ಶಿವಮೊಗ್ಗ: ಜಿಲ್ಲೆಯಲ್ಲಿ ಹಲವೆಡೆ ಗುರುವಾರವೂ ಮಳೆ ಮುಂದುವರಿದ್ದು, ಜೋರು ಮಳೆಯಾಗಿದೆ. ತೀರ್ಥಹಳ್ಳಿ ಹಾಗೂ ಹೊಸನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಗುರುವಾರ ತೀರ್ಥಹಳ್ಳಿ ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ಘೋಷಣೆ ಮಾಡಲಾಗಿತ್ತು.
ಗುರುವಾರ ದಿನವಿಡಿ ಭಾರಿ ಮಳೆಯಾಗುತ್ತಿದೆ. ಪಟ್ಟಣ ಸಮೀಪದ ತುಂಗಾನದಿಯಲ್ಲಿರುವ ರಾಮಮಂಟಪ ಮುಕ್ಕಾಲು ಭಾಗ ಮುಳುಗಿದ್ದು, ಉಪನದಿಗಳಾದ ಕುಶಾವತಿ ನದಿ, ಆಗುಂಬೆ ಭಾಗದ ಮಲಪಹಾರಿ ನದಿ, ಆರಗ ಸಮೀಪದ ಗೋಪಿನಾಥ ಹಳ್ಳ, ಕುಂಟೇಹಳ್ಳಗಳು ಕೂಡಾ ತುಂಬಿ ಹರಿಯುತ್ತಿವೆ. ತಾಲೂಕಿನಲ್ಲಿರುವ ಜೋಗಿಗುಂಡಿ, ಬರ್ಕಣ, ಒನಕೆ ಅಬ್ಬಿ ಫಾಲ್ಸ್ ಸೇರಿದಂತೆ ಎಲ್ಲಾ ಫಾಲ್ಸ್‌ಗಳೂ ಭೋರ್ಗರೆಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿವೆ.
ತಾಲೂಕಿನಾದ್ಯಂತ ಗಾಳಿಯಿಂದಾಗಿ ಮನೆಗಳ ಮೇಲೆ ಮರಗಳು ಬೀಳುತ್ತಿದ್ದು, ಅಪಾರ ನಷ್ಟವೂ ಸಂಭವಿಸಿದೆ. ಕಾಡಿನಲ್ಲಿ ತರಗೆಲೆಗಳಂತೆ ಮರಗಳು ಧರೆಗೆ ಉರುಳುತ್ತಿವೆ. ಬಹಳ ಮುಖ್ಯವಾಗಿ ಆಗುಂಬೆ ಘಾಟಿ ಸರಹದ್ದಿನಲ್ಲಿ ದಿನನಿತ್ಯ ಮರಗಳು ರಾಷ್ಟ್ರೀಯ ಹೆದ್ದಾರಿಗೆ ಉರುಳುತ್ತಿದ್ದು, ಈ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆಯಾಗದಂತೆ ಮರಗಳನ್ನು ತೆರವುಗೊಳಿಸುವುದೇ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಸವಾಲಾಗಿದೆ.ಇನ್ನು ಹೊಸನಗರದಲ್ಲೂ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಮಳೆಗಾಲ ಮುಗಿಯುವವರೆಗೂ ಶಾಲೆಗಳಿಗೆ ರಜೆ ನೀಡುವ ಹೊಣೆಯನ್ನು ಮುಖ್ಯಶಿಕ್ಷಕರಿಗೆ ನೀಡಲಾಗಿದೆ.
ಹೊಸನಗರ ತಹಸೀಲ್ದಾರ್ ರಶ್ಮಿ ಹಾಲೇಶ್ ನಿರ್ದೇಶನದಂತೆ ತಾಲೂಕಿನ ಎಲ್ಲಾ ಶಾಲಾ ಮುಖ್ಯ ಶಿಕ್ಷಕರಿಗೆ ಬಿಇಒ ಕೃಷ್ಣಮೂರ್ತಿ ಸೂಚನೆ ನೀಡಿದ್ದು, ವ್ಯಾಪಕ ಮಳೆಯಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲು ತೊಂದರೆಯಾಗುವ ಪರಿಸ್ಥಿತಿ ಇದ್ದಲ್ಲಿ ಆಯಾ ಶಾಲೆಯ ಶಾಲಾಭಿವೃದ್ಧಿ ಸಮಿತಿಯೊಂದಿಗೆ ಚರ್ಚಿಸಿ ರಜೆ ನೀಡಲು ಕ್ರಮ ವಹಿಸುವುದು. ರಜೆ ನೀಡಿರುವ ಬಗ್ಗೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮುಂಚಿತವಾಗಿ ತಿಳಿಸುವಂತೆ ಹಾಗೂ ಈ ರಜೆಯನ್ನು ಶನಿವಾರ ಪೂರ್ಣ ದಿನ ಶಾಲೆ ನಡೆಸುವ ಮೂಲಕ ರಜೆ ಸರಿದೂಗಿಸಲು ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದಾರೆ.