ಕನ್ನಡಪ್ರಭ ವಾರ್ತೆ ಹರಿಹರ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಕ್ಷೀಣಿಸಿದರೆ ಆಯಾ ವಿಷಯವಾರು ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ಜಿ. ಹೇಳಿದರು.ನಗರದ ಹೊರವಲಯದ ಗುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹರಿಹರ ತಾಲೂಕು ಮಟ್ಟದ ವಿಜ್ಞಾನ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷೆ ನಡೆಸುವ ಪ್ರಕ್ರಿಯೆಯಲ್ಲಿ ಬಿಗಿ ಕ್ರಮಗಳನ್ನು ಸರ್ಕಾರ ಜಾರಿ ಮಾಡಿದೆ. ಶ್ರಮವಹಿಸುವ ಶಿಕ್ಷಕರು ಇರುವ ಶಾಲೆಗಳು ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಸರ್ಕಾರ ಹಾಗೂ ಇಲಾಖೆ ಶಿಕ್ಷಕರ ಮೇಲಿಟ್ಟಿರುವ ಭರವಸೆ ಈಡೇರಿಸಲೆ ಬೇಕಾಗಿದೆ. ತಪ್ಪಿದಲ್ಲಿ ಆಯಾ ವಿಷಯವಾರು ಶಿಕ್ಷಕರು ವಿರುದ್ಧ ಇಲಾಖೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ.೪೦ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರಿಗೆ ಒಂದು ಶಾಲೆಗೆ ಒಬ್ಬರಂತೆ ದತ್ತು ನೀಡಲಾಗುತ್ತದೆ. ಆ ಅಧಿಕಾರಿಯು ಶಾಲೆ ಶೈಕ್ಷಣಿಕ ಆಗು-ಹೋಗು ಗಮನಿಸಿ ಮಾರ್ಗದರ್ಶನ ನೀಡುವರು ಎಂದು ವಿವರಿಸಿದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕೆಂದರೆ, ಶಾಲೆಯಲ್ಲಿ ೮ನೇ ತರಗತಿಯಿಂದಲೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಾ ಬರಬೇಕು. ಸರ್ಕಾರಿ, ಅನುದಾನಿತ, ಅನುದಾನ ರಹಿತ ಯಾವುದೇ ಶಾಲೆ ಇದ್ದರೂ ಶಾಲೆಗೆ ಬಾರದಿರುವ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಕರೆತರಬೇಕು ಎಂದು ತಾಕೀತು ಮಾಡಿದರು.
ನಿಯಮಿತವಾಗಿ ಪೋಷಕರ ಸಭೆ ನಡೆಸಬೇಕು. ಶಿಕ್ಷಕರೂ ಕೂಡ ಸೂಕ್ತ ಪೂರ್ವ ತಯಾರಿ ಮಾಡಿಕೊಂಡು ಶಾಲೆಗೆ ಬಂದರೆ ಪ್ರಭಾವಿಯಾಗಿ ಪಾಠ ಮಾಡಲು ಸಾಧ್ಯ. ವಿಶೇಷ ತರಗತಿ, ಘಟಕ, ಮಾಸಿಕ ಪರೀಕ್ಷೆ, ರಸಪ್ರಶ್ನೆ ಕಾರ್ಯಕ್ರಮ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಗುಣಾತ್ಮಕವಾಗಿ ಸಿದ್ಧಗೊಳಿಸಬೇಕೆಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಇಒ ಎಂ.ಹನುಮಂತಪ್ಪ ಮಾತನಾಡಿ, ಪ್ರತಿ ವಿದ್ಯಾರ್ಥಿಯನ್ನು ವೈಯಕ್ತಿವಾಗಿ ಗಮನಹರಿಸಿ ಪಾಠಬೋಧನೆ ಮಾಡುವುದರಿಂದ ಶಿಕ್ಷಕರು ಯಶಸ್ಸು ಕಾಣಲು ಸಾಧ್ಯ, ಶೈಕ್ಷಣಿಕ ಮಾರ್ಗದರ್ಶಿ ಪುಸ್ತಕದ ಕುರಿತು ಅವರು ಮಾಹಿತಿ ಹಂಚಿಕೊಂಡರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಹರಿಹರ ತಾಲೂಕು ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಜೋಗಪ್ಪನವರ್, ಸಂಚಾಲಕ ಬಸವನಗೌಡ್ರು, ರಾಜ್ಯ ಸಂಪನ್ಮೂಲ ವ್ಯಕ್ತಿ ಶ್ರೀಧರ್ ಮಯ್ಯ ಮಾತನಾಡಿದರು.