ಬಳ್ಳಾರಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯ ನಡುವೆಯೇ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಗಣಿನಾಡು ಬಳ್ಳಾರಿ ಸಜ್ಜಾಗಿದೆ. ಮನೆ ಮನೆಗಳಲ್ಲಿ ಹಬ್ಬದ ಸಿದ್ಧತೆ ಜೋರಾಗಿದ್ದು, ನಗರದ ಪ್ರಮುಖ ಮಾರುಕಟ್ಟೆಗಳು ಗಣಪನ ಮೂರ್ತಿಗಳು, ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಬಂದ ಜನರಿಂದ ಗಿಜಿಗುಡುತ್ತಿವೆ. ಹಬ್ಬದ ಮುನ್ನಾದಿನವಾದ ಭಾನುವಾರ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಜೋರಾಗಿತ್ತು.
ಮಾರುಕಟ್ಟೆಯಲ್ಲಿ ಗಣಪನದ್ದೇ ದರ್ಬಾರ್:ಗಣೇಶ ಹಬ್ಬದ ಹಿನ್ನೆಲೆ ನಗರದ ಪ್ರಮುಖ ರಸ್ತೆ ಬದಿಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಗಣಪನ ಮೂರ್ತಿಗಳ ಸಾಲು ಕಂಡುಬರುತ್ತಿದೆ. ಚಿಕ್ಕ ಗಾತ್ರದ ಮನೆ ಗಣಪನಿಂದ ಹಿಡಿದು ಬೃಹತ್ ಸಾರ್ವಜನಿಕ ಗಣೇಶ ಮೂರ್ತಿಗಳವರೆಗೆ ವಿವಿಧ ಮಾದರಿಯ ಮೂರ್ತಿಗಳು ಜನರ ಗಮನ ಸೆಳೆದವು.
ಪ್ರತಿ ವರ್ಷ ಗಣೇಶನ ಮೂರ್ತಿಗಳ ವಿನ್ಯಾಸದಲ್ಲಿ ಹೊಸತನ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿಯೂ ಅದೇ ಟ್ರೆಂಡ್ ಮುಂದುವರಿದಿದೆ. ಸಾಂಪ್ರದಾಯಿಕ ಗಣಪನ ಜತೆಗೆ ವಿವಿಧ ಭಂಗಿ, ಅಲಂಕಾರ ಹಾಗೂ ವಿಶಿಷ್ಟ ಪರಿಕಲ್ಪನೆಯ ಮೂರ್ತಿಗಳಿಗೆ ಯುವಕರಲ್ಲಿ ವಿಶೇಷ ಆಸಕ್ತಿ ಕಂಡುಬಂದಿದೆ.ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ ಅಂತಿಮ ಹಂತ ತಲುಪಿವೆ. ವರ್ಷದಿಂದ ವರ್ಷಕ್ಕೆ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬಳ್ಳಾರಿ ನಗರವೊಂದರಲ್ಲೇ 500ಕ್ಕೂ ಅಧಿಕ ಕಡೆ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ.
ಗಣೇಶ ಪ್ರತಿಷ್ಠಾಪನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲು ಸಂಘಗಳು ಸಿದ್ಧತೆ ನಡೆಸಿವೆ.
ಭಾನುವಾರವೂ ಹಲವು ಕಲಾವಿದರು ನಗರದ ಕುಂಬಾರ ಓಣಿಯಲ್ಲಿ ಗಣೇಶನ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯದಲ್ಲಿ ನಿರತರಾಗಿದ್ದರು. ಬಣ್ಣ ಬಳಿಯುವುದು, ಕಿರೀಟ ಅಳವಡಿಸುವುದು, ಆಭರಣ ಜೋಡಿಸುವುದು ಸೇರಿದಂತೆ ಅಂತಿಮ ಹಂತದ ಕೆಲಸಗಳು ಭರದಿಂದ ನಡೆದವು.
ಗಣೇಶ ಹಬ್ಬದ ಹಿನ್ನೆಲೆ ಪೂಜಾ ಸಾಮಗ್ರಿಗಳಿಗೂ ಬೇಡಿಕೆ ಹೆಚ್ಚಾಗಿದೆ. ಹೂವು, ಹಣ್ಣು, ತೆಂಗಿನಕಾಯಿ, ಬಾಳೆಕಂದು, ಬಾಳೆಹಣ್ಣು, ಅಕ್ಕಿ, ಕಬ್ಬು ಸೇರಿದಂತೆ ಪೂಜೆಗೆ ಅಗತ್ಯವಿರುವ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಹಬ್ಬದ ಬೇಡಿಕೆಗೆ ಅನುಗುಣವಾಗಿ ಹೂವು ಮತ್ತು ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಹಬ್ಬದ ಖರೀದಿ ಹೆಚ್ಚುವರಿ ಹೊರೆಯಾಗಿದೆ. ಆದರೂ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆ ಅಡ್ಡಿಯಾಗಿಲ್ಲ.
ಗ್ರಾಮೀಣ ಭಾಗದಲ್ಲೂ ಹಬ್ಬದ ಕಳೆ: ನಗರಕ್ಕೆ ಮಾತ್ರ ಸೀಮಿತವಾಗದ ಗಣೇಶ ಹಬ್ಬದ ಸಂಭ್ರಮ ಗ್ರಾಮೀಣ ಭಾಗದಲ್ಲೂ ಕಳೆಗಟ್ಟಿದೆ. ಬಳ್ಳಾರಿ ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದ್ದಾರೆ. ಗ್ರಾಮಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳಗಳನ್ನು ಸ್ವಚ್ಛಗೊಳಿಸಿ, ವಿದ್ಯುತ್ ದೀಪಾಲಂಕಾರ ಹಾಗೂ ಶಾಮಿಯಾನಗಳ ವ್ಯವಸ್ಥೆ ಮಾಡಲಾಗಿದೆ. ಯುವ ಸಂಘಗಳು ತಮ್ಮದೇ ಆದ ರೀತಿಯಲ್ಲಿ ಗಣೇಶನ ಮೂರ್ತಿ ಆಯ್ಕೆ ಮಾಡಿಕೊಂಡಿದ್ದು, ಹಬ್ಬದ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಿವೆ.
ಬಳ್ಳಾರಿ ನಗರದಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯ ಅವಧಿಯಲ್ಲೂ ವೈವಿಧ್ಯ ಕಂಡುಬರುತ್ತಿದೆ. ಕೆಲವೆಡೆ ಒಂದು ದಿನದಲ್ಲೇ ಗಣೇಶನ ವಿಸರ್ಜನೆ ನಡೆಯಲಿದ್ದರೆ ಇನ್ನೂ ಕೆಲವು ಕಡೆ ಮೂರು, ಐದು ಹಾಗೂ ಒಂಬತ್ತು ದಿನಗಳ ಕಾಲ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ಶಬ್ದಮಾಲಿನ್ಯದ ಬಗ್ಗೆ ಇರಲಿ ಎಚ್ಚರ: ಗಣೇಶ ಹಬ್ಬದ ಸಂಭ್ರಮದ ನಡುವೆ ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವೂ ಇದೆ. ಗಣೇಶ ವಿಸರ್ಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ಭಾರಿ ಧ್ವನಿವರ್ಧಕ ಬಳಸುವ ಸಾಧ್ಯತೆ ಇರುವುದರಿಂದ ಶಬ್ದಮಾಲಿನ್ಯ ಉಂಟಾಗುವ ಆತಂಕವಿದೆ.
ವಿಶೇಷವಾಗಿ ಆಸ್ಪತ್ರೆಗಳು, ಶಾಲಾ–ಕಾಲೇಜುಗಳು, ವೃದ್ಧರು ಹಾಗೂ ಜನನಿಬಿಡ ಪ್ರದೇಶಗಳ ಸುತ್ತಮುತ್ತ ಹೆಚ್ಚಿನ ಶಬ್ದ ಉಂಟಾಗದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ. ಪರಿಸರ ಸ್ನೇಹಿ ಗಣಪನ ಪ್ರತಿಷ್ಠಾಪನೆಗೆ ಆದ್ಯತೆ ನೀಡುವುದರ ಜತೆಗೆ ವಿಸರ್ಜನೆಯ ಸಂದರ್ಭದಲ್ಲೂ ಜಲಮೂಲಗಳು ಕಲುಷಿತವಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಈಗಾಗಲೇ ಹಬ್ಬದ ಸಿದ್ಧತೆಯ ಮೇಲೆ ನಿಗಾ ಇರಿಸಿದ್ದು, ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ.