುವವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು. ಗಣೇಶೋತ್ಸವವನ್ನು ಜಿಲ್ಲೆಯ ಜನರು ಸೌಹಾರ್ದಯುತವಾಗಿ, ಜವಾಬ್ದಾರಿಯಿಂದ ಹಾಗೂ ಕಾನೂನು, ನಿಯಮಗಳ ವ್ಯಾಪ್ತಿಯಲ್ಲಿ ವಿಜೃಂಭಣೆಯಿಂದ ಆಚರಿಸಬೇಕು. ಎಲ್ಲ ಸಮುದಾಯಗಳ ಸಹಕಾರದೊಂದಿಗೆ ಹಬ್ಬ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.