ಧಾರವಾಡ:
ಮುಂಗಾರು ಬಿತ್ತನೆಗೆ ಪೂರಕವಾಗಿ ಗುರುವಾರ ಮಧ್ಯಾಹ್ನ ಧಾರವಾಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯಿತು.ಕಳೆದ ಎರಡ್ಮೂರು ದಿನಗಳಿಂದ ಬಿಸಿಲಿನ ವಾತಾವರಣವಿದ್ದು ಗುರುವಾರ ಮಧ್ಯಾಹ್ನ ಏಕಾಏಕಿ ಮೋಡ ಕವಿದು ಮಳೆರಾಯ ಅಬ್ಬರಿಸಿದನು. ಗಾಳಿ ಇಲ್ಲದೇ ಬರೀ ಸಿಡಿಲು-ಗುಡುಗಿನಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಜೋರಾಗಿ ಸುರಿಯಿತು. ಮಳೆ ನೀರಿನ ರಭಸಕ್ಕೆ ಚಿಕ್ಕಪುಟ್ಟ ಗಟಾರುಗಳು ತುಂಬಿ ರಸ್ತೆಯಲ್ಲಿಯೇ ನೀರು ಹರಿಯಿತು. ತಗ್ಗು ಪ್ರದೇಶಗಳ ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.
ತುಂಬಿದ ಬಿಆರ್‌ಟಿಎಸ್ ರಸ್ತೆ:ಪ್ರತಿ ಮಳೆಗೂ ಬಿಆರ್‌ಟಿಎಸ್ ರಸ್ತೆ ಮಾತ್ರ ನೀರಿನಿಂದ ಆವೃತವಾಗುತ್ತಿದ್ದು ಗುರುವಾರವಂತೂ ಕೋರ್ಟ್ ವೃತ್ತ, ಎನ್‌ಟಿಟಿಎಫ್, ಟೋಲನಾಕಾ ಬಳಿ ನಾಲ್ಕೈದು ಅಡಿ ನೀರು ನಿಂತು ಬೈಕ್, ಕಾರು ಚಾಲಕರಂತೂ ನೀರಲ್ಲೇ ನಿಂತು ರಸ್ತೆ ದಾಟಲು ಹರಸಾಹಸ ಪಡಬೇಕಾಯಿತು. ಸುಮಾರು ಒಂದು ಗಂಟೆ ಕಾಲ ಸಂಚಾರಕ್ಕೆ ಅಡ್ಡಿಯಾಯಿತು. ಹಾಗೆಯೇ, ಅಕ್ಕಿ ಪೇಟೆ, ಹಾವೇರಿಪೇಟೆ, ಸೂಪರ್ ಮಾರುಕಟ್ಟೆ ನೀರಿನಿಂದಲೇ ಆವೃತಿಯಾಗಿದ್ದು ರಸ್ತೆ ಬದಿ ವ್ಯಾಪಾರಸ್ಥರು ಮಳೆ ಹೊಡೆತಕ್ಕೆ ಹಣ್ಣು-ಹಂಪಲು, ತರಕಾರಿ ಸೇರಿದಂತೆ ವ್ಯಾಪಾರ ವಸ್ತುಗಳು ನೀರಿಗೆ ಆಹುತಿಯಾದವು. ಅದೇ ರೀತಿ ಕೆ.ಸಿ. ಪಾರ್ಕ್ ಹಿಂಬದಿ ರಸ್ತೆ ಕಾಮಗಾರಿ ನಡೆಯತ್ತಿದ್ದು ತಗ್ಗು ಗುಂಡಿಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿತ್ತು.
ಮುಳುಗಿದ ಕಂಠಿ ಓಣಿ:ಮುರುಘಾಮಠ ಬಳಿಯ ಕಂಠಿ ಓಣಿ ಅಕ್ಷರಶಃ ಅರ್ಧ ಮುಳುಗಿತ್ತು. ಹಲವು ಮನೆಗಳಲ್ಲಿ ಮಳೆ ನೀರು ನುಗ್ಗಿ ಬಟ್ಟೆ, ಪಾತ್ರೆ ಹಾಗೂ ಇತರೆ ವಸ್ತುಗಳು ತೊಯ್ದವು. ಕಸ-ಕಡ್ಡಿಯಿಂದ ಗಟಾರು, ಚರಂಡಿಗಳು ತುಂಬಿದ್ದು ನೀರು ಸರಾಗವಾಗಿ ಹರಿಯದೇ ಕಂಠಿ ಓಣಿ ಮಾತ್ರವಲ್ಲದೇ ಧಾರವಾಡದ ಹಲವು ಪ್ರದೇಶಗಳಲ್ಲಿ ತಾಸುಗಟ್ಟಲೇ ನಿಂತು ಜನರು ಪರದಾಡಿದರು. ಮಳೆಗಾಲದ ಸೂಚನೆ ಇದ್ದರೂ ಮಹಾನಗರ ಪಾಲಿಕೆ ಮಾತ್ರ ಯಾವ ಕ್ರಮ ಕೈಗೊಂಡಿಲ್ಲ. ಪ್ರಮುಖ ರಸ್ತೆ, ವೃತ್ತಗಳಲ್ಲಿಯೇ ಹೂಳು ತುಂಬಿದ ಗಟಾರುಗಳಿದ್ದ ಕಾರಣ ನೀರು ಸುಗಮವಾಗಿ ಹರಿಯದೇ ರಸ್ತೆಗೆ ನುಗ್ಗಿದೆ. ಕಂಠಿಗಲ್ಲಿ ಹಾಗೂ ಸುತ್ತಲೂ ಇಡೀ ಬಡಾವಣೆಯ ಮನೆಗಳು ನೀರಲ್ಲಿ ನಿಂತಿದ್ದು ಜನರು ಗಂಟೆಗಟ್ಟಲೇ ಪರದಾಡಿದರು. ಅಂತಹ ಸಂದರ್ಭದಲ್ಲಿಯೇ ವಿದ್ಯುತ್ ಸಹ ಕೈಗೊಟ್ಟಿದ್ದು ಮನೆಗೆ ನುಗ್ಗಿದ ನೀರು ಹೊರ ಹಾಕಲು ತೀವ್ರ ತೊಂದರೆಗೆ ಪಡಬೇಕಾಯಿತು ಎಂದು ಕಂಠಿಗಲ್ಲಿಯ ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಖುಷ್:ಮಳೆ ಕೊರತೆಯಿಂದ ಕಳೆದ ಮುಂಗಾರು ಹಾಗೂ ಹಿಂಗಾರು ರೈತರಿಗೆ ಕೈಕೊಟ್ಟಿದೆ. ಈಗ ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿದ್ದು ರೈತರ ಮೊಗದಲ್ಲಿ ಸಂತಸ ಕಾಣುತ್ತಿದೆ. ಈಗಾಗಲೇ ಹೊಲಗಳನ್ನು ಹದಗೊಳಿಸಿದ್ದು ಮೇ ಅಂತ್ಯ ಹಾಗೂ ಜೂನ್ ಮೊದಲ ವಾರದಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ.