ಕೊಡಗು ಜಿಲ್ಲೆಯಾದ್ಯಂತ ಗುರುವಾರ ಕೂಡ ಭಾರಿ ಮಳೆಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಾದ್ಯಂತ ಗುರುವಾರ ಕೂಡ ಭಾರಿ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತು. ಶುಕ್ರವಾರವೂ ಭಾರತೀಯ ಹವಾಮಾನ ಇಲಾಖೆ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ.
ಭಾರಿ ಮಳೆಗೆ ನದಿ ತೊರೆಗಳು ಉಕ್ಕಿ ಹರಿಯುತ್ತಿದೆ. ಕಾವೇರಿ ನದಿ ಪಾತ್ರದ ಹಲವೆಡೆ ಪ್ರವಾಹ ಉಂಟಾಗುವ ಆತಂಕ ಎದುರಾಗಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಮೂರ್ನಾಡು ಸಂಪರ್ಕ ಕಡಿತಗೊಂಡಿದೆ. ನಾಪೋಕ್ಲು ಮೂರ್ನಾಡು ರಸ್ತೆ ಮೇಲೆ ಮೂರು ಕಡೆ ಪ್ರವಾಹವಾಗಿದೆ.
ಹೊದವಾಡ, ಬೊಳಿಬಾಣೆ, ಹೊದ್ದೂರು ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಕಾವೇರಿ ನದಿ ಉಕ್ಕಿ ಹರಿದು ಕಾಫಿ, ಬಾಳೆ ಅಡಿಕೆ ತೋಟಗಳು ಜಲಾವೃತಗೊಂಡಿದೆ.
ಪ್ರವಾಹ ತುಂಬಿದ ರಸ್ತೆ ದಾಟಲು ವಾಹನ ಸವಾರರ ಹುಚ್ಚು ಸಾಹಸ ಪಡುವಂತಾಗಿದೆ.
ನಾಪೋಕ್ಲು ಭಾಗದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ನಾಪೋಕ್ಲು ಚೆರಿಯಪರಂಬು ರಸ್ತೆ ಸಂಪರ್ಕ ಬಂದ್ ಆಗಿದೆ. ಇದರಿಂದ ಮದುಮಗಳನ್ನು ಕರೆತರಲು ತೆಪ್ಪ ಬಳಕೆ ಮಾಡಲಾಗಿದೆ. ಬಸ್ಸಿನಲ್ಲಿ ಬಂದು ತೆಪ್ಪದ ಮೂಲಕ ಜನರು ಗ್ರಾಮಕ್ಕೆ ತೆರಳಿದ್ದಾರೆ. ಮಸೀದಿಯಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮದುಮಗಳ ತವರು ಮನೆಗೆ ಕರೆತರುವ ಸಂಪ್ರದಾಯ ನಡೆಯಿತು. ಮೂರು ದಿನದ ಹಿಂದೆ ವಿವಾಹ ಕಾರ್ಯ ನಡೆದಿತ್ತು. ತೆಪ್ಪದ ಮೂಲಕ ಮಹಿಳೆಯರು ಮತ್ತು ಮಕ್ಕಳು ಸಾಗಿದ್ದಾರೆ.
ಮರ ಬಿದ್ದು ರಸ್ತೆ ತಡೆ:
ಎಮ್ಮೆಮಾಡು ಗ್ರಾಮದ ಕದಿಸಮ್ಮ ರವರ ವಾಸದ ಮನೆಯ ಅಡುಗೆ ಮನೆಯ ಒಂದು ಭಾಗದ ಗೋಡೆ ಬಿದ್ದು ಹಾನಿಯಾಗಿರುತ್ತದೆ ಹಾಗೂ ಮನೆಯ ಗೋಡೆ ಬಿರುಕು ಬಿಟ್ಟಿರುತ್ತದೆ. ಶೆಟ್ಟಿಗೇರಿ ಮತ್ತು ಹೈಸೂಡ್ಲೂರು ಮಧ್ಯೆ ಮರ ಬಿದ್ದು ರಸ್ತೆ ತಡೆ ಉಂಟಾಗಿದೆ.
ಪೊನ್ನಂಪೇಟೆ ಹೋಬಳಿಯ ಕಾನೂರು ಗ್ರಾಮದ ರಸ್ತೆಯು ಮಳೆಯಿಂದಾಗಿ ಜಲಾವೃತಗೊಂಡಿದೆ. ಹಾಗೆಯೇ ಈ ಗ್ರಾಮಕ್ಕೆ ತೆರಳಲು ಬದಲಿ ಸಂಪರ್ಕ ರಸ್ತೆ ಇದೆ.
ಅರಪಟ್ಟು ಗ್ರಾಮದ ಜುನೈದ್ ಅವರ ವಾಸದ ಮನೆ ಪಕ್ಕದಲ್ಲಿ ಬರೆ ಜರಿದು ಮನೆಯ ಹಿಂಭಾಗ ಮಣ್ಣು ಕುಸಿದಿದೆ.
ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆ ರಸ್ತೆ ಕಾವೇರಿ ನದಿ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದ್ದು, ಅಂದಾಜು ರಸ್ತೆಯಲ್ಲಿ 4 ಅಡಿ ನೀರಿತ್ತು. ಈ ಬಗ್ಗೆ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ಅಪಾಯದ ಸ್ಥಳಗಳಿಗೆ ತೆರಳದಂತೆ ಹಾಗೂ ಆ ಭಾಗದ ಜನರಿಗೆ ಕಾಳಜಿ ಕೇಂದ್ರಕ್ಕೆ ಬರಲು ಸೂಚಿಸಿದರು. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಿರುಂದಾಡು ಗ್ರಾಮದ ದೇವಜನ ಪುಷ್ಪವೇಣಿ ರವರ ವಾಸದ ಮನೆಯ ಒಂದು ಭಾಗದ ಗೋಡೆ ಪೂರ್ಣವಾಗಿ ಹಾನಿಯಾಗಿರುತ್ತದೆ.
ಮಳೆ ವಿವರ :
ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 92.55 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 62.63 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1327.46 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 644.95 ಮಿ.ಮೀ ಮಳೆಯಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.