ಕನ್ನಡಪ್ರಭ ವಾರ್ತೆ, ಕೊಪ್ಪ
ಕೊಪ್ಪ ತಾಲೂಕಿನಾದ್ಯಂತ ಗುರುವಾರ ಮಧ್ಯಾಹ್ನದಿಂದಲೇ ಮಳೆ ಬಿರುಸುಗೊಂಡಿದ್ದು ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸರಕೇರಿಯ ಕಾಣಿಹಳ್ಳ ತುಂಬಿ ಹರಿದಿದ್ದರಿಂದ ಕೊಪ್ಪ ಚಿಕ್ಕಮಗಳೂರು ರಸ್ತೆಯ ಖಾಸಗಿ ಗ್ಯಾಬ್ರಿಯಲ್ ಲೇಔಟ್ ಸಂಪೂರ್ಣ ಜಲಾವೃತಗೊಂಡಿದೆ.ಕೊಪ್ಪ ಕೆಸವೆ ರಸ್ತೆಯ ಅಚ್ಚರಡಿ ಬಳಿ ಮುಸುರೆಹಳ್ಳ ಮತ್ತು ಅಚ್ಚರಡಿ ಹಳ್ಳ ತುಂಬಿ ಸೇತುವೆ ಮೇಲೆ ನೀರು ಬಂದು ಚೌಕಿ, ಕೆಸವೆ, ಸಿದ್ಧರ ಮಠಗಳ ಕಡೆಯ ರಸ್ತೆ ಅಸ್ತವ್ಯಸ್ತಗೊಂಡಿದೆ.
ದಯಂಬಳ್ಳಿ ಗ್ರಾಮದ ಗಿರಿಜ ಎಂಬುವವರ ಮನೆ ಮೇಲ್ಛಾವಣಿ ಬಿದ್ದಿದ್ದು, ಕೊಪ್ಪದ ಹಲವು ಕಡೆ ಮನೆ ಹಾನಿ ಪ್ರಕರಣಗಳು ವರದಿಯಾಗಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ.ಕೌರಿ ಹಳ್ಳ ತುಂಬಿ ಕೃಷಿ ಚಟುವಟಿಕೆಗಳು ನಡೆದ ಗದ್ದೆಗಳು ಜಲಾವೃತವಾಗಿದೆ. ಕೊಪ್ಪ ಪಟ್ಟಣದ ಮುಖ್ಯ ರಸ್ತೆಯ ಕೆಳಗಿನ ಪೇಟೆಯ ಶಂಕರ್ ರೈಸ್‌ಮಿಲ್ ಬಳಿ ಟಿಸಿ ಯಿಂದ ವಿದ್ಯುತ್ ಹರಿದು ೩ ಬೀಡಾಡಿ ದನಗಳು ಸಾವನ್ನಪ್ಪಿದೆ. ಬಿಂತ್ರವಳ್ಳಿ ಬಳಿ ವಿದ್ಯುತ್ ಲೈನ್ ಮೇಲೆ ಮರಗಳು ಬಿದ್ದಿದ್ದು ಮೆಸ್ಕಾಂ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶವಾದ ಬಸ್ರಿಕಟ್ಟೆಯ ಬಳಿ ಹಲವೆಡೆ ರಸ್ತೆಗಳ ಮೇಲೆ ಮರಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಳ್ಳದ ಮೇಲೆ ಮರ ಬಿದ್ದು ಹಳ್ಳದ ನೀರು ಎಲ್ಲೆಂದರಲ್ಲಿ ನುಗ್ಗಿ ಹಾನಿಯುಂಟು ಮಾಡಿದೆ. ವಿದ್ಯುತ್ ಲೈನ್‌ನ ಮೇಲೆ ಮರ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಅನೇಕ ಮನೆಗಳಿಗೆ ಹಾನಿಯುಂಟಾಗಿದೆ. ಅತಿಯಾದ ಮಳೆ ಮತ್ತು ಧರೆ ಕುಸಿತಗಳಿಂದ ಹಾನಿಯುಂಟಾಗಿದೆ.
ಬಸ್ರಿಕಟ್ಟೆ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಹಾನಿಯುಂಟಾಗಿ ಜನಜೀವನ ಅಸ್ತವ್ಯಸ್ತಗೊಂದ ವಿಚಾರವನ್ನು ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಅಧಿಕಾರಿಯೂ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಸ್ಪಂದನೆ ನೀಡದೆ ಇದ್ದಲ್ಲಿ ತಾಲೂಕು ಆಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದ ಬಿಜೆಪಿ ಮುಖಂಡ ಮಣಿಕಂಠನ್ ಕಂದಸ್ವಾಮಿ ಈಗಾಗಲೇ ಸಾರ್ವಜನಿಕರೊಡಗೂಡಿ ರಾತ್ರಿ ಹಗಲೆನ್ನದೆ ಬಿದ್ದ ಮರಗಳನ್ನು ತೆರವು ಗೊಳಿಸುವ ಕಾರ್ಯ ಮಾಡುತ್ತಿದ್ದೇವೆ ಎಂದಿದ್ದಾರೆ.ಕಳೆದ ೨೪ ಗಂಟೆಗಳಲ್ಲಿ ಕೊಪ್ಪ ೭೨ ಮಿ.ಮೀ, ಹರಿಹರಪುರ ೭೦ ಮಿ.ಮೀ, ಜಯಪುರ ೫೩ ಮಿ.ಮೀ, ಬಸ್ರಿಕಟ್ಟೆ ೧೧೨.೨ ಮಿ.ಮೀ, ಕಮ್ಮರಡಿ ೭೫.೨ ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ.