ಹಿರಿಯೂರು ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಸಮೃದ್ಧ ಮಳೆ

KannadaprabhaNewsNetwork |  
Published : Oct 06, 2024, 01:23 AM IST
ಚಿತ್ರ 1 | Kannada Prabha

ಸಾರಾಂಶ

ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಡ್ಯಾಂ ನೀರು ಸೇರಿದಂತೆ 1386 ಕ್ಯೂಸೆಕ್ಸ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 121.05 ಅಡಿ ತಲುಪಿದೆ.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಡ್ಯಾಂ ನೀರು ಸೇರಿದಂತೆ 1386 ಕ್ಯೂಸೆಕ್ಸ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 121.05 ಅಡಿ ತಲುಪಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಜಲಾಶಯದ ಮೇಲ್ಭಾಗದಲ್ಲಿ ಅಲ್ಪ ಪ್ರಮಾಣದ ಮಳೆಯಾಗುತ್ತಿದ್ದು ಡ್ಯಾಂಗೆ ಒಳಹರಿವಿನ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಹೆಚ್ಚಿದೆ. ಪ್ರಸಕ್ತ ಸಾಲಿನಲ್ಲಿ 113 ಅಡಿಯಷ್ಟು ನೀರಿನ ಸಂಗ್ರಹವಿತ್ತು. ಸುಮಾರು 8 ಅಡಿ ನೀರು ಮಳೆ ಮತ್ತು ಭದ್ರಾದಿಂದ ಹರಿದು ಬಂದಿದೆ.

ಶನಿವಾರದ ಮಳೆ ವರದಿಯಂತೆ ಈಶ್ವರಗೆರೆಯಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು ತಾಲೂಕಿನ ಈಶ್ವರಗೆರೆಯಲ್ಲಿ 81.02 ಮಿ ಮೀ ಮಳೆಯಾಗಿದೆ. ಬಬ್ಬೂರು 60.8, ಸೂಗೂರು 53.4, ಹಿರಿಯೂರು 42.6 ಹಾಗೂ ಇಕ್ಕನೂರಿನಲ್ಲಿ 26.2‌ ಸೇರಿದಂತೆ 52.84 ಮಿಮೀ ಮಳೆಯಾಗಿದೆ.

ಮಳೆ ಜೋರಾಗಿ ಬಂದ ಹಿನ್ನೆಲೆಯಲ್ಲಿ ತಾಲೂಕಿನ ರಂಗನಾಪುರದಿಂದ ಆರನಕಟ್ಟೆ ರಸ್ತೆಯಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಪೆಟ್ಟಿಗೆ ನೆಲಕ್ಕುರುಳಿ ಸಂಚಾರ ಅಸ್ತವ್ಯಸ್ತವಾಗಿತ್ತು. ರಾಷ್ಟ್ರೀಯ ಹೆದ್ದಾರಿ ನಾಲ್ಕರ ಜವನಗೊಂಡನಹಳ್ಳಿಯಿಂದ ಹಿರಿಯೂರು ಕಡೆ ಬರುವ ರಸ್ತೆ ಸುಮಾರು 10 ಕಿಲೋ ಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಜವನಗೊಂಡನಹಳ್ಳಿ ಹೋಬಳಿಯ ಸಮೀಪ ಗೊರ್ಲಡಕು ಗೇಟ್ ಬಳಿ ಬ್ರಿಡ್ಜ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ಮಣ್ಣು ಸರ್ವಿಸ್ ರಸ್ತೆಗೆ ಸೇರಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ವಾಹನಗಳು ಸರ್ವಿಸ್ ರಸ್ತೆ ಮೂಲಕ ತೆರಳಬೇಕಾಗಿದ್ದು, ಸರ್ವಿಸ್ ರಸ್ತೆಯಲ್ಲಿ ಮಣ್ಣು, ನೀರು ಸೇರಿಕೊಂಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಕಾಮಗಾರಿ ನಿರ್ವಹಿಸುವ ಕಂಪನಿಯ ಜೆಸಿಬಿ ಮೂಲಕ ಮಣ್ಣು, ನೀರು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ