ಭಾರೀ ಬಿಸಿಲು ಹಂಪಿ ಪ್ರವಾಸಿಗರ ಇಳಿಮುಖ

KannadaprabhaNewsNetwork |  
Published : Apr 30, 2025, 12:34 AM IST
29ಎಚ್‌ಪಿಟಿ1- ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಬ್ಯಾಟರಿಚಾಲಿತ ವಾಹನಗಳಲ್ಲಿ ಏರಲು ಪ್ರವಾಸಿಗರು ಇಲ್ಲದಂತಾಗಿದ್ದಾರೆ. | Kannada Prabha

ಸಾರಾಂಶ

ಹಂಪಿ ಪ್ರವಾಸೋದ್ಯಮ ನೆಚ್ಚಿಕೊಂಡಿರುವ ಆಟೊ ಚಾಲಕರು, ಪ್ರವಾಸಿ ಮಾರ್ಗದರ್ಶಿಗಳು, ಹಂಪಿ ಪುಸ್ತಕ ಮಾರಾಟಗಾರರು, ಸಣ್ಣಪುಟ್ಟ ಅಂಗಡಿಗಳ ಮಾಲೀಕರು, ಊಟೋಪಚಾರದ ಅಂಗಡಿಗಳವರಿಗೆ ಹೊಡೆತ ಬಿದ್ದಿದೆ.

ಕೃಷ್ಣ ಲಮಾಣಿ ಹೊಸಪೇಟೆ

ಭಾರೀ ಬಿಸಿಲಿನ ಹೊಡೆತಕ್ಕೆ ಕಂಗೆಟ್ಟಿರುವ ದೇಶ, ವಿದೇಶಿ ಪ್ರವಾಸಿಗರು ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ.

ಹಂಪಿಯಲ್ಲಿ ಬಿಸಿಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ತಲುಪಿರುವ ಹಿನ್ನೆಲೆಯಲ್ಲಿ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಹಂಪಿ ಪ್ರವಾಸೋದ್ಯಮ ನೆಚ್ಚಿಕೊಂಡಿರುವ ಹೋಟೆಲ್, ರೆಸಾರ್ಟ್‌ಗಳು ಕೂಡ ಖಾಲಿ ಹೊಡೆಯುತ್ತಿವೆ.

ತಾಪಮಾನ: ಹಂಪಿಯಲ್ಲಿ ದಿನೇ ದಿನೆ ತಾಪಮಾನ ಏರತೊಡಗಿದೆ. ಅದರಲ್ಲೂ ಬಂಡೆಗಲ್ಲು ಇರುವುದರಿಂದ ಬಿಸಿಲಿನ ಕಾವು ಮತ್ತಷ್ಟು ಹೆಚ್ಚುತ್ತಿದೆ. ಹಾಗಾಗಿ ಪ್ರವಾಸಿಗರು ಹಂಪಿ ಕಡೆಗೆ ಸುಳಿಯದಂತಾಗಿದ್ದಾರೆ. ಹಂಪಿ ಸುತ್ತಮುತ್ತ ಇರುವ ಹೋಟೆಲ್‌, ರೆಸಾರ್ಟ್‌ ಮತ್ತು ಹೋಂ ಸ್ಟೇಗಳು ಕೂಡ ಖಾಲಿ ಹೊಡೆಯ ತೊಡಗಿವೆ.

ಹಂಪಿಯ ಪ್ರವಾಸಕ್ಕೆ ಧಾರವಾಡದಿಂದ ಬಂದಿದ್ದ ಐದಾರು ಕುಟುಂಬಗಳ ಸದಸ್ಯರು, ತುಂಗಭದ್ರಾ ಜಲಾಶಯ ವೀಕ್ಷಣೆ ಮಾಡಿ ವಾಪಸ್‌ ಆಗಿದ್ದಾರೆ. ಇನ್ನು ಚಳಿಗಾಲದಲ್ಲೇ ಹಂಪಿ ಸ್ಮಾರಕಗಳ ವೀಕ್ಷಣೆ ಉತ್ತಮ ಎಂದು ಪ್ರವಾಸಿಗರು ಹಂಪಿಯತ್ತ ಬರುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಪ್ರವಾಸಿ ಮಾರ್ಗದರ್ಶಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

ಬದುಕಿನ ಬಂಡಿಗೆ ಹೊಡೆತ:ಹಂಪಿ ಪ್ರವಾಸೋದ್ಯಮ ನೆಚ್ಚಿಕೊಂಡಿರುವ ಆಟೊ ಚಾಲಕರು, ಪ್ರವಾಸಿ ಮಾರ್ಗದರ್ಶಿಗಳು, ಹಂಪಿ ಪುಸ್ತಕ ಮಾರಾಟಗಾರರು, ಸಣ್ಣಪುಟ್ಟ ಅಂಗಡಿಗಳ ಮಾಲೀಕರು, ಊಟೋಪಚಾರದ ಅಂಗಡಿಗಳವರಿಗೆ ಹೊಡೆತ ಬಿದ್ದಿದೆ. ಇನ್ನು ಹಂಪಿ ಪ್ರವಾಸೋದ್ಯಮ ನೆಚ್ಚಿಕೊಂಡಿರುವ ಬಟ್ಟೆ ಅಂಗಡಿಗಳು ಹಾಗೂ ತರೇವಾರಿ ಅಂಗಡಿಗಳ ಮಾಲೀಕರಿಗೂ ಹೊಡೆತ ಬಿದ್ದಿದೆ.

ಹಂಪಿ ಪ್ರವಾಸೋದ್ಯಮದಿಂದ ಮಧ್ಯಮ ಕುಟುಂಬದವರಿಗೆ ಅನುಕೂಲ ಆಗಿತ್ತು. ಅದರಲ್ಲೂ ಪ್ರವಾಸಿ ಮಾರ್ಗದರ್ಶಿಗಳಿಗೆ ಅನುಕೂಲ ಆಗಿತ್ತು. ಅವರ ದೈನಂದಿನ ಬದುಕು ಕೂಡ ಹಸನಾಗಿತ್ತು. ಈಗ ಬಿಸಿಲು ಅವರ ಬದುಕಿಗೆ ವಿಲನ್‌ ಆಗಿ ಪರಿಣಮಿಸಿದೆ.

ಸ್ಮಾರಕಗಳು ಪ್ರವಾಸಿಗರಿಗೆ ಪ್ರಿಯ:ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯ, ವಿಜಯ ವಿಠಲ ದೇವಾಲಯ, ಕಲ್ಲಿನತೇರು, ಕಮಲ ಮಹಲ್‌, ಗಜಶಾಲೆ, ಮಹಾನವಮಿ ದಿಬ್ಬ, ಹೇಮಕೂಟ ಪರ್ವತ ಸೇರಿದಂತೆ ಹಂಪಿಯ ವಿವಿಧ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಈಗ ಬಿಸಿಲಿನ ಹೊಡೆತಕ್ಕೆ ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತ್ತಿದ್ದ ಪ್ರವಾಸಿಗರಲ್ಲಿ ಭಾರೀ ಇಳಿಮುಖವಾಗಿದೆ.

ಜಿ-20 ಶೃಂಗಸಭೆ ಬಳಿಕ ಹಂಪಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಹರಿದು ಬರ ತೊಡಗಿದ್ದರು. ಹಾಗಾಗಿ ಈ ಭಾಗದಲ್ಲಿ ರೆಸಾರ್ಟ್‌, ಹೋಟೆಲ್‌ಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿತ್ತು. ಆದರೆ, ಈಗ ಬಿಸಿಲಿನಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ ಎಂದು ಹೇಳುತ್ತಾರೆ ಪ್ರವಾಸಿ ಮಾರ್ಗದರ್ಶಿ ವಿರೂಪಾಕ್ಷಿ.

ಹಂಪಿ ಸ್ಮಾರಕಗಳ ವೀಕ್ಷಣೆಗೆ ವಾರ್ಷಿಕ 40 ಲಕ್ಷ ದೇಶಿ ಪ್ರವಾಸಿಗರು ಹಾಗೂ 3ಲಕ್ಷ ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಈಗ ಬಿಸಿಲು ಇರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಪ್ರವಾಸೋದ್ಯಮ ಚೇತರಿಕೆ ಕಂಡ ಬಳಿಕವೇ ದೇಶ, ವಿದೇಶಿ ಪ್ರವಾಸಿಗರು ಆಗಮಿಸಲಿದ್ದಾರೆ ಎಂದು ಹೇಳುತ್ತಾರೆ ಹಂಪಿಯ ಅಂಗಡಿ ಮಾಲೀಕರೊಬ್ಬರು.

ಹಂಪಿಯಲ್ಲಿ ಭಾರೀ ಬಿಸಿಲಿದೆ. ಹಾಗಾಗಿ ಎಲ್ಲ ಸ್ಮಾರಕಗಳನ್ನು ನೋಡಲು ಆಗುತ್ತಿಲ್ಲ. ನಾವು ಚಳಿಗಾಲದಲ್ಲೇ ಹಂಪಿಗೆ ಆಗಮಿಸಬೇಕಿತ್ತು. ಮುಂದಿನ ಬಾರಿ ಅಕ್ಟೋಬರ್‌ ರಜೆಯಲ್ಲಿ ಹಂಪಿ ನೋಡಲು ಬರುತ್ತೇವೆ ಎಂದು ಪ್ರವಾಸಿಗರಾದ ನಾಗಚಂದ್ರ, ಪ್ರಮೀಳಾ ಹೇಳಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು