ಸಂಡೂರು: ವಿಘ್ನ ನಿವಾರಕ ಗಣೇಶನ ಹಬ್ಬಕ್ಕೆ ಎಲ್ಲೆಡೆ ಭರದ ಸಿದ್ಧತೆ ನಡೆದಿದೆ. ಗಣೇಶನ ವಿಗ್ರಹ ತಯಾರಕರು ತಾವು ತಯಾರಿಸಿದ ಗೌರಿ ಗಣೇಶನ ಮೂರ್ತಿಗಳಿಗೆ ಅಂತಿಮ ಸ್ಪರ್ಷ ನೀಡುವಲ್ಲಿ ನಿರತರಾಗಿದ್ದರೆ, ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಮನೆ ಹಾಗೂ ಯುವಕ ಸಂಘಗಳು ಗಣೇಶನ ಪ್ರತಿಷ್ಠಾಪನೆಗೆ ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ.
ವಿಗ್ರಹ ತಯಾರಕ ಅಕ್ಕಸಾಲಿ ರಾಘವೇಂದ್ರ ಆಚಾರ್ ಮಾತನಾಡಿ, ನಾವು ಹಬ್ಬಕ್ಕೆ ಮೂರು ತಿಂಗಳಿರುವಾಗಲೇ ಮಣ್ಣನ್ನು ತಂದು ಮೂರ್ತಿ ತಯಾರಿಸುತ್ತೇವೆ. ಪ್ರತಿ ವರ್ಷ ಸುಮಾರು ೨೫೦ ಗಣೇಶನ ವಿಗ್ರಹ ತಯಾರಿಸುತ್ತೇವೆ. ನಾವು ೯ಇಂಚಿನಿಂದ ೪ ಅಡಿಯವರೆಗಿನ ಗಣೇಶನ ವಿಗ್ರಹ ತಯಾರಿಸಿದ್ದೇವೆ. ಈಗಾಗಲೆ ಬಹುತೇಕ ಗಣೇಶನ ಮೂರ್ತಿ ಬುಕ್ ಮಾಡಿ ಅಡ್ವಾನ್ಸ್ ಹಣ ಕೊಟ್ಟು ಹೋಗಿದ್ದಾರೆ.
ಪರಿಸರ ಸ್ನೇಹಿ ಗಣಪ: ನಾವು ಪರಿಸರ ಸ್ನೇಹಿ ಮಣ್ಣಿನ ಗಣಪನಿಗೆ ವಾಟರ್ ಪೇಂಟನ್ನೇ ಬಳಸುತ್ತೇವೆ. ಇತ್ತೀಚೆಗೆ ಕೆಲವರು ಬಣ್ಣ ಹಚ್ಚದಿರುವ ಮಣ್ಣಿನ ಗಣಪನನ್ನು ಕೇಳುತ್ತಿರುವುದರಿಂದ ಅಂತಹ ಗಣಪನ ಮೂರ್ತಿ ರಚಿಸಿದ್ದೇವೆ. ಕೆಲ ಸಂಘ ಸಂಸ್ಥೆಗಳವರು ನೀಡಿದ ಆರ್ಡರ್‌ನಂತೆ ಮುಂಬೈ ಗಣೇಶ, ರಾಘವೇಂದ್ರ ಸ್ವಾಮಿ ಆಕಾರದ ಗಣೇಶ, ಭಕ್ತ ಮಾರ್ಕಂಡೇಯ ರೂಪದ ಗಣೇಶ, ಕುಮಾರಸ್ವಾಮಿ ಗಣೇಶ ಜೊತೆಗಿರುವ ಗಣೇಶ, ಖಂಡೋಬಾ ಗಣಪತಿ ಆಕಾರದ ಗಣೇಶ ತಯಾರಿಸುತ್ತೇವೆ ಎಂದರು.ಪುರಸಭೆಯಿಂದಲೂ ಜಾಗೃತಿ: ಪಟ್ಟಣದ ಪುರಸಭೆಯ ಅಧಿಕಾರಿಗಳು ಇತ್ತೀಚೆಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸ್ವಾಸಹಾಯಕ ಸಂಘಗಳ ಸದಸ್ಯರನ್ನು ಕರೆಯಿಸಿ ಪರಿಸರ ಸ್ನೇಹಿ ಹಾಗೂ ನೈಸರ್ಗಿಕ ರೀತಿಯಲ್ಲಿ ಮಣ್ಣಿನ ಮೂರ್ತಿ ತಯಾರಿಸುವ ವಿಧಾನದ ಕುರಿತು ಜಾಗೃತಿ ಮಾಡಿಸಿದ್ದು ಗಮನಾರ್ಹ.