ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ತಾಲೂಕಿನ ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲೂ ಭಾರಿ ಗಾಳಿ ಮಳೆಗೆ ತ್ರಿವೇಣಿ ಸಂಗಮ ಮತ್ತೆ ಭರ್ತಿಯಾಗಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಾರಂಗಿ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿದ್ದು, ನದಿಗೆ ಸುಮಾರು 20 ಸಾವಿರ ಕ್ಯೂಸೆಕ್ ನೀರು ಹರಿಯಬಿಡಲಾಗುತ್ತಿದೆ.
ಗುರುವಾರ ಬರೆ ಕುಸಿತ ಉಂಟಾಗಿದ್ದ, ಸೋಮವಾರಪೇಟೆ - ಶಾಂತಳ್ಳಿ ಮುಖ್ಯರಸ್ತೆಯ ಜೇಡಿಗುಂಡಿ ಬಳಿ ಶುಕ್ರವಾರವೂ ಮತ್ತೆ ಬರೆ ಕುಸಿದು ಸಂಪೂರ್ಣ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಜೆಸಿಬಿಗಳ ಮೂಲಕ ರಸ್ತೆ ತೆರವು ಕಾರ್ಯ ನಡೆಸಲಾಯಿತು.ಮಳೆಯಿಂದಾಗಿ ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಮತ್ತೆ ಎದುರಾಗಿದೆ. ಪ್ರವಾಹದ ನೀರು 300 ಮೀಟರ್ ದೂರದವರೆಗೆ ಹರಿಯುತ್ತಿದೆ.
ಶನಿವಾರ ಸಂತೆ ಮುಖ್ಯರಸ್ತೆ ಗ್ರಾಮದಲ್ಲಿ ವಾಸವಿರುವ ಬಿಲಾಳ ಅವರ ಮನೆ ತೀವ್ರ ಗಾಳಿ, ಮಳೆಯಿಂದ ಹಾನಿಗೀಡಾಗಿದೆ. ಶನಿವಾರಸಂತೆ ಹೋಬಳಿಯ ವಡಯನಪುರ ಗ್ರಾಮದ ಗೌರಮ್ಮ ಅವರ ವಾಸದ ಮನೆ ಭಾರಿ ಮಳೆಗೆ ಹಾನಿಯಾಗಿದೆ.
ಶನಿವಾರಸಂತೆ ಹೋಬಳಿಯ ಮಾಲಂಬಿ ಬಳಿ ಕುಶಾಲನಗರ- ಶನಿವಾರಸಂತೆ ರಸ್ತೆ ಬದಿಯಲ್ಲಿ ಇದ್ದ ಬೃಹತ್ ಮರ ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯಯವಾಗಿದೆ. ಅಗ್ನಿಶಾಮಕ ಅಧಿಕಾರಿಗಳು, ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ 102.47 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 79 ಮಿ.ಮೀ.,
ಹೋಬಳಿ ವಿವರ: ಮಡಿಕೇರಿ ಕಸಬಾ 47.20, ನಾಪೋಕ್ಲು 134.20, ಸಂಪಾಜೆ 48.50, ಭಾಗಮಂಡಲ 180, ವಿರಾಜಪೇಟೆ 78, ಅಮ್ಮತ್ತಿ 80, ಹುದಿಕೇರಿ 134.10, ಶ್ರೀಮಂಗಲ 153, ಪೊನ್ನಂಪೇಟೆ 67, ಬಾಳೆಲೆ 41.19, ಸೋಮವಾರಪೇಟೆ ಕಸಬಾ 122.80, ಶನಿವಾರಸಂತೆ 73, ಶಾಂತಳ್ಳಿ 200, ಕೊಡ್ಲಿಪೇಟೆ 86.60, ಕುಶಾಲನಗರ 17.60, ಸುಂಟಿಕೊಪ್ಪ 62.20 ಮಿ.ಮೀ.ಮಳೆಯಾಗಿದೆ.
ಪ್ರವಾಹ ನಡುವೆ ಕೂಡಕಂಡಿ, ಪರಂಬು ಗ್ರಾಮಸ್ಥರ ಅಪಾಯಕಾರಿ ಬದುಕು! ಮಡಿಕೇರಿ ತಾಲೂಕಿನ ಕೂಡಕಂಡಿ ಮತ್ತು ಪರಂಬು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದೆ. 50ಕ್ಕೂ ಹೆಚ್ಚು ಕುಟುಂಬಗಳಿರುವ ಎರಡು ಗ್ರಾಮಗಳಲ್ಲಿ ಜನರ ಕಷ್ಟ ಹೇಳ ತೀರದಾಗಿದೆ.ಶತಮಾನಗಳಿಂದಲೂ ಇದೇ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ನಿತ್ಯ ಅಗತ್ಯ ವಸ್ತುಗಳ ಕೊಂಡೊಯ್ಯಲು ಪ್ರವಾಹದ ನೀರಿನಲ್ಲಿ ತೇಲಬೇಕಾಗಿದೆ. ಕನಿಷ್ಠ ಒಂದು ಲೈಫ್ ಜಾಕೆಟ್ ಇಲ್ಲದೆ ಹಾಯಿ ದೋಣಿಯಲ್ಲಿ ಪ್ರಯಾಣ 30 ಅಡಿ ಆಳ ಇರುವ ಪ್ರವಾಹದ ನೀರಿನಲ್ಲಿ ಜನರ ಓಡಾಟ ಮಾಡುವಂತಾಗಿದು, ಜೀವ ಕೈಯಲ್ಲಿ ಹಿಡಿದು ಪ್ರವಾಹ ದಾಟುತ್ತಿದ್ದಾರೆ. ವೃದ್ಧರು, ಮಹಿಳೆಯರು ಮಕ್ಕಳು ಇದೇ ದೋಣಿಯಲ್ಲಿ ಪ್ರಯಾಣಿಸಬೇಕು. ಸೇತುವೆ ಅಥವಾ ರಸ್ತೆ ಮಾಡಿ ಕೊಡದ ರಾಜಕಾರಣಿಗಳ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.