ಹಿರಿಯೂರು ನಗರದ ಗಾಂಧಿ ವೃತ್ತದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ 56,432 ಖಾಲಿ ಹುದ್ದೆಗಳ ಭರ್ತಿಯಲ್ಲಿ ಶೇ.15ರ ಒಳ ಮೀಸಲಾತಿಯನ್ನು ಗ್ರೂಪ್ ಎ,ಬಿ,ಸಿ ವರ್ಗೀಕರಣದಂತೆ ಜಾರಿಗೊಳಿಸಬೇಕೆಂದು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ ಸಿದ್ದೇಶ್ ರವರಿಗೆ ಹಕ್ಕೊತ್ತಾಯಗಳ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ಗಾಂಧಿ ವೃತ್ತದಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ 56,432 ಖಾಲಿ ಹುದ್ದೆಗಳ ಭರ್ತಿಯಲ್ಲಿ ಶೇ.15ರ ಒಳ ಮೀಸಲಾತಿಯನ್ನು ಗ್ರೂಪ್ ಎ,ಬಿ,ಸಿ ವರ್ಗೀಕರಣದಂತೆ ಜಾರಿಗೊಳಿಸಬೇಕೆಂದು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ಸಿದ್ದೇಶ್ ರವರಿಗೆ ಹಕ್ಕೊತ್ತಾಯಗಳ ಮನವಿ ಸಲ್ಲಿಸಿದರು.ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿರುವುದು ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ನ್ಯಾಯವಾಗಿದೆ. ಈ ಹೋರಾಟವು ಸಂವಿಧಾನದ ವಿಧಿಗಳ ಆತ್ಮವನ್ನು ಜೀವಂತವಾಗಿರಿಸುವ ಹೋರಾಟವಾಗಿದೆ.
ಆದರೆ ಸೆಪ್ಟಂಬರ್ 3-2025ರ ಆದೇಶಗಳನ್ನು ಅಳವಡಿಸದೆ ನೇಮಕಾತಿ ಮಾಡಲು ಸೂಚಿಸಿರುವುದು ಮಾದಿಗ ಸಮುದಾಯದ ದೀರ್ಘ 35 ವರ್ಷಗಳ ಹೋರಾಟಕ್ಕೆ ಮಾಡಿದ ಗಂಭೀರ ಅನ್ಯಾಯ ಹಾಗೂ ನಂಬಿಕೆ ದ್ರೋಹವಾಗಿದೆ. ರಾಜ್ಯದಲ್ಲಿರುವ 56,432 ಖಾಲಿ ಹುದ್ದೆಗಳ ಭರ್ತಿಯನ್ನು ಒಳ ಮೀಸಲಾತಿ ಶೇ.15 ಉಪ ಗುಂಪುಗಳವಾರು ಹಂಚಿಕೆಯನ್ನು ಸ್ಪಷ್ಟವಾಗಿ ಅನ್ವಯಿಸಿ ಮಾತ್ರ ಕೈಗೊಳ್ಳಬೇಕು. ಪರಿಷ್ಕೃತ ರೋಸ್ಟರ್ ಜಾರಿಗೊಳಿಸಿ ಕಾನೂನು ಸಮರ್ಥನೆಗಳೊಂದಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು.ನ್ಯಾ.ನಾಗಮೋಹನ್ ದಾಸ್ ವರದಿಯ ದತ್ತಾಂಶಗಳ ಆಧಾರದ ಮೇಲೆ ಶೇ.15 ಒಳ ಮೀಸಲಾತಿಯನ್ನು ಪರಿಶಿಷ್ಟ ಜಾತಿಯ ಗ್ರೂಪ್ ಎ,ಬಿ,ಸಿ ಯ ಉಪ ವರ್ಗೀಕರಣದಂತೆ ಜಾರಿಗೊಳಿಸಿ ಸ್ಪಷ್ಟ ತಿದ್ದುಪಡಿ ಆದೇಶ ಹೊರಡಿಸಬೇಕು.
ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ.56 ರಿಂದ ಶೇ.50ಕ್ಕೆ ಇಳಿಸಿರುವ ವಿಚಾರದಲ್ಲಿ ಸರ್ಕಾರವು ನ್ಯಾಯಾಲಯದ ಮುಂದೆ ಸಂವಿಧಾನಾತ್ಮಕ ಹಾಗೂ ಕಾನೂನು ಆಧಾರದ ಮೇಲೆ ಸಮಗ್ರ ಹಾಗೂ ಪ್ರಬಲ ವಾದ ಮಂಡಿಸಬೇಕು.ಅತ್ಯಂತ ಮುಖ್ಯವಾಗಿ ಶೇ.54 ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸುವ ಕುರಿತು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಸಂವಿಧಾನ ತಿದ್ದುಪಡಿ ಕ್ರಮ ಕೈಗೊಳ್ಳಬೇಕು. ಇದರಿಂದ ಸಾಮಾಜಿಕ ನ್ಯಾಯದ ನೀತಿಯನ್ನು ನ್ಯಾಯಾಂಗೀಯ ಸವಾಲುಗಳಿಂದ ರಕ್ಷಿಸಲು ಸಾಧ್ಯವಾಗುತ್ತದೆ.
ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು ಪರಿಶಿಷ್ಟ ಜಾತಿಗಳಿಗೆ ಶೇ.2 ಹಾಗೂ ಪರಿಶಿಷ್ಟ ಪಂಗಡಗಳಿಗೆ ಶೇ.4ರಂತೆ ಹುದ್ದೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಭರ್ತಿ ಮಾಡುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಒಳ ಮೀಸಲಾತಿ ಸಂಪೂರ್ಣ ಜಾರಿ ಆಗುವವರೆಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಇತರೆ ಖಾತೆ ನೀಡಬೇಕು ಹಾಗೂ ಅಲ್ಲಿ ಇರುವ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸೇರಿದಂತೆ ಇತರೆ ಅಧಿಕಾರಿಗಳನ್ನು ಬದಲಾಯಿಸಬೇಕು.ಈ ಹಕ್ಕೊತ್ತಾಯಕ್ಕೆ ಸರ್ಕಾರ ತಕ್ಷಣ ಸ್ಪಂದಿಸದಿದ್ದಲ್ಲಿ ಮಾದಿಗ ಸಮುದಾಯವು ರಾಜ್ಯಾದ್ಯಂತ ತನ್ನ ಹಕ್ಕುಗಳ ರಕ್ಷಣೆಗೆ ರಸ್ತೆಗಿಳಿದು ತೀವ್ರ ಹೋರಾಟ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ ಎಂದು ಒಲಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಸ್ಪಷ್ಟಪಡಿಸಿದರು.ಈ ಸಂದರ್ಭದಲ್ಲಿ ಕೆಪಿ ಶ್ರೀನಿವಾಸ್, ಘಾಟ್ ರವಿ, ಬೋರನಕುಂಟೆ ಜೀವೇಶ್, ದಯಾನಂದ್,ರಾಮಚಂದ್ರ ಕೆ, ರಾಘವೇಂದ್ರ ಆರ್,ಎಂ ಡಿ ಸಣ್ಣಪ್ಪ,ಶಿವು ಖಂಡೇನಹಳ್ಳಿ,ಕೆ ಆರ್ ರಘುನಾಥ್, ಅಡಿವೆಪ್ಪ, ಮಾರುತೇಶ್,ಬಿ ಸಿದ್ದಪ್ಪ, ಶಿವರಾಜ್,ವೀರೇಂದ್ರ, ಮಹಾಲಿಂಗಪ್ಪ, ಹನುಮಂತರಾಯಪ್ಪ ಮುಂತಾದವರು ಹಾಜರಿದ್ದರು.