ಮಳೆ ನೀರು ಹರಿದು ಹೋಗಲು ಗಟಾರ ನಿರ್ಮಿಸಲು ಆಗ್ರಹ
ಪಟ್ಟಣದಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಪ್ರದೇಶವಾದ ಸಂಶುದ್ದೀನ ವೃತ್ತ, ರಂಗೀನಕಟ್ಟೆ ಮುಂತಾದ ಕಡೆ ಮಳೆನೀರು ರಸ್ತೆ ಮೇಲೆ ನಿಂತು ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.
ಪಟ್ಟಣದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಕೆಲವು ಕಡೆ ಒಂದು ಕಡೆ ಮಾತ್ರ ನಿರ್ಮಿಸಿ ಮತ್ತೊಂದು ಕಡೆ ಹಾಗೆ ಬಿಟ್ಟಿದ್ದಾರೆ. ಸಮರ್ಪಕ ಗಟಾರ ವ್ಯವಸ್ಥೆ ಇಲ್ಲದ್ದರಿಂದ ಮತ್ತು ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ ನೀರು ರಸ್ತೆ ಮೇಲೆ ನಿಲ್ಲುವಂತಾಯಿತು. ಇದರಿಂದ ವಾಹನಿಗರು ಮತ್ತು ಪಾದಚಾರಿಗಳಿಗೆ ತೊಂದರೆ ಉಂಟಾಯಿತು. ರಂಗಿನಕಟ್ಟೆಯ ಕಾಮಾಕ್ಷಿ ಪೆಟ್ರೋಲ್ ಬಂಕ್, ಸಂಶುದ್ದೀನ ವೃತ್ತದ ಬಳಿ ಮಳೆ ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೇ ರಸ್ತೆ ಮೇಲೆ ನೀರು ನಿಂತಿತ್ತು. ಹೆದ್ದಾರಿ ಕಾಮಗಾರಿ ಮಾಡುವವರು ಸಮರ್ಪಕವಾಗಿ ಗಟಾರ ಕಾಮಗಾರಿ ಮಾಡಿದ್ದರೆ ತೊಂದರೆ ಇರುತ್ತಿರಲಿಲ್ಲ. ಪಟ್ಟಣದಲ್ಲಿ ಹೆದ್ದಾರಿ ಕಾಮಗಾರಿ ಅರ್ಧಂಬರ್ಧ ಸ್ಥಿತಿಯಲ್ಲಿದ್ದು ಪ್ರಥಮ ಮಳೆಗೇ ಹೀಗಾದರೆ ಇನ್ನು ಮಳೆಗಾಲದಲ್ಲಿ ಜನರ ಗೋಳು ಕೇಳುವರಾರು ಎನ್ನುವಂತಾಗಿದೆ. ಮೊನ್ನೆ ಜಿಲ್ಲಾ ಉಸ್ತುವಾರಿ ಸಚಿವರು, ಡೀಸಿಯವರು ಮಳೆಗಾಲದ ಪೂರ್ವ ಗಟಾರ ಕಾಮಗಾರಿ ಆದ್ಯತೆ ಕೊಡಿ ಎಂದು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿದ್ದರೂ ಸಹ ಪಟ್ಟಣದಲ್ಲಿ ಗಟಾರ ಕಾಮಗಾರಿ ಆದ್ಯತೆ ಕೊಡದೇ ರಸ್ತೆ ಮಾಡುವುದರಲ್ಲೇ ಮಗ್ನರಾಗಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.ಪಟ್ಟಣದ ಮುಖ್ಯ ಪ್ರದೇಶವಾದ ರಂಗೀನಕಟ್ಟೆಯಿಂದ ತಾಪಂವರೆಗೆ ಹೆದ್ದಾರಿಯನ್ನು ಎತ್ತರಕ್ಕೆ ಮಾಡಿದ್ದು, ರಸ್ತೆಯನ್ನು ಇಷ್ಟು ಎತ್ತರದಲ್ಲಿ ಮಾಡುವ ಅಗತ್ಯ ಇತ್ತೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇನ್ನೂ ಸರಿಯಾಗಿ ಗಟಾರ ಕಾಮಗಾರಿ ಆಗಿಲ್ಲ. ಸರ್ವಿಸ್ ರಸ್ತೆಯಂತೂ ಈ ವರ್ಷಕ್ಕೆ ಆಗುವುದು ಡೌಟೇ ಆಗಿದೆ. ಇಷ್ಟು ದಿನ ವಿಳಂಬಗತಿಯಲ್ಲಿ ಕೆಲಸ ಮಾಡಿ ಮಳೆ ಶುರುವಾಗುವ ವೇಳೆ ಹೆದ್ದಾರಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುತ್ತಿದ್ದಾರೆ. ಗಟಾರ ಕಾಮಗಾರಿ ಮಾಡದೇ ಹೆದ್ದಾರಿ ಮಾಡಿದರೆ ಮಳೆ ನೀರು ಎಲ್ಲಿಗೆ ಹೋಗಬೇಕು ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸತೀಶಕುಮಾರ ಪ್ರಶ್ನಿಸಿದ್ದಾರೆ. ಪೂರ್ಣಪ್ರಮಾಣದಲ್ಲಿ ಮಳೆ ಆರಂಭವಾಗುವ ಮೊದಲು ಪಟ್ಟಣದಲ್ಲಿ ಮಳೆ ನೀರು ಹರಿದು ಹೋಗಲು ಐಆರ್ಬಿಯವರು ವ್ಯವಸ್ಥೆ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಗುಡುಗು ಮಿಂಚು ಗಾಳಿ ಸಹಿತ ಭಾರೀ ಮಳೆ ಸರಿದಿದ್ದು, ಹಲವೆಡೆ ಮರ ವಿದ್ಯುತ್ ಕಂಬದ ಮೇಲೆ ಬಿದ್ದು ಹಾನಿಯಾಗಿದೆ.