ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಾದ್ಯಂತ ಭಾನುವಾರ ಬಿರುಸಿನ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತು.ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಬಿಡುವು ನೀಡಿ ಆಗಾಗ್ಗೆ ಭಾರಿ ಮಳೆ ಸುರಿದು ಮಳೆಗಾಲದ ಅನುಭವ ನೀಡಿತು. ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರು ಪರದಾಡಿದರು.
ಸುಂಟಿಕೊಪ್ಪದಲ್ಲಿ ಭಾನುವಾರ ಸಂತೆ ದಿನವಾದ ಹಿನ್ನೆಲೆಯಲ್ಲಿ ತರಕಾರಿಗಳನ್ನು ತೆಗೆದುಕೊಳ್ಳಲು ಗ್ರಾಹಕರು ಪರದಾಡಿದರು. ಭಾರಿ ಮಳೆಯಿಂದಾಗಿ ವ್ಯಾಪಾರ ವಹಿವಾಟಿಗೂ ಅನಾನುಕೂಲ ಉಂಟಾಯಿತು.ಸತತವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಜಲ ಮೂಲಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಜಿಲ್ಲೆಯ ಹಾರಂಗಿ, ಚಿಕ್ಲಿಹೊಳೆ ಜಲಾಶಯದಲ್ಲೂ ನೀರಿನ ಒಳಹರಿವು ಹೆಚ್ಚಾಗುತ್ತಿದೆ.
ಭೂಪರಿವರ್ತನೆ ವಿರುದ್ಧ ಇಂದು ಸಿಎನ್‌ಸಿ ಜನಜಾಗೃತಿಕನ್ನಡಪ್ರಭ ವಾರ್ತೆ ಮಡಿಕೇರಿ
ಸಿದ್ದಾಪುರದ ಕಾಫಿ ತೋಟದ ಬೃಹತ್ ಭೂಪರಿವರ್ತನೆ ಸೇರಿದಂತೆ ಕೊಡಗು ಜಿಲ್ಲಾದ್ಯಂತ ನಡೆಯುತ್ತಿರುವ ಭೂಪರಿವರ್ತನೆಗಳ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಸೋಮವಾರ ಬಾಳೆಲೆಯಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.ಸೋಮವಾರ ಬೆಳಗ್ಗೆ 10.30ಕ್ಕೆ ಬಾಳೆಲೆ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಭೂಪರಿವರ್ತನೆ ವಿರುದ್ಧ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಕಾಫಿ ತೋಟಗಳ ಭೂಪರಿವರ್ತನೆಯಿಂದ ಕೊಡಗಿನ ಎಲ್ಲ ಗ್ರಾಮಗಳು ನಾಶವಾಗುತ್ತಿವೆ. ಮಣ್ಣು ಅಗೆಯುವ ಕೆಲಸದಿಂದ ಬಹುವಾರ್ಷಿಕ ಜಲಮೂಲಗಳು ಮುಚ್ಚಿವೆ. ಈ ಬಗ್ಗೆ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇದರೊಂದಿಗೆ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್, ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಮಾನ್ಯ ಮಾಡಬೇಕು ಸೇರಿದಂತೆ ಇಡೀ ಕೊಡವ ಜನಾಂಗದ ಪರವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.ಮುಂದಿನ ದಿನಗಳಲ್ಲಿ ಮಡಿಕೇರಿ, ಸುಂಟಿಕೊಪ್ಪ, ಮಾದಾಪುರ, ಚೆಟ್ಟಳ್ಳಿ, ಚೇರಂಬಾಣೆ, ಮೂರ್ನಾಡು, ಕಕ್ಕಬೆ, ನಾಪೋಕ್ಲು, ವಿರಾಜಪೇಟೆ, ಸಿದ್ದಾಪುರ, ಗೋಣಿಕೊಪ್ಪ, ತಿತಿಮತಿ, ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ, ಕುಟ್ಟ, ಶ್ರೀಮಂಗಲ, ಟಿ.ಶೆಟ್ಟಿಗೇರಿ ಮತ್ತಿತರೆಡೆ ಕೂಡ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.