ಕಳಸಾ-ಬಂಡೂರಿ, ಮಹದಾಯಿ ಯೋಜನೆಗೆ ಅಗತ್ಯ ಅನುಮತಿ ನೀಡುವಲ್ಲಿಯೂ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ. ರಾಜ್ಯ ಸರ್ಕಾರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಾದೇಶ ನೀಡಿದ್ದು, ಅನುಮತಿ ದೊರೆತ ತಕ್ಷಣ ಕಾಮಗಾರಿ ಆರಂಭಿಸಲಾಗುವುದು.
ಹುಬ್ಬಳ್ಳಿ:
ನಾಡಿಗಾಗಿ ಶ್ರಮಿಸಿದ ಮಹನೀಯರ ಹೆಸರುಗಳನ್ನು ಅಜರಾಮರಗೊಳಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಮಹದಾಯಿ ಹಾಗೂ ಐದು ವಿಮಾನ ನಿಲ್ದಾಣಗಳ ನಾಮಕರಣ ಸಮಿತಿ ವತಿಯಿಂದ ಭಾನುವಾರ ನಡೆದ ಟ್ರ್ಯಾಕ್ಟರ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಣ್ಣ ಬಸವಣ್ಣ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಹೆಸರುಗಳನ್ನು ರಾಜ್ಯದ ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಬೇಕು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಇದುವರೆಗೆ ಕ್ರಮಕೈಗೊಂಡಿಲ್ಲ ಎಂದರು.
ಕಳಸಾ-ಬಂಡೂರಿ, ಮಹದಾಯಿ ಯೋಜನೆಗೆ ಅಗತ್ಯ ಅನುಮತಿ ನೀಡುವಲ್ಲಿಯೂ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ. ರಾಜ್ಯ ಸರ್ಕಾರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಾದೇಶ ನೀಡಿದ್ದು, ಅನುಮತಿ ದೊರೆತ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಈ ಎರಡೂ ಬೇಡಿಕೆಗಳ ಈಡೇರಿಕೆಗೆ ಪಕ್ಷಾತೀತವಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಯಾವುದೇ ಹೋರಾಟಕ್ಕೆ ಅಂತಿಮ ಗಡುವು ನಿಗದಿಪಡಿಸಿದಾಗ ಮಾತ್ರ ಪರಿಣಾಮಕಾರಿ ಶಕ್ತಿ ಬರುತ್ತದೆ. ರಾಜ್ಯದ 224 ಶಾಸಕರು ವಿಮಾನ ನಿಲ್ದಾಣಗಳ ನಾಮಕರಣಕ್ಕೆ ಒಕ್ಕೊರಲಿನಿಂದ ಪ್ರಸ್ತಾವನೆ ಸಲ್ಲಿಸಿದ್ದರು. ಉತ್ತರ ಕರ್ನಾಟಕದ ಹಿತದೃಷ್ಟಿಯಿಂದ ಮಹದಾಯಿ ಯೋಜನೆಯನ್ನೂ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದರು.
ಮನಸೂರಮಠದ ಬಸವರಾಜ ದೇವರು ಮಾತನಾಡಿ, ಬೇಡಿಕೆಗಳು ಚರ್ಚೆ ಹಾಗೂ ಭರವಸೆಗಳಿಗೆ ಸೀಮಿತವಾಗಿವೆ. ಸರ್ವಪಕ್ಷ ಸಭೆ ನಡೆಸಿ ಸಮಸ್ಯೆ ಪರಿಹರಿಸಬೇಕು. ಬೇಡಿಕೆ ಈಡೇರದಿದ್ದರೆ ನವೆಂಬರ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡ ಶಿವಾನಂದ ಮುತ್ತಣ್ಣವರ, ಅನಿಲಕುಮಾರ ಪಾಟೀಲ ಹಾಗೂ ಅಕ್ಕಿ ಆಲೂರಿನ ಶಿವಬಸವ ಸ್ವಾಮೀಜಿ ಮಾತನಾಡಿದರು. ಗುಬ್ಬಿ ಅಜ್ಜನಮಠದ ಶ್ರೀ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯರು, ಗುರುಮಹೇಶ್ವರ ಸ್ವಾಮೀಜಿ, ಮುಖಂಡರಾದ ಅರವಿಂದ ಕಟಗಿ, ಅಡಿವೆಪ್ಪ ಶಿವಳ್ಳಿ, ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು.
ಟ್ರ್ಯಾಕ್ಟರ್ ಮೆರವಣಿಗೆ
ಸಭೆಯ ಬಳಿಕ ಮೂರುಸಾವಿರಮಠದಿಂದ ಆರಂಭವಾದ ಟ್ರ್ಯಾಕ್ಟರ್ ರ‍್ಯಾಲಿಯು ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ವಿಮಾನ ನಿಲ್ದಾಣ ತಲುಪಿತು. ಬಳಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.