ಜಿಲ್ಲೆಯಲ್ಲಿ ಹಲವೆಡೆ ಮಂಗಳವಾರ ಸಂಜೆ ಗುಡುಗು, ಗಾಳಿ ಸಹಿತ ಮಳೆ ಸುರಿಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಹಲವೆಡೆ ಮಂಗಳವಾರ ಸಂಜೆ ಗುಡುಗು, ಗಾಳಿ ಸಹಿತ ಮಳೆ ಸುರಿಯಿತು.
ಭಾರೀ ಗಾಳಿಯಿಂದಾಗಿ ಮನೆ, ಶಾಲೆ ಇತರೆ ಕಟ್ಟಡಗಳ ಹೆಂಚು ಮತ್ತು ಶೀಟುಗಳು ಹಾರಿ ಹೋಗಿವೆ. ಅಲ್ಲಲ್ಲಿ ಮರಗಳು ಧರೆಗುರುಳಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ. ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸೋಮವಾರ ಸಂಜೆ ಶಿವಮೊಗ್ಗ ತಾಲೂಕಿನ ವಿವಿಧೆಡೆ ಬಿದ್ದ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದಾಗಿ ನೂರಾರು ಅಡಕೆ ಮತ್ತು ತೆಂಗಿನ ಗಿಡಗಳು ನೆಲಕ್ಕುರುಳಿದೆ. ಮತ್ತೊಂದೆಡೆ ಭತ್ತದ ಗದ್ದೆಗಳು ಆಲಿಕಲ್ಲು ಹೊಡೆತಕ್ಕೆ ನೆಲಕಚ್ಚಿವೆ.
ಸೋಮವಾರ ಸಂಜೆ 7 ಗಂಟೆ ಬಳಿಕ ಶಿವಮೊಗ್ಗ ತಾಲೂಕಿನ ಹೊಳಲೂರು ಮತ್ತು ನಿದಿಗೆ ಹೋಬಳಿ ವ್ಯಾಪ್ತಿಗೊಳಪಟ್ಟ ಹಸೂಡಿ, ಹೊಳೆಬೆನವಳ್ಳಿ ಮತ್ತು ಹೊನ್ನವಿಲೆ ಭಾಗದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಬೆಳೆ ಹಾನಿ ಸಂಭವಿಸಿದೆ.
ಪ್ರಮುಖವಾಗಿ ಹಸೂಡಿ ಸಮೀಪದ ಚಿಕ್ಕಮರಡಿ ಗ್ರಾಮದಲ್ಲಿ ಗಾಳಿಯ ರಭಸದಿಂದ ತೆಂಗು ಮತ್ತು ಅಡಿಕೆ ಮರಗಳು ಬುಡಸಮೇತ ಧರೆಗುರುಳಿವೆ. ಹಸೂಡಿಯ ಗಿರೀಶ್ ಎಂಬುವರ ತೋಟದಲ್ಲಿ ಫಸಲು ಕೊಡುವ ಸುಮಾರು ಐವತ್ತಕ್ಕೂ ಅಧಿಕ ಅಡಕೆ ಮರಗಳು ಧರೆಗುರುಳಿದ್ದು, ಭಾರೀ ನಷ್ಟ ಸಂಭವಿಸಿದೆ. ಇದೇ ತೋಟದ ಆಸುಪಾಸಿನಲ್ಲಿರುವ ತೋಟಗಳಲ್ಲಿ ಸಹ ಅಡಿಕೆ ಮತ್ತು ತೆಂಗಿನ ಮರಗಳು ನೆಲಕ್ಕುರುಳಿವೆ.
ಇದಲ್ಲದೇ ಆಲಿಕಲ್ಲು ಹೊಡೆತಕ್ಕೆ ಸಿಲುಕಿ ಅಡಿಕೆ ಮರದ ಹಿಂಗಾರ ಮತ್ತು ಹೂವುಗಳು ಹಾನಿಯಾಗಿದ್ದು, ಇದರಿಂದಾಗಿ ಈ ಬಾರಿ ಅಡಿಕೆ ತೋಟದ ರೈತರು ಬೆಳೆ ನಷ್ಟ ಅನುಭವಿಸಬೇಕಾಗಿದೆ.
ನಿದಿಗೆ ಹೋಬಳಿಯ ಹೊನ್ನವಿಲೆ ಭಾಗದಲ್ಲಿ ಭತ್ತದ ಗದ್ದೆಗಳಲ್ಲಿ ಆಲಿಕಲ್ಲು ಮಳೆಯ ಪರಿಣಾಮ ಬೆಳೆದುನಿಂತ ಭತ್ತದ ಸಸಿ ಸಂಪೂರ್ಣ ನೆಲಸಮಗೊಂಡಿವೆ.
ಕೆಲವೆಡೆ ಅಡಿಕೆ ಮತ್ತು ತೆಂಗಿನ ಮರಗಳು, ಮನೆಗಳು ಮತ್ತು ವಿದ್ಯುತ್ ಲೈನ್ ಮೇಲೆ ಬಿದ್ದು ಹಾನಿ ಸಂಭವಿದೆ.
ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ: ಧರೆಗುರುಳಿದ ಮರ
ತೀರ್ಥಹಳ್ಳಿ: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ಮಳೆರಾಯ ತಂಪೆರದಿದ್ದರೆ ಇನ್ನೊಂದಡೆ ಮಳೆಯ ಆರ್ಭಟಕ್ಕೆ ಮರ ಧರೆಗುರುಳಿದ ಘಟನೆ ಸೋಮವಾರ ರಾತ್ರಿ ಬಾಳೆಬೈಲು ಸಮೀಪ ನಡೆದಿದೆ. ಬಾಳೆಬೈಲಿನ ಕವಿತಾ ಹೋಟೆಲ್ ಮುಂಭಾಗ ಮರವೊಂದು ಧರೆಗುರುಳಿದ್ದು, ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ಇದರ ಪರಿಣಾಮ ರಸ್ತೆಯಲ್ಲಿ ಆಗುಂಬೆ ತೀರ್ಥಹಳ್ಳಿ ಮಾರ್ಗದ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸೋಮವಾರ ರಾತ್ರಿ ಸುರಿದ ಗುಡುಗು ಸಿಡಿಲಿನ ಜೊತೆಗೆ ಮಳೆ ಆರ್ಭಟಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಪಟ್ಟಣದ ಬಿಲ್ಡಿಂಗ್ ಒಂದರ ಮೇಲೆ ಅಳವಡಿಸಿದ ಜಾಹೀರಾತು ನಾಮಫಲಕದ ಬೋರ್ಡ್ ಮಾತೃಶ್ರೀ ಎಲೆಕ್ಟ್ರಾನಿಕ್ ಮೇಲೆ ಬಿದ್ದಿದೆ. ಇದರಿಂದ ಯಾವುದೇ ತೊಂದರೆ ಉಂಟಾಗಿಲ್ಲ. ಇತ್ತ ವಾಹನ ಸಂಚಾರರು ಪರದಾಡುವಂಥ ಸ್ಥಿತಿ ಉಂಟಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.