ಕೊಡಗು ಪ್ರವಾಹಪೀಡಿತ: 22 ಮನೆಗಳಿಗೆ ಹಾನಿ, ಇಂದೂ ಶಾಲೆ, ಕಾಲೇಜುಗಳಿಗೆ ರಜೆ

KannadaprabhaNewsNetwork |  
Published : Jul 19, 2024, 12:53 AM IST

ಸಾರಾಂಶ

ಜಿಲ್ಲೆಯಾದ್ಯಂತ ಗುರುವಾರವೂ ಕೂಡ ಮಳೆ ಅಬ್ಬರ ಮುಂದುವರಿದ ಪರಿಣಾಮ ಜಿಲ್ಲೆಯ ಹಲವು ಕಡೆ ಪ್ರವಾಹ ಉಂಟಾಗಿದೆ. ಜಿಲ್ಲೆಯ ಭಾಗಮಂಡಲ, ನಾಪೋಕ್ಲು ಚೆರಯಪರಂಬುವಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಒಂದೇ ದಿನ ಸುಮಾರು 22 ಮನೆಗಳಿಗೆ ಹಾನಿಯಾಗಿದೆ.ಶುಕ್ರವಾರವೂ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ‌

ಜಿಲ್ಲೆಯಾದ್ಯಂತ ಗುರುವಾರವೂ ಕೂಡ ಮಳೆ ಅಬ್ಬರ ಮುಂದುವರಿದ ಪರಿಣಾಮ ಜಿಲ್ಲೆಯ ಹಲವು ಕಡೆ ಪ್ರವಾಹ ಉಂಟಾಗಿದೆ. ಜಿಲ್ಲೆಯ ಭಾಗಮಂಡಲ, ನಾಪೋಕ್ಲು ಚೆರಯಪರಂಬುವಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಒಂದೇ ದಿನ ಸುಮಾರು 22 ಮನೆಗಳಿಗೆ ಹಾನಿಯಾಗಿದೆ.ಶುಕ್ರವಾರವೂ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 210 ಮಿಲಿ ಮೀಟರ್ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಭಾರಿ ಮಳೆಯಿಂದ ಕೊಡಗಿನ ಜನತೆ ಆತಂಕದಲ್ಲಿದ್ದಾರೆ.

ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಗುರುವಾರ ಮಳೆ ಆರ್ಭಟ ಹೆಚ್ಚಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಬೀಡಲಾಗಿತ್ತು.

ಬ್ರಹ್ಮಗಿರಿ ಬೆಟ್ಟ ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಹಿನ್ನೆಲೆ ಕಾವೇರಿ ನದಿ ಪ್ರವಾಹದ ರೂಪ ಪಡೆದುಕೊಳ್ಳುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಅಪಾಯದ ಮಟ್ಟ ಮೀರುತ್ತಿರುವ ಕಾವೇರಿ ಭಗಂಡೇಶ್ವರ ದೇವಾಲಯದ ಆವರಣಕ್ಕೂ ಕಾವೇರಿ ನದಿ ನೀರು ನುಗ್ಗುತ್ತಿದೆ. ಭಾಗಮಂಡಲ ಗ್ರಾಮವೇ ಜಲಾವೃತವಾಗುವ ಆತಂಕ ಎದುರಾಗಿದೆ. ಮಡಿಕೇರಿ ಭಾಗಮಂಡಲ ಸಂಪರ್ಕ ಬಂದ್ ಆಗುವ ಸಾಧ್ಯತೆ ಇದ್ದು, ಮೇಲು ಸೇತುವೆ ಇರುವುದರಿಂದ ಸಂಪರ್ಕಕ್ಕೆ ಸಮಸ್ಯೆ ಎದುರಾಗಿಲ್ಲ.

ಒಳಹರಿವು ಹೆಚ್ಚಳ:

ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಯಲ್ಲಿ ಒಳ ಹರಿವು ಹೆಚ್ಚಾಗಿದೆ. ಕಾವೇರಿ ನದಿ ಕೂಡ ಅಪಾಯದ ಮಟ್ಟ ಮೀರಿ ಎದುರಾಗಿದ್ದು, ನದಿ ತಟದಲ್ಲಿ ವಾಸಿಸುವ ನಿವಾಸಿಗಳಿಗೆ ಪ್ರವಾಹ ಆತಂಕ ಉಂಟಾಗಿದೆ.

ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿ ಮದೆ ಗ್ರಾಮದ ಮನೋಹರಿ ಎಂಬವರ ಮನೆ ಬಳಿ ಹೆಚ್ಚಿನ ಮಳೆಯಿಂದ ಬರೆ ಕುಸಿದಿದೆ. ಇದೇ ಗ್ರಾಮದ ಬಂಡನ ಸರೋಜನಿ ಎಂಬವರ ಮನೆ ಸಮೀಪ ಹೆಚ್ಚಿನ ಮಳೆಯಿಂದ ಬರೆ ಕುಸಿದಿದೆ. ಸೋಮವಾರಪೇಟೆ ತಾಲೂಕಿನ ಬಿಳಕಿಕೊಪ್ಪ ಗ್ರಾಮದ ಸರಸ್ವತಿ ಅವರ ಮನೆ ಮೇಲೆ ತೀವ್ರ ಮಳೆಯಿಂದ ಮರ ಬಿದ್ದು ಮನೆ ಹಾನಿಯಾಗಿದೆ.

ಕೊಡ್ಲಿಪೇಟೆ ಹೋಬಳಿ ಅವರೇದಾಳು ಗ್ರಾಮದ ಮೀನಾಕ್ಷಿ ರಂಗಯ್ಯ ಎಂಬವರ ಮನೆ ಹೆಚ್ಚಿನ ಮಳೆಯಿಂದಾಗಿ ಹಾನಿ ಆಗಿದೆ. ಸೋಮವಾರಪೇಟೆ ಹೋಬಳಿ ಮೂವತ್ತೋಕ್ಲು ಗ್ರಾಮದ ಜಾನು ಬೇಡು ಅವರ ಮನೆಯು ವ್ಯಾಪಕ ಮಳೆಗೆ ಹಾನಿಯಾಗಿದೆ.

ಕುಶಾಲನಗರ ಹೋಬಳಿ ಮಾದಾಪಟ್ಟಣ ಗ್ರಾಮದ ನಿವಾಸಿ ಜಯಮ್ಮ ಅವರ ವಾಸದ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಹಾನಿಯಾಗಿದ್ದು, ತಹಸೀಲ್ದಾರ್ ಕಿರಣ್ ಗೌರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದ್ದಾರೆ. ಸೋಮವಾರಪೇಟೆ ಹೋಬಳಿಯ ದೊಡ್ಡಬೂರು ಗ್ರಾಮದ ಗೌರಿ ರಾಜು ಅವರ ವಾಸದ ಮನೆಯು ಭಾರಿ ಮಳೆ- ಗಾಳಿಗೆ ಮನೆಯ ಗೋಡೆ ಕುಸಿದಿದೆ.

ಕುಶಾಲನಗರ ತಾಲೂಕಿನ ಕುಶಾಲನಗರ ಹೋಬಳಿಯ ಬಸವನತ್ತೂರು ಗ್ರಾಮದ ಲಕ್ಷ್ಮಿ ಮಣಿ ಮನೆಯು ಹೆಚ್ಚಿನ‌ ಮಳೆಯಿಂದ ಪೂರ್ಣ ಹಾನಿಯಾಗಿದೆ. ಈ ಹಿನ್ನೆಲೆ ತಹಸೀಲ್ದಾರ್ ಕಿರಣ್ ಗೌರಯ್ಯ ಕುಟುಂಬದವರಿಗೆ ಆಹಾರ ಕಿಟ್ ವಿತರಿಸಿದರು.

ಮಡಿಕೇರಿ ತಾಲೂಕಿನ ಕಗ್ಗೊಡ್ಲು ಬಿಳಿಗೇರಿ ರಸ್ತೆಯಲ್ಲಿ ಬಾಯಂಡಾ ಮನೆ ಹತ್ತಿರ ಸೇತುವೆಯ ಒಂದು ಬದಿ ಮಣ್ಣು ಕುಸಿಯುತ್ತಿದೆ. ಈ ಸಂಬಂಧ ಮುಂಜಾಗ್ರತ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಬದಲಿ ರಸ್ತೆಯಾಗಿ ಮೇಕೇರಿ ಬಿಳಿಗಿರಿ ರಸ್ತೆ ಲಭ್ಯವಿದೆ. ಶನಿವಾರಸಂತೆ ಹೋಬಳಿಯ ಆಲೂರು ಸಿದ್ದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾರೋಹಳ್ಳಿ ಗ್ರಾಮದಲ್ಲಿ ರಸ್ತೆಯ ಎರೆಡು ಭಾಗದಲ್ಲಿ ಬರೆ ಕುಸಿದಿದ್ದು, ಮಣ್ಣು ತೆರವುಗೊಳಿಸುವ ಕಾರ್ಯ ನಡೆದಿದೆ.

ಮೇಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಕತ್ತೂರು ವಿರಾಜಪೇಟೆ-ಮಡಿಕೇರಿಯ ಮುಖ್ಯ ರಸ್ತೆಯಲ್ಲಿ ಮಳೆಯಿಂದಾಗಿ ನೀರು ತುಂಬಿದ್ದು ಮಹಮ್ಮದ್ ಹಾಗೂ ಮೂಸಾ ಎಂಬುವರ ಮನೆಗೆ ಸ್ವಲ್ಪ ಪ್ರಮಾಣ ನೀರು ಹರಿದು ಬಂದಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಚರಂಡಿ ಸ್ವಚ್ಛಗೊಳಿಸಲಾಯಿತು.

ಚೇಲವಾರ ಗ್ರಾಮದ ಚೆಟ್ಟಿಯಪ್ಪ ಎಂಬುವವರ ವಾಸದ ಮನೆಯ ಹಿಂಭಾಗದಲ್ಲಿ ಗೋಡೆ ಕುಸಿದಿದೆ. ಮನೆಯು ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆಯಿದ್ದು, ಕುಟುಂಬದವರ ಸ್ಥಳಾಂತರಕ್ಕೆ ತಾಲೂಕು ಆಡಳಿತ ಕ್ರಮವಹಿಸಿದೆ.

ವಿರಾಜಪೇಟೆ ಹೋಬಳಿ ಅಂಬಟ್ಟಿ ಗ್ರಾಮದ ನಿವಾಸಿ ಕೆ ಅಲೀಮಾ ಅವರ ವಾಸದ ಮನೆಯ ಹಿಂಭಾಗದಲ್ಲಿ ಬರೆ ಕುಸಿಯುತ್ತಿದ್ದು, ಈ ಸಂಬಂಧ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕುಟುಂಬದವರನ್ನು ಸ್ಥಳಾಂತರಿಸಿದ್ದಾರೆ.

ಕೊಡ್ಲಿಪೇಟೆ ಹೋಬಳಿ ದೊಡ್ಡಕುಂದ ಗ್ರಾಮದ ಮೈಮುನ ಅವರ ವಾಸದ ಮನೆ ಹೆಚ್ಚಿನ ಮಳೆಯಿಂದ ಹಾನಿಯಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದರು.

ಕುಶಾಲನಗರ ತಾಲೂಕು ಕುಶಾಲನಗರ ಹೋಬಳಿ ನೆಲ್ಯಹುದಿಕೇರಿ ಗ್ರಾಮದ ಕಾವೇರಿ ನದಿ ಪಾತ್ರದಲ್ಲಿ ವಾಸವಾಗಿದ್ದ ಅಕ್ಕಣ್ಣಿ ಕರ್ಪ, ರಾಜು ಅವರ ಮನೆಗೆ ಕಾವೇರಿ ನದಿ ನೀರು ನುಗ್ಗಿದ್ದು. ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಅವರು ಆಹಾರ ಕಿಟ್ ವಿತರಿಸಿದರು. ಈ ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ‌.

ಸೋಮವಾರಪೇಟೆ ಹೋಬಳಿಯ ನೇಗಳ್ಳಿ ಕರ್ಕಳ್ಳಿ ಗ್ರಾಮದ ಮುನಿಯಮ್ಮ ಅವರ ವಾಸದ ಮನೆಯು ಭಾರಿ ಗಾಳಿಯಿಂದ ಮನೆ ಹಾನಿಯಾಗಿದೆ.

ಶ್ರೀಮಂಗಲ ಹೋಬಳಿ ಕೆ ಬಾಡಗ ಗ್ರಾಮದ ಚಂದನಕೆರೆ ಹಾಡಿಯ ನಿವಾಸಿಯಾದ ಮಧು ರವರ ಮನೆಯು ಗಾಳಿ-ಮಳೆಗೆ ಹಾನಿಯಾಗಿದೆ.

ಕುಂಜಿಲ ಗ್ರಾಮದ ಖದಿಸಮ್ಮ ಎಂಬುವವರ ವಾಸದ ಮನೆ ಹಾನಿಯಾಗಿದ್ದು, ಮನೆಯು ಬೀಳುವ ಸ್ಥಿತಿಯಲ್ಲಿದೆ. ಈ ಹಿನ್ನೆಲೆ ಕುಟುಂಬದವರನ್ನು ಸ್ಥಳಾಂತರಿಸಲಾಗಿದೆ.

ಯವಕಪಾಡಿ ಬಳಿಯ ಕಾಲೋನಿಯ ಕಾವೇರಿ ಅವರ ವಾಸದ ಮನೆ ಗಾಳಿ ಮಳೆಗೆ ಮನೆ ಹಾನಿಯಾಗಿದೆ.

ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಕುಮಾರಳ್ಳಿ (ಬೀದಳ್ಳಿ) ಗ್ರಾಮದ ಎನ್ ಈ ಪೊನ್ನಪ್ಪ ಈರಪ್ಪ ರವರ ವಾಸದ ಕಚ್ಚ ಮನೆಯ ಹಿಂಬದಿಯ ಬಲಭಾಗದ ಗೋಡೆ ಕುಸಿದಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಶಾಂತಳ್ಳಿ ಹೋಬಳಿ ತೋಳೂರು ಶೆಟ್ಟಳ್ಳಿ ಗ್ರಾಮದ ನಿವಾಸಿಯಾದ ಟಿ ಲಕ್ಷ್ಮಮ್ಮ ಮುತ್ತಣ್ಣ ಅವರ ಮನೆಯ ಗೋಡೆ ಮತ್ತು ಛಾವಣಿ ಬಿದ್ದು ಹಾನಿಯಾಗಿದೆ.............

ರ್‍ಯಾಫ್ಟಿಂಗ್‌ ಸ್ಥಗಿತದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿ ಟಿ - ಶೆಟ್ಟಿಗೇರಿ ಗ್ರಾಮದ ವೈಟ್ ವಾಟರ್ ಪಾಯಿಂಟ್ ಅಲ್ಲಿ ನೀರಿನ ಪ್ರಮಾಣ ಹಾಗೂ ತೀವ್ರತೆ ಹೆಚ್ಚಾದ್ದರಿಂದ ತಹಸೀಲ್ದಾರರು ಭೇಟಿ ನೀಡಿ ರ್‍ಯಾಫ್ಟಿಂಗ್‌ ಸಂಪೂರ್ಣ ಸ್ಥಗಿತಗೊಳಿಸಿ ಸೂಚನೆ ನೀಡಿದ್ದಾರೆ.

.................

ರಸ್ತೆಗಳ ಮೇಲೆ ನೀರುಮಡಿಕೇರಿ ಮೂರ್ನಾಡು ಮುಖ್ಯ ರಸ್ತೆಯ ಕಗ್ಗೊಡ್ಲು ಗ್ರಾಮದ ಮುತ್ತಪ್ಪ ಎಂಬುವರ ಅಂಗಡಿ ಮತ್ತು ಮನೆಗೆ ಹೆಚ್ಚಿನ ಮಳೆಯಿಂದಾಗಿ ಹೊಳೆ ತುಂಬಿ ನೀರು ಹರಿದು ಜಲಾವೃತವಾಗಿದೆ. ಈ ಕುಟುಂಬದವರನ್ನು ಸ್ಥಳಾಂತರಿಸಲು ಕ್ರಮವಹಿಸಲಾಗಿದೆ. ಕುಟ್ಟ, ಹರಿಹರ, ಇರ್ಪು ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಲಕ್ಷ್ಮಣ ತೀರ್ಥ ನದಿ ಭರ್ತಿಯಾಗಿ ಬಾಳೆಲೆ ಸಮೀಪ ನಿಟ್ಟೂರು ಸೇತುವೆಯ ಪಕ್ಕದಲ್ಲಿ ನದಿಯ ಎರಡೂ ಬದಿಯ ಗದ್ದೆಗೆ ನೀರು ತುಂಬಿದೆ.

....................

ಇಂದೂ ಕೊಡಗಿನ ಶಿಕ್ಷಣ ಸಂಸ್ಥೆಗಳಿಗೆ ರಜೆಭಾರಿ ಮಳೆ ಹಾಗೂ ರೆಡ್‌ ಅಲರ್ಟ್‌ ಘೋಷಣೆಯಲ್ಲಿ ಹಿನ್ನಲೆಯೆಲ್ಲಿ ಕೊಡಗು ಜಿಲ್ಲೆಯ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ಶುಕ್ರವಾರ ಕೂಡ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ