ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಜಾಗಿರ ಬುಡ್ಡೆನಳ್ಳಿಯ ಕೆರೆ ಒಂದೇ ರಾತ್ರಿ ಸುರಿದ ಮಳೆಗೆ ಕೋಡಿ ಬಿದ್ದು ಅಪಾರ ಪ್ರಮಾಣದ ನೀರು ಗುಂಡೇರ ಹಳ್ಳದ ಮೂಲಕ ದೇವಸಮುದ್ರ ಒಡಲಾಳವನ್ನು ಸೇರುತ್ತಿದೆ. ಭೀಕರ ಬರದ ಮುನ್ಸೂಚನೆ ಭೀತಿಯಿಂದ ಇದ್ದ ರೈತರಿಗೆ ಸಂತಸವಾಗಿದ್ದು, ಕೃಷಿ ಜಮೀನುಗಳಿಗೆ ಜೀವ ಕಳೆ ಬಂದಿದೆ. ಅಲ್ಲದೇ ಸಿದ್ದಾಪುರ ಗ್ರಾಮದ ತಿಪ್ಪಮ್ಮ, ಮಲ್ಲಾರೆಡ್ಡಿ, ಎಂ. ಟಿ.ರಂಗಪ್ಪ, ಕೆರೆ ಕೊಂಡಪುರ ಗ್ರಾಮದ ಶಿವಣ್ಣ, ಬೊಮ್ಮಕ್ಕನಹಳ್ಳಿ ಗ್ರಾಮಗಳ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಶೇಂಗಾ, ಮೆಕ್ಕೆ ಜೋಳ ಟೊಮೋಟೊ ಬೆಳೆಗೆ ಹಾನಿಯಾಗಿದ್ದು ಲಕ್ಷಾಂತರ ರು. ನಷ್ಟವೂ ಸಂಭವಿಸಿದೆ.
ಕಸಬಾ ಹೋಬಳಿ ವ್ಯಾಪ್ತಿಯ ಚಿಕ್ಕುಂತಿ ಮತ್ತು ಸೋಮೇನಹಳ್ಳಿ ಗ್ರಾಮದಲ್ಲಿ ರಾಗಿ, ಮೆಕ್ಕೆಜೋಳ ಬೆಳೆಗೆ ನೀರು ನುಗ್ಗಿದೆ. ಕೋಟೆ ಬಡಾವಣೆಯ ಹಳ್ಳದಲ್ಲಿ ನೀರು ಹರಿಯುತ್ತಿದೆ. ಬಿ.ಜಿ.ಕೆರೆ ಗ್ರಾಮದಲ್ಲಿ ಉರ್ದು ಶಾಲೆಗೆ ನೀರು ನುಗ್ಗಿ ಭಾರಿ ಆವಾಂತರ ಸೃಷ್ಟಿಸಿದೆ. ಅಡುಗೆ ಕೋಣೆ, ಬೋಧನಾ ಕೊಠಡಿ, ಕಚೇರಿಗೆ ನೀರು ನುಗ್ಗಿ ಹಾಜರಾತಿ ಪುಸ್ತಕ, ಅಡುಗೆ ಪರಿಕರಗಳು, ನೋಟ್ ಪುಸ್ತಕ ಹಾಳಾಗಿದೆ. ಹಾಗೂ ಮಸೀದಿ ಪಕ್ಕದ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ. ಮೊಳಕಾಲ್ಮುರಿನಲ್ಲಿ 52.0ಮೀಮೀ ಮಳೆಯಾದರೆ, ರಾಯಾಪುರ 26.0, ಬಿ.ಜಿ.ಕೆರೆ 70.2, ರಾಂಪುರ 50.1 ದೇವಸಮುದ್ರ 60.2 ಮಿ. ಮೀ ಮಳೆಯಾಗಿದೆ.