ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ತಾಲೂಕಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ೭೩.೦೬ ಹೆಕ್ಟರ್ ಪ್ರದೇಶದಲ್ಲಿ ವಿವಿಧ ತರಕಾರಿ, ಮಾವು ಬೆಳೆ ನಾಶವಾಗಿದೆ. ರೈತರಿಗೆ ಸುಮಾರು ೩೫ ಲಕ್ಷ ರುಪಾಯಿಗಳಷ್ಟು ನಷ್ಟವುಂಟಾಗಿರುವುದಾಗಿ ತಾಲೂಕು ಆಡಳಿತ ನಡೆಸಿದ ಸಮೀಕ್ಷೆ ತಿಳಿಸಿದೆ. ಕಳೆದ ಮೂರು ತಿಂಗಳಿನಿಂದ ರೈತರು ಬೆಳೆದ ಟೊಮೆಟೊಗೆ ಬೆಲೆ ಇಲ್ಲದೆ ಬೆಳೆಯನ್ನು ತಮ್ಮ ತೋಟಗಳಲ್ಲೇ ಬಿಟ್ಟಿದ್ದರು. ಟೊಮೆಟೊ ಕೊಯ್ಲಿನ ಕೂಲಿ ಸಹ ಸಿಗುತ್ತಿರಲಿಲ್ಲ. ಕಳೆದ ಎರಡು ದಿನಗಳಿಂದ ಟೊಮೆಟೊ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಒಂದು ಬಾಕ್ಸ್ ಟೊಮೆಟೊ ಬೆಲೆ ೧೫೦ ರಿಂದ ೨೦೦ ಕ್ಕೂ ಮಾರಟವಾಗುತ್ತಿದೆ, ಆದರೆ ತಾಲೂಕಿನಲ್ಲಿ ನಿರಂತರ ಮಳೆಗೆ ಟೊಮೆಟೊ ಬೆಳೆ ಕುಸಿದಿದೆ.
ಮಾವು ಬೆಳಗೂ ಅಪತ್ತುತಾಲೂಕಿನ ಬಹುತೇಕ ಮಾವಿನ ಫಸಲು ಕೊಯ್ಲಿಗೆ ಬಂದಿರುವ ಸಂದರ್ಭದಲ್ಲಿ ನಿರಂತರ ಮಳೆಯಿಂದ ಮಾವು ಕೊಯ್ಲಿಗೆ ಅಡ್ಡಿಯಾಗಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಮಾವಿನ ಗುಣಮಟ್ಟವು ಕಡಿಮೆಯಾಗಲಿದೆ, ಇದರಿಂದ ಮಾವು ಕೊಳ್ಳವ ವ್ಯಾಪಾರಿಗಳು ಹಿಂದೇಟು ಹಾಕುತ್ತಿರುವುದು ಬೆಳೆಗಾರರನ್ನು ಕಂಗೆಡಿಸಿದೆ. ಕಳೆದ ೧೭ ದಿನಗಳಿಂದ ತಾಲ್ಲೂಕಿನಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಸರಿ ಸುಮಾರು ೭೩.೦೬ ಹೆಕ್ಟರ್ ಪ್ರದೇಶದಲ್ಲಿ ಇದ್ದಂತಹ ಮಾವು ,ಕೋಸು,ಬಾಳೆ ಟೆಮೋಟೋ ರಾಗಿ ಪೋಪಯಿ ಬೆಳೆಗಳು ನಾಶವಾಗಿದ್ದು ಅಂದಾಜು ೩೫.೯೬ ಲಕ್ಷ ನಷ್ಟವಾಗಿದೆ ಎಂದು ತಹಸೀಲ್ದಾರ್ ನಾಗವೇಣಿ ತಿಳಿಸಿದರು.
ಸಂತ್ರಸ್ತ ರೈತರಿಗೆ ಪರಿಹಾರವಾಡಿಕೆ ಮಳೆಯ ಪ್ರಮಾಣಕ್ಕಿಂತ ಶೇ.೧೦೦ ರಷ್ಟು ಹೆಚ್ಚು ಮಳೆ ಸುರಿದ ಹಿನ್ನಲೆ ಗ್ರಾಮಾಂತರ ಪ್ರದೇಶದಲ್ಲಿ ಬೆಳೆ ನಷ್ಟದೊಂದಿಗೆ ಕೆಲವು ಗ್ರಾಮಗಳಲ್ಲಿ ಶೇ.೪೦ ರಷ್ಟು ಪ್ರಮಾಣದಲ್ಲಿ ಶೀಥಿಲಗೊಂಡಿದ್ದ ಮನೆ ಗೋಡೆ ಕುಸಿತ ಪ್ರಕರಣಗಳು ಕಂಡು ಬಂದಿವೆ. ತಾಲೂಕು ಕಂದಾಯ ಅಧಿಕಾರಿಗಳು ತೋಟಗಾರಿಕೆ , ಕೃಷಿ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಕೈಗೊಂಡು ವರದಿಯನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಪರಿಹಾರದ ಹಣ ಬಂದ ತಕ್ಷಣ ಸಂಬಂಧಪಟ್ಟ ರೈತರಿಗೆ ಆರ್.ಟಿ.ಜಿಎಸ್ ಮೂಲಕ ವಿತರಿಸಲಾಗುವುದು. ಕಂಟ್ರೋಲ್ ರೂಂ
ತಾಲ್ಲೂಕಿನಲ್ಲಿ ಬಾರಿ ಮಳೆ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ತಾಲೂಕು ಆಡಳಿತ ಕಂಟ್ರೋಲ್ ರೂಂ ಪ್ರಾರಂಭಿಸಲಾಗಿದ್ದು ಕಂಟ್ರೋಲ್ ರೂಂನಲ್ಲಿ ದಿನದ ೨೪ ಗಂಟೆಗಳು ಕಾರ್ಯ ನಿರ್ವಹಿಸಲಿದೆ. ತಾಲೂಕಿನ ಯಾವುದೇ ಭಾಗದಲ್ಲಿ ಹಾನಿಯಾದರೆ ತಕ್ಷಣ ನಮ್ಮ ಕಂಟ್ರೋಲ್ ರೂಂ ನಂಬರ್ ೮೯೭೧೮೩೪೬೧೬ ಈ ನಂಬರ್‌ಗೆ ಕರೆ ಮಾಡಿ ದೂರು ನೀಡಬಹುದು ಎಂದು ತಹಶೀಲ್ದಾರ್ ನಾಗವೇಣಿ ತಿಳಿಸಿದರು.