ಮಣ್ಣಿನಲ್ಲಿ ತೇವಾಂಶದ ಕೊರತೆ ಉಂಟಾಗುವ ಆತಂಕದಲ್ಲಿದ್ದ ರೈತರಿಗೆ ಈ ಮಳೆ ನೆಮ್ಮದಿ
ಬಳ್ಳಾರಿ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಗುಡುಗು ಸಹಿತ ಭಾರಿ ಮಳೆಯಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು.
ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಕುರುಗೋಡು, ಕಂಪ್ಲಿ, ಸಿರುಗುಪ್ಪ ಹಾಗೂ ಸಂಡೂರು ತಾಲೂಕುಗಳ ವಿವಿಧೆಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಕೆಲವೆಡೆ ಮಳೆಯ ಅಬ್ಬರ ಜೋರಾಗಿದ್ದರೆ, ಮತ್ತೊಂದೆಡೆ ನಿರಂತರವಾಗಿ ಮಳೆ ಸುರಿದಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಗುಡುಗಿನ ಆರ್ಭಟದೊಂದಿಗೆ ಮಳೆ ಸುರಿಯಿತು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರೈತರು ಜೋಳ ಸೇರಿದಂತೆ ಹಿಂಗಾರು ಹಂಗಾಮಿನ ಬೆಳೆಗಳ ಬಿತ್ತನೆ ಕೈಗೊಂಡಿದ್ದಾರೆ. ಬಿತ್ತನೆ ಬಳಿಕ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಶುಕ್ರವಾರ ಸುರಿದ ಮಳೆ ವರದಾನವಾಗಿ ಪರಿಣಮಿಸಿದೆ.
ಮಣ್ಣಿನಲ್ಲಿ ತೇವಾಂಶದ ಕೊರತೆ ಉಂಟಾಗುವ ಆತಂಕದಲ್ಲಿದ್ದ ರೈತರಿಗೆ ಈ ಮಳೆ ನೆಮ್ಮದಿ ತಂದಿದೆ. ಬಿತ್ತನೆ ಮಾಡಿದ ಬೀಜಗಳ ಮೊಳಕೆಯೊಡೆಯಲು ಹಾಗೂ ಈಗಾಗಲೇ ಚಿಗುರೊಡೆದಿರುವ ಬೆಳೆಗಳ ಬೆಳವಣಿಗೆಗೆ ಮಳೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಒಂದೆಡೆ ಮಳೆ ರೈತರಲ್ಲಿ ಸಂತಸ ಮೂಡಿಸಿದ್ದರೆ ಮತ್ತೊಂದೆಡೆ ಬಳ್ಳಾರಿ ನಗರದಲ್ಲಿ ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿತು. ಮಳೆಯಿಂದ ನಗರದ ವಿವಿಧ ಅಂಡರ್ ಪಾಸ್‌ಗಳಲ್ಲಿ ಮಳೆ ನೀರು ಸಂಗ್ರಹಗೊಂಡು ವಾಹನಗಳ ಸಂಚಾರಕ್ಕೆ ಒಂದಷ್ಟು ಹೊತ್ತು ಅಡಚಣೆಯಾಯಿತು. ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿದ್ದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಕಾರು ಚಾಲಕರು ಪರದಾಡಿದರು.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ, ಕೊಟ್ಟೂರು, ಹರಪನಹಳ್ಳಿ,ಕೂಡ್ಲಿಗಿ ತಾಲೂಕಿನಲ್ಲಿ ತುಂತುರು ಮಳೆಯಾದ ವರದಿಯಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.