ಹಳಿಯಾಳದಲ್ಲಿ ಭಾರಿ ಮಳೆ, ಮನೆ, ಶಾಲೆಗೆ ನುಗ್ಗಿದ ನೀರು

KannadaprabhaNewsNetwork |  
Published : Sep 23, 2024, 01:23 AM IST
22ಎಚ್.ಎಲ್.ವೈ-3: ಮತ್ತು 3(ಎ): ಮಳೆ ನೀರಿಗೆ ಪಟ್ಟಣದ ಶಾಸಕರ ಮಾದರಿ ಶಾಲೆ ಜಲಾವೃತಗೊಂಡಿತು. | Kannada Prabha

ಸಾರಾಂಶ

ಹಳಿಯಾಳ ಎಪಿಎಂಸಿಯ ಪ್ರಾಂಗಣದಲ್ಲಿ ರೈತರು ಒಣಗಿಸಿಲು ತಂದ ಮೆಕ್ಕೆಜೋಳವು ಸಂಪೂರ್ಣವಾಗಿ ಮಳೆ ನೀರಿಗೆ ಕೊಚ್ಚಿ ಹೋಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಹಳಿಯಾಳ: ತಾಲೂಕಿನಾದ್ಯಂತ ಭಾನುವಾರ ಸಂಜೆ ಸುರಿದ ಭಾರಿ ಮಳೆಗೆ ಗ್ರಾಮಾಂತರ ಹಾಗೂ ಪಟ್ಟಣದ ಬಹುತೇಕ ಕಡೆ ಚರಂಡಿಗಳು ತುಂಬಿ ಹಲವು ಬಡಾವಣೆ ಹಾಗೂ ಮನೆಗಳಿಗೆ ಮಳೆ ನುಗ್ಗಿ ಅಪಾರ ಹಾನಿಯಾಗಿದೆ. ಹಳಿಯಾಳ ಎಪಿಎಂಸಿಯ ಪ್ರಾಂಗಣದಲ್ಲಿ ರೈತರು ಒಣಗಿಸಿಲು ತಂದ ಮೆಕ್ಕೆಜೋಳವು ಸಂಪೂರ್ಣವಾಗಿ ಮಳೆ ನೀರಿಗೆ ಕೊಚ್ಚಿ ಹೋಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.ಮಳೆಯಿಂದಾಗಿ ಭಾನುವಾರದ ಸಂತೆಯಲ್ಲಿ ಮಾರಾಟಕ್ಕೆ ತಂದಿದ್ದ ತರಕಾರಿ, ಹಣ್ಣು ಕಾಯಿಗಳು ಮಳೆ ನೀರಿನ ರಭಸಕ್ಕೆ ನೀರಿನಲ್ಲಿ ಹರಿದು ಹೋಗಿ, ಸಂತೆಯೇ ಅಸ್ತವ್ಯಸ್ತವಾಯಿತು. ಆನೆಗುಂದಿ ಬಡಾವಣೆಯಲ್ಲಿ ಚರಂಡಿ ನೀರು ಸರಾಗವಾಗಿ ಸಾಗಲು ಸಾಧ್ಯವಾಗದೇ ಬಡಾವಣೆಯ ರಸ್ತೆಗಳು ಜಲಾವೃತಗೊಂಡಿದ್ದು, ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎಲ್ಲೆಡೆ ನೀರು: ತಿಲಕ ರಸ್ತೆ, ಅರ್ಬನ್ ಬ್ಯಾಂಕ್ ವೃತ್ತ ಹಾಗೂ ಅಲ್ಲಿನ ಸವಣೂರ ಎಂಬವರ ಮನೆ ಹಾಗೂ ಸದಾಶಿವನಗರದ ಉದ್ಯಮಿ ಪ್ರಕಾಶ ಹಣುಮಶೇಠ ಮನೆ ಜಲಾವೃತಗೊಂಡಿದ್ದವು. ಬೆಳಗಾವಿ ಮಾರ್ಗದಲ್ಲಿರುವ ಬೇಕರಿಯೊಂದಕ್ಕೆ ಮಳೆನೀರು ತುಂಬಿ ಅಪಾರ ಹಾನಿಯಾಗಿರುವುದಾಗಿ ಬೇಕರಿ ಮಾಲೀಕ ಅಳಲು ತೋಡಿಕೊಂಡಿದ್ದಾರೆ.ಶಾಲೆ ಜಲಾವೃತ: ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿರುವ ನಂ. 1 ಶಾಸಕರ ಮಾದರಿ ಶಾಲೆಗೆ ಮಳೆಯ ನೀರು ಭಾರಿ ಪ್ರಮಾಣದಲ್ಲಿ ನುಗ್ಗಿದ ಪರಿಣಾಮ ಶಾಲೆಯು ಸಂಪೂರ್ಣ ಜಲಾವೃತಗೊಂಡಿತು. ಶಾಲೆಯ ಕೆಳಹಂತಸ್ತಿನ ತರಗತಿ ಕೊಠಡಿಗಳು, ಮುಖ್ಯೋಧ್ಯಾಪಕರ ಕಚೇರಿ ಕೊಠಡಿ, ಅಕ್ಷರ ದಾಸೋಹ ಉಗ್ರಾಣ ಕೊಠಡಿಗಳಿಗೆ ನೀರು ನುಗ್ಗಿ ಜಲಾವೃಗೊಂಡಿದೆ. ಇದರಿಂದ ಬಿಸಿಯೂಟದ ಸಾಮಗ್ರಿಗಳಿಗೆ ಅಪಾರ ಹಾನಿಯಾಗಿದ್ದು, ಹಲವು ದಾಖಲೆ ಪುಸ್ತಕಗಳು, ಮಕ್ಕಳ ಪಾಠಾಭ್ಯಾಸದ ಪುಸ್ತಕಗಳು ಮಳೆನೀರಿನಿಂದ ಹಾನಿಗೀಡಾಗಿವೆ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುರೇಶ ಕೊಕಿತ್ಕರ ತಿಳಿಸಿದ್ದಾರೆ. ಶಾಲೆಯು ಜಲಾವೃತಗೊಂಡಿದ್ದನ್ನು ಕಂಡು ಆಘಾತಕ್ಕೊಳಗಾದ ಮುಖ್ಯೋಧ್ಯಾಪಕ ಸುನೀಲ ಗಾಂವಕರ ಕಣ್ಣೀರಿಟ್ಟರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೊಂದಿಗೆ ಜತೆಗೂಡು ನೀರು ಹೊರಹಾಕಲು ಹರಸಾಹಸಪಟ್ಟರು.

ಎರಡು ತಂಡ: ಮಳೆಯಿಂದಾಗಿ ಪಟ್ಟಣದ ಹಲವೆಡೆ ಮಳೆ ನೀರು ನುಗ್ಗಿದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಅದನ್ನು ಪರಿಶೀಲಿಸಿ ಪರಿಹಾರ ಮಾರ್ಗೋಪಾಯಗಳನ್ನು ಕಂಡುಹಿಡಿಯಲು ಪುರಸಭೆಯ ಸಿಬ್ಬಂದಿ ಎರಡು ತಂಡಗಳನ್ನು ಮಾಡಿ ಸ್ಥಳಕ್ಕೆ ಕಳಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ತಿಳಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ