ಪಶ್ಚಿಮ ಪದವೀಧರ ಕ್ಷೇತ್ರದ ಮತದಾನ ಸುಸೂತ್ರ!

KannadaprabhaNewsNetwork |  
Published : Oct 24, 2026, 02:00 AM IST
ಕರ್ನಾಟಕ ಪಶ್ಚಿಮ ಪದವೀಧರರ ಚುನಾವಣೆಯ ಚುನಾವಣಾಧಿಕಾರಿ ಕೆ.ಎಂ.ಜಾನಕಿ ಧಾರವಾಡ ತಹಶೀಲ್ದಾರ ಕಾರ್ಯಾಲಯದ ಮತಗಟ್ಟೆ ಪರಿಶೀಲಿಸಿದರು.  | Kannada Prabha

ಸಾರಾಂಶ

ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಶುಕ್ರವಾರ ಮತದಾನ ಪ್ರಕ್ರಿಯೆಯು ಯಾವುದೇ ಗೊಂದಲಗಳಿಲ್ಲದೇ ಸುಸೂತ್ರವಾಗಿ ಜರುಗಿತು.

ಧಾರವಾಡ:

ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಶುಕ್ರವಾರ ಮತದಾನ ಪ್ರಕ್ರಿಯೆಯು ಯಾವುದೇ ಗೊಂದಲಗಳಿಲ್ಲದೇ ಸುಸೂತ್ರವಾಗಿ ಜರುಗಿತು.

ಧಾರವಾಡ ಜಿಲ್ಲೆಯ 56 ಮತಗಟ್ಟೆ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ 137 ಮತಗಟ್ಟೆಗಳಲ್ಲಿ ಬೆಳಗ್ಗೆ 8ಕ್ಕೆ ಮತದಾನ ಪ್ರಕ್ರಿಯೆ ಶುರುವಾಗಿ ಸಂಜೆ 4ಕ್ಕೆ ಮುಕ್ತಾಯವಾಯಿತು. ಸಂಜೆ 4ರೊಳಗೆ ಮತಗಟ್ಟೆ ಆವರಣಕ್ಕೆ ಬಂದ ಎಲ್ಲ ಮತದಾರಿಗೆ ಮತದಾನಕ್ಕೆ ಅವಕಾಶ ಒದಗಿಸಲಾಯಿತು.

ಗೊಂದಲ ಇಲ್ಲದೇ ಮತದಾನ:

ಈ ಚುನಾವಣೆಯಲ್ಲಿ ಇವಿಎಂ ಯಂತ್ರಗಳಿಲ್ಲದ ಕಾರಣ ಯಂತ್ರ ದೋಷದಂತಹ ಯಾವುದೇ ಸಮಸ್ಯೆ ಉದ್ಭವಿಸಲಿಲ್ಲ. ಪದವೀಧರ ಮತದಾರರು ಬ್ಯಾಲೆಟ್‌ ಪೇಪರ್‌ನಲ್ಲಿ ಸಂವಿಧಾನ ಬದ್ಧವಾಗಿ ತಮ್ಮ ಹಕ್ಕು ಚಲಾಯಿಸಿದರು. ಮತದಾನವನ್ನು ಅಂಕಿ-ಸಂಖ್ಯೆ ಮೂಲಕವೇ ಮಾಡಬೇಕೆಂದು ಸಾಕಷ್ಟು ಜಾಗೃತಿ ಮೂಡಿಸಿದರೂ ಸಹ, ಈ ಬಾರಿಯೂ ಕೆಲವರು ಶಬ್ದಗಳನ್ನು ಬರೆಯುವ ಮೂಲಕ ಅಥವಾ ಇನ್ನಾವುದೇ ಚಿಹ್ನೆ ಬಳಸುವ ಮೂಲಕ ಮತ ಹಾಕಿದ ಬಗ್ಗೆ ಮಾತುಕತೆಗಳು ಮತಗಟ್ಟೆ ಆವರಣದಲ್ಲಿ ನಡೆಯುತ್ತಿತ್ತು.

ಸೂಕ್ತ ಬಂದೋಬಸ್ತ್‌:

ಧಾರವಾಡದಲ್ಲಿ ಶುಕ್ರವಾರ ಇಡೀ ದಿನ ಮೋಡ ಕವಿದ ತಂಪು ವಾತಾವರಣ ಇದ್ದ ಕಾರಣ ಮತದಾರರು ಬೆಳಗ್ಗೆ ಅಥವಾ ಸಂಜೆ ಏಕಾಏಕಿ ಆಗಮಿಸದೇ ನಿರಂತರವಾಗಿ ಬಂದು ಮತ ಚಲಾಯಿಸಿದರು. ಸಂಜೆ 4ರ ನಂತರ ಧಾರಾಕಾರ ಮಳೆ ಸುರಿಯಿತಾದರೂ ಮತದಾನ ಪ್ರಕ್ರಿಯೆಗೆ ಯಾವುದೇ ಸಮಸ್ಯೆ ಆಗಲಿಲ್ಲ. ಪ್ರತಿ ಮತಗಟ್ಟೆ 200 ಮೀಟರ್‌ ದೂರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತದಾರರಿಗೆ ಮತ ಚೀಟಿ ನೀಡಿ ಮತ ಹಾಕಲು ಮನವಿ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಯಾವುದೇ ಗೊಂದಲ ಸೃಷ್ಟಿಯಾಗದಂತೆ ಮತಗಟ್ಟೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ ವಹಿಸಲಾಗಿತ್ತು. ಹೀಗಾಗಿ ಎಲ್ಲಿಯೂ ಗದ್ದಲ-ಗೊಂದಲ ಸೃಷ್ಟಿಯಾಗದೇ ಮತದಾನ ನಡೆಯಿತು.

ಬೇರೆಡೆ ಮತಗಟ್ಟೆಯಲ್ಲಿ ಹೆಸರು:

ನಗರದ ಕೆ.ಇ. ಬೋರ್ಡ್‌, ತಹಸೀಲ್ದಾರ್‌ ಕಚೇರಿ, ಕರ್ನಾಟಕ ಕಾಲೇಜು, ಮಾರ್ಡನ್‌ ಸ್ಕೂಲ್‌ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ಬೆಳಗ್ಗೆ ಮಾತ್ರ ಸರದಿ ಹಚ್ಚಿ ಮತ ಚಲಾಯಿಸಿದರು. ಒಂದೇ ಕುಟುಂಬದ ಎಲ್ಲ ಸದಸ್ಯರ ಹೆಸರು ಬೇರೆ ಬೇರೆ ಮತಗಟ್ಟೆಯಲ್ಲಿ ಬಂದಿದ್ದು, ಕೆಲವರಿಗೆ ಗೊಂದಲದ ಜತೆಗೆ ತೊಂದರೆಯೂ ಆಯಿತು. ಕರ್ನಾಟಕ ಕಾಲೇಜಿನ ಮತಗಟ್ಟೆಗೆ ಬಂದ ತಂದೆ ಹಾಗೂ ಮಗಳ ಮತದಾನದ ಮತಗಟ್ಟೆಗಳು ಬೇರೆ ಬೇರೆಯಾಗಿದ್ದು, ಹೀಗೆಕೆ ಎಂದು ಪ್ರಶ್ನಿಸುತ್ತಿದ್ದರು.

ಚುನಾವಣಾಧಿಕಾರಿ ಪರಿಶೀಲನೆ:

ಇನ್ನು, ಚುನಾವಣಾಧಿಕಾರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಧಾರವಾಡ ತಹಸೀಲ್ದಾರ್‌ ಕಾರ್ಯಾಲಯದ ಮತಗಟ್ಟೆ ಸಂಖ್ಯೆ 21 ಹಾಗೂ 22ಕ್ಕೆ ಭೇಟಿ ನೀಡಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಹಾಗೆಯೇ, ಸ್ವತಃ ಮತದಾರರಾಗಿದ್ದ ಜಿಲ್ಲಾಧಿಕಾರಿ ಸ್ನೇಹಲ್.ಆರ್ ಕರ್ನಾಟಕ ಕಲಾ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು. ಅದೇ ರೀತಿ ಕೆ.ಇ. ಬೋರ್ಡ್‌ ಶಾಲೆಯ ಮತಗಟ್ಟೆಯಲ್ಲಿ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಶಿವಲೀಲಾ ಕುಲಕರ್ಣಿ ಮತ ಚಲಾಯಿಸಿದರು.14 ಅಭ್ಯರ್ಥಿಗಳು ಸ್ಪರ್ಧೆ

ಬಿಜೆಪಿಯಿಂದ ಎಸ್‌.ವಿ. ಸಂಕನೂರ, ಕಾಂಗ್ರೆಸ್ಸಿನಿಂದ ಮೋಹನ ಲಿಂಬಿಕಾಯಿ ಸೇರಿದಂತೆ 14 ಜನ ಅಭ್ಯರ್ಥಿಗಳು ಈ ಚುನಾವಣೆಗೆ ಸ್ಪರ್ಧಿಸಿದ್ದಾರೆ. 14 ಅಭ್ಯರ್ಥಿಗಳ ಪೈಕಿ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಈ ಮಧ್ಯೆ ಪಕ್ಷೇತರ ಅಭ್ಯರ್ಥಿ ಕಾಂತಕುಮಾರ ಉಳಿದ ಪಕ್ಷೇತರ ಅಭ್ಯರ್ಥಿಗಳಿಂತ ಹೆಚ್ಚಿನ ಮತ ಪಡೆಯುವ ಸಾಧ್ಯತೆ ಇದೆ. ಮತದಾನ ಪ್ರಕ್ರಿಯೆ ಮುಗಿದಿದ್ದು, ಎಲ್ಲ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇದೀಗ ಮತಪಟ್ಟೆಯಲ್ಲಿ ಭದ್ರವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಮತದಾನ ಪ್ರಮಾಣ ತುಸು ಹೆಚ್ಚಾಗಿದ್ದು, ಗೆಲುವಿನ ಮಾಲೆ ಯಾರ ಕೊರಳಿಗೆ ಎಂಬುದು ಅ. 27ರಂದು ಸ್ಪಷ್ಟವಾಗಲಿದೆ.ಮತಗಟ್ಟೆಯಲ್ಲಿ ಮತಪಟ್ಟಿಗಾಗಿ ಗದ್ದಲ

ಧಾರವಾಡದ ಬಾಸೆಲ್‌ ಮಿಶನ್‌ ಹಾಗೂ ಪ್ರಜೆಂಟೇಶನ್‌ ಶಾಲೆ ಆವರಣದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಪಕ್ಷಗಳ ಏಜೆಂಟರ್‌ಗೆ ಮತದಾರರ ಪಟ್ಟಿಯನ್ನು ಮತಗಟ್ಟೆಯಲ್ಲಿ ತರಲು ಅವಕಾಶ ನೀಡದಿರುವುದನ್ನು ಕಾಂಗ್ರೆಸ್‌ ಮುಖಂಡ ದೀಪಕ ಚಿಂಚೋರೆ ತೀವ್ರವಾಗಿ ಆಕ್ಷೇಪಿಸಿದರು. ಮತಗಟ್ಟೆಯ ಸೆಕ್ಟರ್‌ ಅಧಿಕಾರಿ ಹೆಗಡೆ ಎಂಬುವರಿಗೆ ದೂರವಾಣಿ ಕರೆ ಮಾಡಿದ ಚಿಂಚೋರೆ, ನೀವೇನು ಆರ್‌ಎಸ್‌ಎಸ್‌ ಎಜೆಂಟ್‌ರಾಗಿ ಕೆಲಸ ಮಾಡುತ್ತಿದ್ದೀರಾ? ಜಿಲ್ಲಾಧಿಕಾರಿಗಳೇ ಸೂಚನೆ ನೀಡಿದರೂ ಮತಪಟ್ಟಿ ತೆಗೆದುಕೊಂಡು ಹೋಗಲು ಅವಕಾಶ ನೀಡುತ್ತಿಲ್ಲ. ಮತಪಟ್ಟಿಯ ಹೆಸರುಗಳಲ್ಲದೇ ಏಜೆಂಟರ್‌ ಯಾರನ್ನು ಗುರುತಿಸಬೇಕೆಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಾಗ ಮತಪಟ್ಟಿಗೆ ಅವಕಾಶ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ
ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಶೇ.86.50ರಷ್ಟು ಮತದಾನ