ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಪ್ರಸ್ತುತ ವರ್ಷದಲ್ಲಿ ಚಳ್ಳಕೆರೆ ತಾಲ್ಲೂಕಿನಾದ್ಯಂತ ಜನರ ನಿರೀಕ್ಷೆಯನ್ನು ಹುಸಿಗೊಳಿಸುವಂತೆ ಭಾರಿ ಪ್ರಮಾಣದಲ್ಲಿ ವರುಣರಾಯ ಆಗಮಿಸಿ ಜನರಿಗೆ ಸಂತಸವನ್ನುಂಟು ಮಾಡಿದ್ದಾನೆ. ಆದರೆ, ಇದರ ಬೆನ್ನ ಹಿಂದೆಯೇ ಹೆಚ್ಚಿನ ಮಳೆಯಿಂದ ಮನೆ, ಬೆಳೆಗೂ ಹೆಚ್ಚಿನ ಹಾನಿಯಾಗಿದ್ದಲ್ಲದೆ, ನಗರದ ಕೆಳ ಅಂತಸ್ತಿನ ಅಂಗಡಿ ಮಳಿಗೆ, ಮನೆಗಳಿಗೆ ನೀರು ನುಗ್ಗಿ ಅಪಾರವಾದ ಹಾನಿ ಉಂಟು ಮಾಡಿದೆ.ನಗರ ವ್ಯಾಪ್ತಿಯ ಬೊಮ್ಮಸಮುದ್ರ ರಸ್ತೆಯ ಮೈರಾಡ ಕಾಲೋನಿಯ ಸುಮಾರು ೧೨ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿನ ಆಹಾರ ಪದಾರ್ಥ, ಬಟ್ಟೆ, ವಸ್ತುಗಳು ನೀರಿನಿಂದ ಆವೃತ್ತಿಯಾಗಿವೆ. ನಗರದ ಹೃದಯ ಖಾಗದಲ್ಲಿರುವ ಖಾಸಗಿ ಬಸ್ಟಾಂಡ್ ಹಿಂಭಾಗದ ಎಂ.ಸಂಜೀವಪ್ಪ (ರಾಜಣ್ಣ) ಎಂಬುವವರ ಮಂಜುನಾಥ ಆಟೋ ಗ್ಯಾರೇಜ್ ಮತ್ತು ಬ್ಯಾಟರಿ ಸರ್ವಿಸ್ ಕೇಂದ್ರದ ಎರಡು ಮಳಿಗೆಗೆ ಅಪಾರವಾದ ನೀರು ನುಗ್ಗಿ ಸುಮಾರು ಮೂರು ಲಕ್ಷ ರು.ನಷ್ಟ ಸಂಭವಿಸಿದೆ.
ಕೃತ್ತಿಕಾ ಮಳೆಯ ಅಂತಿಮ ದಿನವಾದ ಶುಕ್ರವಾರ ತಡರಾತ್ರಿ ತಾಲ್ಲೂಕಿನಾದ್ಯಂತ ಮತ್ತೊಮ್ಮೆ ಮಳೆ ಪ್ರಮಾಣ ಹೆಚ್ಚಿದ್ದು, ಚಳ್ಳಕೆರೆ-೫೦.೦೦, ಪರಶುರಾಮಪುರ-೩೬.೦೪, ತಳಕು-೫೧.೦೨, ನಾಯಕನಹಟ್ಟಿ-೬೫.೦೬, ದೇವರಮರಿಕುಂಟೆ-೪೧.೦೨ ಒಟ್ಟು ೨೪೩.೧೪ ಎಂ.ಎಂ. ಮಳೆಯಾಗಿದ್ದು, ಕಳೆದ ಮೇ.೨೨ರಂದು ತಾಲ್ಲೂಕಿನಾದ್ಯಂತ ೫೫೦.೧೭ ಎಂ.ಎಂ. ಮಳೆಯಾಗಿತ್ತು. ಒಟ್ಟು ೭೯೪.೧೧ ಎಂ.ಎಂ. ಮಳೆಗಾಗಿದೆ. ಕಳೆದ ಸುಮಾರು ಹತ್ತು ವರ್ಷಗಳಿಗೆ ಹೋಲಿಸಿದಲ್ಲಿ ೨೦೨೪ರ ಮಳೆ ಪ್ರಾರಂಭದಲ್ಲೇ ಜನರಿಗೆ ಹೆಚ್ಚಿನ ಆತ್ಮವಿಶ್ವಾಸ ಉಂಟು ಮಾಡಿದೆ. ಮಳೆ ಪ್ರಾರಂಭವಾಗಿ ಈಗಾಗಲೇ ೧೫ ದಿನಗಳಾಗಿದ್ದು, ಮೇ.೧೨ರಿಂದ ಆರಂಭವಾದ ಮೇ.೨೫ರ ತನಕ ಒಟ್ಟು ೭೯೪.೧೧ ಮಳೆಯಾಗಿದೆ.ಪ್ರಸ್ತುತ ತಾಲ್ಲೂಕಿನಾದ್ಯಂತ ಸುರಿದ ಹದಮಳೆಗೆ ಭೂಮಿ ತಂಪಾಗಿ ಕೃಷಿ ಚಟುವಟಿಕೆ ಆರಂಭಿಸಲು ರೈತರು ಕಾಯೋನ್ಮುಖರಾಗಿದ್ದಾರೆ. ಮುಂದಿನ ದಿನಗಳಲ್ಲೂ ಸಹ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ರೈತ ಈ ಬಾರಿ ಬಿತ್ತನೆ ಕಾರ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸುವ ಎಲ್ಲಾ ಲಕ್ಷಣಗಳಿವೆ. ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಮನೆಗಳು ಕುಸಿದು ಬಿದಿದ್ದಲ್ಲದೆ, ಜಮೀನಿನಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಬೆಳೆಗಳು ಸಹ ನೀರುಪಾಲಾಗಿವೆ.
ತಾಲ್ಲೂಕಿನ ತಳಕು ಹೋಬಳಿಯ ಘಟಪರ್ತಿ ಗ್ರಾಮದ ರಿ.ಸರ್ವೆ ನಂ. ೩೯/೩ರ ಎರಡು ಎಕರೆ ಪ್ರದೇಶದಲ್ಲಿದ್ದ ನಾಗವೇಣಿ ಎಂಬುವವರಿಗೆ ಸೇರಿದ ಟಮೋಟ ಬೆಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಕೆ.ಡಿ.ಕೋಟೆ ವ್ಯಾಪ್ತಿಯ ತಪ್ಪಗೊಂಡನಹಳ್ಳಿ ಗ್ರಾಮದಲ್ಲಿ ರಿ.ಸರ್ವೆ ನಂ.೫೧ರಲ್ಲಿ ಶಾಂತಮ್ಮ ಎಂಬುವವರಿಗೆ ಸೇರಿದ ಒಂದು ಎಕರೆ ಪ್ರದೇಶದ ರಾಗಿಬೆಳೆ ನೀರಿನಲ್ಲಿ ಮುಳುಗಿದೆ.ತಿಪ್ಪಾರೆಡ್ಡಿಹಳ್ಳಿ ಗ್ರಾಮದಲ್ಲಿ ಲಕ್ಷಿö್ಮದೇವಿ ಎಂಬುವವರಿಗೆ ಸೇರಿದ ಮನೆ ಕುಸಿದು ಬಿದ್ದು ೫೦ ಸಾವಿರ ನಷ್ಟ ಉಂಟಾಗಿದೆ. ಓಬಯ್ಯನಹಟ್ಟಿ ಗ್ರಾಮದ ಪ್ರೇಮಲತಾ ಎಂಬುವವರಿಗೆ ಸೇರಿದ ಮನೆ ಬಿದ್ದು ೫೦ ಸಾವಿರ, ಗುಂತಕೋಲಮ್ಮನಹಳ್ಳಿ ಗ್ರಾಮದ ಪಾಲಮ್ಮ ಎಂಬುವವರಿಗೆ ಸೇರಿದ ಮನೆ ಬಿದ್ದು ೩೦ ಸಾವಿರ, ನಾಯಕನಹಟ್ಟಿ ವಾಸಿ ಪ್ರಭಣ್ಣ ಎಂಬುವವರ ಸೇರಿದ ವಾಸದ ಮನೆ ಬಿದ್ದು ೫೦ ಸಾವಿರ ನಷ್ಟವಾಗಿದೆ. ಗಿಡ್ಡಾಪುರದ ವಾಸಿ ಕೊಲ್ಲಾರಮ್ಮ ಎಂಬುವವರಿಗೆ ಸೇರಿದ ಮನೆ ಬಿದ್ದು ೪೫ ಸಾವಿರ, ಕುದಾಪುರ ಗ್ರಾಮದ ಮಂಗಳಮ್ಮ ಎಂಬುವವರ ಜಮೀನಿನಲ್ಲಿದ್ದ ಸುಮಾರು ೭ ತೆಂಗಿನ ಮರಗಳಿಗೆ ಸಿಡಿಲು ಬಡಿದು ಸಂಪೂರ್ಣಸುಟ್ಟಿವೆ. ಮೊಳಕಾಲ್ಮೂರಲ್ಲಿ ಮಳೆಗೆ ಗರಿಗೆದರಿದ ಕೃಷಿ ಚಟುವಟಿಕೆ
ಮೊಳಕಾಲ್ಮೂರು: ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುರಿದ ಬಾರಿ ಮಳೆ ಗಾಳಿಗೆ 8 ಮನೆಗಳು ಭಾಗಶಃ ಕುಸಿದಿದ್ದು, 2 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಮತ್ತೊಂದೆಡೆ ರೈತರು ಕೃಷಿ ಭೂಮಿಗಳತ್ತ ಮುಖ ಮಾಡುತ್ತಿದ್ದು, ಕೃಷಿ ಚಟುವಟಿಕೆಗಳು ಮೆಲ್ಲನೆ ಗರಿಗೆದರಿ, ಜಮೀನುಗಳು ಹಸನಾಗುತ್ತಿವೆ.ತಾಲೂಕಿನ ಕಸಬಾ ಹಾಗೂ ದೇವಸಮುದ್ರ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದ್ದು, ಹೊಸ ದಡಗುರು. ಮಾಚೇನಹಳ್ಳಿ, ಚಿಕ್ಕೋಬನ ಹಳ್ಳಿ, ಮೊಗಲಹಳ್ಳಿ, ಬಾಂಡ್ರಿವಿ, ನೇರ್ಲಹಳ್ಳಿ, ನಾಗಸಮುದ್ರ, ಉಚ್ಚಂಗಿ ದುರ್ಗದಲ್ಲಿ ತಲಾ ಒಂದು ಮನೆ ಭಾಗಶಃ ಕುಸಿದಿವೆ. ದೇವಸಮುದ್ರ ಹೋಬಳಿಯ ಜಾಗೀರ ಬುಡ್ಡೆನಹಳ್ಳಿ ಗ್ರಾಮದ ರೈತ ಸಣ್ಣ ಗಂಗಪ್ಪ, ಓಬಳಾಪುರ ಗ್ರಾಮದ ರೈತರಾದ ಕುಮಾರಪ್ಪ, ಸಣ್ಣ ಗಂಗಪ್ಪಗೆ ಸೇರಿದ ಎರಡು ಎಕರೆ ಕೊಯ್ಲಿಗೆ ಬಂದಿದ್ದ ಬಾಳೆ ಬೆಳೆ ಹಾನಿಯಾಗಿದ್ದು ಲಕ್ಷಾಂತರ ರು.ಗಳ ನಷ್ಟ ಸಂಭವಿಸಿದೆ.ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಗಾಳಿ ಮಳೆಯಿಂದಾಗಿ ರಾತ್ರಿ ಮೊಳಕಾಲ್ಮೂರು ಪಟ್ಟಣ ಸೇರಿದಂತೆ ಬಿಜಿಕೆರೆ, ಕೊಂಡ್ಲಹಳ್ಳಿ, ಕೋನಸಾಗರ, ರಾಯಪುರ, ಸಿದ್ದಯ್ಯನ ಕೋಟೆ, ನಾಗಸಮುದ್ರ, ನೇತ್ರನಹಳ್ಳಿ, ಮಾರ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬಾರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಬಿಜಿಕೆರೆಯಲ್ಲಿ ಲಿಡ್ಕರ್ ಮನೆಗಳಿಗೆ ಹಾಗು ಅಂಬೇಡ್ಕರ್ ಕಾಲೋನಿಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.ಪಟ್ಟಣದ ರಾಜ ಕಾಲುವೆ ತುಂಬಿ ಹರಿದಿದ್ದು, ರಾಯಾಪುರ ಕೆರೆಗೆ ಅಪಾರ ಪ್ರಮಾಣದ ನೀರು ಹರಿದಿದೆ. ಪ್ರಮುಖ ಜೀವನಾಡಿ ಜಿನಗಿ ನದಿಗೆ ಜೀವ ಕಳೆ ಬಂದಿದೆ. ತೀವ್ರ ಬರದ ಬವಣೆಗೆ ಸಿಲುಕಿ ತತ್ತರಿಸಿದ್ದ ಜನತೆಗೆ ರಾತ್ರಿ ಸುರಿದ ಮಳೆಯಿಂದ ಬಾರಿ ತಾಪಮಾನದಿಂದ ಕಾದ ಕಬ್ಬಿಣದಂತಾಗಿದ್ದ ಭೂಮಿಯನ್ನು ತಂಪಾಗಿಸಿದ್ದು, ಜಲಮೂಲಗಳಿಗೆ ಜೀವ ಕಳೆ ಬಂದಂತಾಗಿದೆ. ಮೊಳಕಾಲ್ಮುರು 34.0, ರಾಯಾಪುರ 45.2, ಬಿಜಿ ಕೆರೆ 38.4,ರಾಂಪುರ 16,ದೇವಸಮುದ್ರ 20.2 ಮಿ. ಮೀ ಮಳೆಯಾಗಿದೆ.