ತೃಪ್ತಿದಾಯಕ ಸೇವೆ ನೀಡಲು ಅಂಚೆ ಇಲಾಖೆ ಬದ್ಧ: ಚಿದಾನಂದ

KannadaprabhaNewsNetwork |  
Published : Jun 27, 2025, 12:54 AM IST
ಕೂಡ್ಲಿಗಿ ಪಟ್ಟಣದ ಪ್ರಧಾನ ಅಂಚೆ ಕಚೇರಿಯಲ್ಲಿ ಎಪಿಟಿ ೨.೦ ತಂತ್ರಾಂಶ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ   ಬಳ್ಳಾರಿ ಅಂಚೆ ಅಧೀಕ್ಷಕ ಪಿ.ಚಿದಾನಂದ ಮಾತನಾಡಿದರು.  | Kannada Prabha

ಸಾರಾಂಶ

ಅಂಚೆ ಇಲಾಖೆಯಲ್ಲಿ ಅಡ್ವಾನ್ಸಡ್‌ ಪೋಸ್ಟಲ್ ಟೆಕ್ನಾಲಜಿ (ಎಪಿಟಿ ೨.೦) ತಂತ್ರಾಂಶ ಅಂಚೆ ಇಲಾಖೆಯ ಎಲ್ಲಾ ಗ್ರಾಹಕರಿಗೆ ಸುಧಾರಿತ ಹಾಗೂ ತೃಪ್ತಿದಾಯಕವಾದ ಸೇವೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಅಂಚೆ ಕಚೇರಿಯಲ್ಲಿ ಎಟಿಪಿ 2.0 ತಂತ್ರಾಂಶ ಅಳವಡಿಕೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಅಂಚೆ ಇಲಾಖೆಯಲ್ಲಿ ಅಡ್ವಾನ್ಸಡ್‌ ಪೋಸ್ಟಲ್ ಟೆಕ್ನಾಲಜಿ (ಎಪಿಟಿ ೨.೦) ತಂತ್ರಾಂಶ ಅಂಚೆ ಇಲಾಖೆಯ ಎಲ್ಲಾ ಗ್ರಾಹಕರಿಗೆ ಸುಧಾರಿತ ಹಾಗೂ ತೃಪ್ತಿದಾಯಕವಾದ ಸೇವೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕ ಪಿ.ಚಿದಾನಂದ ಹೇಳಿದರು.

ಪಟ್ಟಣದ ಕೂಡ್ಲಿಗಿ ಪ್ರಧಾನ ಅಂಚೆ ಕಚೇರಿಯಲ್ಲಿ ಕೂಡ್ಲಿಗಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉಪ ಅಂಚೆ ಕಚೇರಿಗಳು ಮತ್ತು ಶಾಖಾ ಅಂಚೆ ಕಚೇರಿಗಳಲ್ಲಿ ಎಪಿಟಿ ೨.೦ ತಂತ್ರಾಂಶ ಅಳವಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯ ಅಂಚೆ ಇಲಾಖೆಯು 170 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ಭಾರತೀಯ ಜನ ಸಮುದಾಯದ ನಾಡಿ ಮಿಡಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಆಧುನಿಕ ಯುಗದ ಸವಾಲುಗಳಿಗೆ ಒಡ್ಡಿಕೊಂಡು ತನ್ನ ಗ್ರಾಹಕರಿಗೆ ಯಾವಾಗಲೂ ಉತ್ತಮವಾದ ಸೇವೆಗಳನ್ನು ಒದಗಿಸುವಲ್ಲಿ ಇಲಾಖೆಯು ಸದಾ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಮೈಸೂರುನಲ್ಲಿರುವ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಪೋಸ್ಟಲ್ ಟೆಕ್ನಾಲಜಿ ಎನ್ನುವ ತನ್ನದೇ ತಾಂತ್ರಿಕ ವಿಭಾಗದ ನುರಿತ ಸಿಬ್ಬಂದಿ ವರ್ಗದವರೇ ರೂಪುಗೊಳಿಸಿದ ಹೊಸದಾದ ಅತ್ಯಂತ ಸುಧಾರಿತ ಮತ್ತು ಗ್ರಾಹಕ ಸ್ನೇಹಿ ತಂತ್ರಾಂಶವನ್ನು ದೇಶದ ಎಲ್ಲಾ ಅಂಚೆ ಕಚೇರಿಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿಸಿದರು.

ಈ ಮೊದಲು ಬಳಸುತ್ತಿದ್ದ ತಂತ್ರಾಂಶಗಳು ಅನ್ಯ ಟೆಕ್-ಕಂಪೆನಿಗಳಿಂದ ಪಡೆದದ್ದರಿಂದ ಬಹಳ ತೊಂದರೆಗಳನ್ನು ಎದುರಿಸಬೇಕಾಗಿತ್ತು. ಹಾಗಾಗಿ ಅಂಚೆ ಇಲಾಖೆಯು ತನ್ನದೇ ನುರಿತ ತಂತ್ರಜ್ಞರಿಂದ ಗ್ರಾಹಕರಿಗೂ ಹಾಗೂ ತಂತ್ರಾಂಶವನ್ನು ಬಳಸುವ ಉದ್ಯೋಗಿಗಳಿಗೂ ಅನುಕೂಲವಾಗುವಂತೆ ಅಡ್ವಾನ್ಸಡ್ ಪೋಸ್ಟಲ್ ಟೆಕ್ನಾಲಜಿ ೨.೦ ರೂಪಿಸಲಾಗಿದೆ ಎಂದರು.

ಪೋಸ್ಟ್ ಮ್ಯಾನ್ ಕಾಗದ-ಪತ್ರಗಳನ್ನು ಬಟವಾಡೆ ಮಾಡುವ ಪ್ರಕ್ರಿಯೆ ಸುಧಾರಿಸಲಾಗಿದ್ದು, ಗ್ರಾಹಕರ ಮನೆಯ ಬಾಗಿಲಿನಲ್ಲಿಯೇ ಪತ್ರ ಬಟವಾಡೆಯಾದ ಬಗ್ಗೆ ಮಾಹಿತಿಯು ಪತ್ರ ಸ್ವೀಕರಿಸಿದವರ ಮೊಬೈಲ್ ಸಂಖ್ಯೆಗೂ ಹಾಗೂ ಪತ್ರವನ್ನು ಕಳುಹಿಸಿದವರ ಮೊಬೈಲ್ ಸಂಖ್ಯೆಗೂ ರವಾನೆಯಾಗಲಿದೆ ಎಂದರು.

ಹೊಸ ತಂತ್ರಾಂಶದಲ್ಲಿ ಅಂಚೆ ಇಲಾಖೆಯ ಗ್ರಾಹಕರು ತಮ್ಮ ಮನೆಯಿಂದಲೇ ಕಾಗದ ಪತ್ರಗಳನ್ನು ಬುಕ್ ಮಾಡಿಕೊಳ್ಳಬಹುದು ಹಾಗೂ ಅವುಗಳನ್ನು ತಮ್ಮ ಮನೆಯಿಂದಲೇ ಅಂಚೆ ಕಚೇರಿಗೆ ತೆಗೆದುಕೊಂಡು ಹೋಗುವಂತೆ ಸೇವೆಯನ್ನು ಸಹ ಬಳಸಿಕೊಳ್ಳಬಹುದು. ಇದು ಅತ್ಯಂತ ಆಕರ್ಷಣೀಯ ಹಾಗೂ ಗ್ರಾಹಕೋಪಯೋಗಿ ಸೇವೆಯಾಗಿದೆ ಎಂದು ತಿಳಿಸಿದರು.

ಕೂಡ್ಲಿಗಿ ಅಂಚೆ ನಿರೀಕ್ಷಕ ಶಶಿಕುಮಾರ, ಅಂಚೆಪಾಲಕ ವೆಂಕಟೇಶ, ಅಂಚೆ ಸಹಾಯಕರಾದ ಗಂಡಿ ವಿರೂಪಾಕ್ಷಪ್ಪ, ಎಚ್.ಎಂ. ಕೊಟ್ರಯ್ಯ, ಕುರಿ ಚಿಕ್ಕಪ್ಪ ಅಂಚೆ ಪೇದೆಗಳಾದ ಮೌನೇಶ, ಪರುಸಪ್ಪ, ಶಿವರಾಜ, ಗ್ರಾಮೀಣ ಅಂಚೆ ನೌಕರರಾದ ಜರ್ಮಲಿ ಈಶಪ್ಪ, ಜಲಾಜಾಕ್ಷಿ, ಹರೀಶ, ಅಜ್ಜಯ್ಯ, ಮಂಜುನಾಥ ಎಂಟಿಎಸ್, ನಾಗರಾಜ, ಮಂಜುಳ ಸಿಬ್ಬಂದಿ ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ