ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ: 4 ಜನ ಬಲಿ

KannadaprabhaNewsNetwork |  
Published : Jun 27, 2024, 01:10 AM ISTUpdated : Jun 27, 2024, 05:28 AM IST
ಮಳೆ | Kannada Prabha

ಸಾರಾಂಶ

ಹಲವು ದಿನಗಳ ಬ‍ಳಿಕ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮತ್ತೆ ಮುಂಗಾರು ಮಳೆ ಆರ್ಭಟಿಸಿದ್ದು, ಭಾರೀ ಗಾಳಿಗೆ ಹಲವೆಡೆ ಮರ ಮತ್ತು ವಿದ್ಯುತ್‌ ಕಂಬ ಉರುಳಿಬಿದ್ದು, 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.  

 ಬೆಂಗಳೂರು : ಹಲವು ದಿನಗಳ ಬ‍ಳಿಕ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮತ್ತೆ ಮುಂಗಾರು ಮಳೆ ಆರ್ಭಟಿಸಿದ್ದು, ಭಾರೀ ಗಾಳಿಗೆ ಹಲವೆಡೆ ಮರ ಮತ್ತು ವಿದ್ಯುತ್‌ ಕಂಬ ಉರುಳಿಬಿದ್ದು, 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮಂಗಳೂರಲ್ಲಿ ಮನೆಯೊಂದರ ಮೇಲೆ ಕಾಂಪೌಂಡ್‌ ಕುಸಿದು ಒಂದೇ ಕುಟುಂಬದ ನಾಲ್ವರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.

ಇನ್ನು ಗುರುವಾರವೂ ಭಾರೀ ಮಳೆಯ ನಿರೀಕ್ಷೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗಿನ ವಿರಾಜಪೇಟೆ, ಪೊನ್ನಂಪೇಟೆ ತಾಲೂಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾರೀ ಗಾಳಿ ಮಳೆಯಿಂದಾಗಿ ಮೀನುಗಾರರಿಗೂ ಕಡಲಿಗಿಳಿಯದಂತೆ ಜಿಲ್ಲಾಡಳಿತಗಳು ಸೂಚಿಸಿದೆ.

ಮಲಗಿದ್ದಲ್ಲೇ ಸಮಾಧಿಯಾದ್ರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭರ್ಜರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರದಲ್ಲಿ ಬುಧವಾರ ಮುಂಜಾನೆ ಕಾಂಪೌಂಡ್ ಗೋಡೆ ಮನೆ ಮೇಲೆ ಉರುಳಿ ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲೇ ಸಜೀವ ಸಮಾಧಿಯಾದರು.

ಯಾಸಿರ್ (45), ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಹಾನ (11) ಮತ್ತು ರಿಫಾನ (17) ಮೃತರು. ಹಿರಿಯ ಮಗಳು ಬಕ್ರೀದ್‌ಗೆಂದು ತಾಯಿ ಮನೆಗೆ ಬಂದವರು ಹಿಂದಿನ ದಿನವಷ್ಟೇ ಕೇರಳದ ಗಂಡನ ಮನೆಗೆ ತೆರಳಿದ್ದರಿಂದ ಬದುಕುಳಿದಿದ್ದಾರೆ.

ಮಂಗಳವಾರ ರಾತ್ರಿಯಿಡೀ ಭಾರಿ ಮಳೆ ಸುರಿದ ಪರಿಣಾಮ ಅಬೂಬಕ್ಕರ್‌ ಎಂಬವರಿಗೆ ಸೇರಿದ ಮನೆಯ ಕಾಂಪೌಂಡ್‌ ಗೋಡೆ ಹಾಗೂ ಎರಡು ಅಡಕೆ ಮರಗಳು ಯಾಸಿರ್ ಅವರ ಮನೆ ಮೇಲೆ ಉರುಳಿಬಿದ್ದಿದ್ದು, ಅದರಡಿ ಸಿಲುಕಿ ನಾಲ್ವರೂ ಮೃತಪಟ್ಟಿದ್ದಾರೆ. ಭಾರೀ ಶಬ್ದ ಕೇಳಿ ಓಡಿ ಬಂದ ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮೂರು ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ನಾಲ್ಕು ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಬೆಳಗ್ಗೆ 6 ಗಂಟೆಗೆ ಭಾರೀ ಶಬ್ದ ಕೇಳಿ ಹೊರಗೆ ಬಂದು ನೋಡಿದೆವು. ಆಗ ಮನೆ ಮೇಲೆ ಗೋಡೆ ಕುಸಿದು ಬಿದ್ದಿತ್ತು. ತಕ್ಷಣ ಸ್ಥಳೀಯರೆಲ್ಲ ಸೇರಿ ಮನೆ ಬಾಗಿಲು ಒಡೆದೆವು. ಒಳ ಹೋದಾಗ ನಮಗೆ ಕರೆಂಟ್ ಶಾಕ್ ಹೊಡೆಯಿತು. ಬಳಿಕ ನಮ್ಮಲ್ಲೇ ಇದ್ದ ಎಲೆಕ್ಟ್ರಿಶಿಯನ್‌ ಒಬ್ಬರು ಲೈನ್ ಆಫ್ ಮಾಡಿದ್ರು. ಆ ಬಳಿಕ ನಾವು ಕಾರ್ಯಾಚರಣೆ ನಡೆಸಲು ಶುರು ಮಾಡಿದೆವು. ಮೂವರು ಹಾಲ್‌ನಲ್ಲಿ ಮಲಗಿದ್ದರು. ಒಬ್ಬಳು ಕೋಣೆಯಲ್ಲಿದ್ದಳು. ನಾವು ಮೊದಲು ಮೂವರನ್ನು ಮಣ್ಣಿನ ಅಡಿಯಿಂದ ತೆಗೆದಾಗ ಬಾಲಕಿಯ ಕೈ ಅಲುಗಾಡ್ತಿತ್ತು. ಆದರೆ ರಸ್ತೆ ಕಿರಿದಾಗಿ ಆಂಬ್ಯುಲೆನ್ಸ್‌ ಬರಲಾಗದೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ ಎಂದು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಸ್ಥಳೀಯರು ತಿಳಿಸಿದ್ದಾರೆ.

ನದಿ ನೀರಿಮಟ್ಟ ಏರಿಕೆ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಕೊಡಗಿನಲ್ಲಿ ಕಾವೇರಿ ನದಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಮರ ಬಿದ್ದು ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ತಟದ ಜನರಲ್ಲಿ ಆತಂಕ ಮೂಡಿದೆ. ಭಾರೀ ಗಾಳಿಯಂದಾಗಿ ಕಳಸ-ಮಂಗಳೂರು ರಾಜ್ಯ ಹೆದ್ದಾರಿಯ ಕುದುರೆಮುಖ ಸಮೀಪದ ನೆಲ್ಲಿಬೀಡು ಗ್ರಾಮದ ಬಳಿ ಮರವೊಂದು ಬಿದ್ದು, ಸುಮಾರು ಒಂದು ಗಂಟೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಇನ್ನು ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಭಾರೀ ಗಾಳಿ-ಮಳೆಯಿಂದ ಹಲವೆಡೆ ಮರಗಳು ಬಿದ್ದು ಜನಜೀವನಕ್ಕೆ ತೊಂದರೆಯಾಗಿದೆ. ಮಂಗಳೂರು ನಗರದ ಬಜಾಲ್‌ನ ರೈಲ್ವೆ ಕೆಳಸೇತುವೆಯಲ್ಲಿ ಕೃತಕ ನೆರೆ ಉಂಟಾಗಿ ಪ್ರವಾಹದಲ್ಲಿ ಸಿಲುಕಿದ ಕಾರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.

ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಕುಮಟಾ-ಸಿದ್ದಾಪುರ ರಸ್ತೆಗೆ ನೀರು ನುಗ್ಗಿ ಕೆಲಕಾಲ ಸಂಚಾರ ವ್ಯತ್ಯಾಸಗೊಂಡರೆ, ಭಟ್ಕಳದ ಹೆಬಳೆಯಲ್ಲಿ 5 ಮನೆಗಳಿಗೆ ಕೆಲಸಮಯ ನೀರು ನುಗ್ಗಿ ಆತಂಕ ಸೃಷ್ಟಿಯಾಗಿತ್ತು. ಉಡುಪಿಯಲ್ಲಿ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಸೌಪರ್ಣಿಕಾ, ಸೀತಾ, ವರಾಹಿ, ಪಂಚಗಂಗಾವಳಿ, ಸ್ವರ್ಣಾ ನದಿಗಳು ತುಂಬಿದ್ದು, ಅಕ್ಕಪಕ್ಕದ ತಗ್ಗುಪ್ರದೇಶಗಳಿಗೆ ನೀರು ನುಗ್ಗಲಾರಂಭಿಸಿದೆ. ಬೈಂದೂರು, ಬ್ರಹ್ಮಾವರದ ನದಿ ತೀರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ