ಧಾರವಾಡ: ಬಿಸಿಲಿನಿಂದ ಕಂಗೆಟ್ಟಿದ್ದ ಧಾರವಾಡದ ಜನತೆಗೆ ಮಳೆರಾಯ ಕೃಪೆ ತೋರಿದ್ದಾನೆ. ಎರಡು ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾದ ಈ ಊರಲ್ಲಿ ಮಂಗಳವಾರ ಸಂಜೆ ಹೊತ್ತು ಸುರಿದ ಮುಂಗಾರು ಪೂರ್ವ ಧಾರಾಕಾರ ಮಳೆಯು ಇಳೆಯನ್ನು ತಂಪಾಗಿಸಿತು.
ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ಬಿಸಿಲಿನ ವಾತಾರವಣ ಇದ್ದು, ನಂತರದಲ್ಲಿ ಮೋಡ ಮುಸುಕಿ ವಿಪರೀತ ಗಾಳಿ-ಗುಡುಗು-ಸಿಡಿಲಿನೊಂದಿಗೆ ಧಾರವಾಡದ ಸುತ್ತಲೂ ವಿವಿಧ ಊರುಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಿತು.ಶಿವರಾತ್ರಿ ಹಾಗೂ ಹೋಳಿ ಹುಣ್ಣೆಮೆ ಸಮಯದಿಂದ ವಿಪರೀತ ಬಿಸಿಲಿನಿಂದ ಜನತೆಗೆ ರೋಸಿ ಹೋಗಿದ್ದರು. ಕಳೆದ ಮಾ. 23ರಿಂದ ಮಾ. 24ರ 24 ಗಂಟೆಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು 41.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ನೆತ್ತಿ ಸುಡುವ ಬಿಸಿಲಿನಿಂದ ಕಂಗೆಟ್ಟಿದ್ದ ಧಾರವಾಡ ಜನತೆಗೆ ಮಂಗಳವಾರ ಆಹ್ಲಾದಕರ ವಾತಾವರಣ ಸೃಷ್ಟಿ ಮಾಡಿತು.
ನವನಗರದಿಂದ ಧಾರವಾಡ ಭಾಗ ಹಾಗೂ ಸಾಧನಕೇರಿ, ಕೆಲಗೇರಿ, ಚಿಕ್ಕಮಲ್ಲಿಗವಾಡ, ಯಾದವಾಡ, ಲಕಮಾಪೂರ, ಉಪ್ಪಿನ ಬೆಟಗೇರಿ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಗೆ ರೈತರು ಸಹ ನೆಮ್ಮದಿಯ ನಿಟ್ಟಿಸಿರುವ ಬಿಟ್ಟರು. ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಗಾಳಿ ಸಮೇತ ಮಳೆ ಜೋರಾಗಿತ್ತು. ಅಳ್ನಾವರ ಭಾಗಕ್ಕೂ ಉತ್ತಮ ಮಳೆಯಾಗಿದ್ದು, ವರ್ಷಧಾರೆಯಿಂದ ಮುಂಗಾರು ಹಂಗಾಮಿಗೆ ರೈತರು ಇನ್ಮುಂದೆ ಸಿದ್ಧತೆಗಳನ್ನು ಸಹ ಕೈಗೊಳ್ಳಲಿದ್ದಾರೆ. ಹಾಗೆಯೇ, ಮಾವು ಕಾಯಿ ಬಿಟ್ಟಿದ್ದು ಮಳೆಯಿಂದ ಕಾಯಿ ಹೆಚ್ಚು ತೂಕ ಹಿಡಿಯಲಿವೆ. ಆದರೆ, ವಿಪರೀತ ಗಾಳಿಯಿಂದ ಕೆಲವು ಕಡೆಗಳಲ್ಲಿ ಮಾವಿನ ಕಾಯಿಗಳು ಉದುರಿದ ಘಟನೆಗಳೂ ನಡೆದಿವೆ.ಮಳೆ ಗಾಳಿಗೆ ಗೋಡೆ ಕುಸಿದು ಇಬ್ಬರ ದುರ್ಮರಣಕಲಘಟಗಿ: ಗಾಳಿ-ಮಳೆಗೆ ನಿರ್ಮಾಣದ ಹಂತದ ಗೋಡೆ ಕುಸಿದು, ಇಬ್ಬರು ಮೃತಪಟ್ಟು, ಓರ್ವ ತೀವ್ರ ಗಾಯಗೊಂಡ ಘಟನೆ ತಾಲೂಕಿನ ಕಾಡನಕೊಪ್ಪ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.ಹುಬ್ಬಳ್ಳಿಯ ನೇಕಾರ ನಗರದ ನೂರಾಣಿ ಪ್ಲಾಟಿನ ನಿವಾಸಿ ಮೊಹಮ್ಮದ್ ರಫೀಕ್ ಮೆಹಬೂಬಸಾಬ ಚನ್ನಾಪುರ ಹಾಗೂ ಹುಬ್ಬಳ್ಳಿ ತಿಮ್ಮಸಾಗರ ನಿವಾಸಿ ದಾವುದ್ ಜಾಫರ್ ಸಾಬ್ ಸವಣೂರು ಸ್ಥಳದಲ್ಲೇ ಮೃತಪಟ್ಟವರು. ಅಂಚಟಗೇರಿ ಗ್ರಾಮದ ಮಾಂತೇಶ್ ಚವರಗುಡ್ಡ್ ಎಂಬ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಯೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ.ಭಾರತ್ ಸೈನಿಕ್ ಇಂಡಸ್ಟ್ರಿಯಲ್ ಕಟ್ಟಡದ ಕಾಮಗಾರಿಯನ್ನು ಹುಬ್ಬಳ್ಳಿಯ ಟಿಪ್ಪು ನಗರದ ಮುಸ್ತಾಕ್ ಅಹಮದ್ ಹೆಬಸೂರು ಮಾಡಿಸುತ್ತಿದ್ದರು. ಕಾಮಗಾರಿಯಲ್ಲಿ ಮುಂಜಾಗ್ರತಾ ಕ್ರಮ ವಹಿಸದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕ ಮುಸ್ತಾಕ್ ಅಹಮದ್ ಫಕ್ರುದ್ದೀನ್ ಅಹಮದ್ ಹೆಬಸೂರ ಹಾಗೂ ಇತರರ ಮೇಲೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.