ಕನ್ನಡಪ್ರಭ ವಾರ್ತೆ ಮದ್ದೂರು
ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆ ವ್ಯಾಪ್ತಿಯಿಂದ ಕೈ ಬಿಡುವವರೆಗೆ ಗ್ರಾಮದಲ್ಲಿ ನಡೆಯುವ ಯಾವುದೇ ಚುನಾವಣೆಗಳ ಮತದಾನವನ್ನು ಬಹಿಷ್ಕರಿಸಲು ಗ್ರಾಮಸ್ಥರು ಶನಿವಾರ ಒಮ್ಮತದ ತೀರ್ಮಾನ ಕೈಗೊಂಡರು.ಗ್ರಾಮದಲ್ಲಿ ಚಳವಳಿಗಾರರ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ, ರಾಜ್ಯ ನಗರಸಭೆ ಆಯುಕ್ತ ರವೀಂದ್ರ, ಜಿಲ್ಲಾಧಿಕಾರಿ ಡಾ. ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಸೇರ್ಪಡೆ ವಿಚಾರ ಕುರಿತು ಚರ್ಚೆ ನಡೆಯಿತು.
ಚರ್ಚೆಯಲ್ಲಿ ಗ್ರಾಪಂ ಕೈ ಬಿಡುವ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳು ಯಾವುದೇ ಭರವಸೆ ನೀಡದೆ ಚಳವಳಿ ಹಿಂಪಡೆಯುವಂತೆ ಮನವಿ ಮಾಡಿ ಸಭೆಯಿಂದ ನಿರ್ಗಮಿಸಿದರು. ಇದರಿಂದ ಕೆರಳಿದ ಚಳವಳಿ ನಿರತರು ನಗರಸಭೆ ವ್ಯಾಪ್ತಿಯಿಂದ ಗ್ರಾಮವನ್ನು ಕೈ ಬಿಡುವವರೆಗೆ ಚುನಾವಣೆಗಳನ್ನು ಬಹಿಷ್ಕರಿಸಲು ತೀರ್ಮಾನ ಕೈಗೊಂಡರು.ಮುಂಬರುವ ಗ್ರಾಪಂ, ಜಿಪಂ, ತಾಪಂ ಹಾಗೂ ವಿಧಾನಸಭಾ ಚುನಾವಣೆಗಳನ್ನು ಬಹಿಷ್ಕರಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಚಳವಳಿಯನ್ನು ತೀವ್ರಗೊಳಿಸಲು ಮುಖಂಡರು ಘೋಷಿಸಿದರು. ಸಚಿವರು ಮತ್ತು ಅಧಿಕಾರಿಗಳು ಹೋರಾಟದ ಸ್ಥಳಕ್ಕೆ ಬಂದು ಸಮಸ್ಯೆಗೆ ಪರಿಹಾರ ರೂಪಿಸುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಚಳವಳಿ ಕೈಬಿಡುವಂತೆ ಬುದ್ಧಿವಾದ ಹೇಳಿ ಮತ್ತಷ್ಟು ಸಮಸ್ಯೆಯನ್ನು ಹುಟ್ಟು ಹಾಕಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತಪರ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿ, ಚಳವಳಿಯ ಮುಂದಿನ ರೂಪುರೇಷೆಗಳನ್ನು ಚರ್ಚಿಸಲು ಭಾನುವಾರ ಗ್ರಾಮದ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಚುನಾವಣೆ ಬಹಿಷ್ಕಾರ ಸಂಬಂಧ ನಿರ್ಣಯ ಅಂಗೀಕರಿಸುವ ಜೊತೆಗೆ ಮುಂದಿನ ಹೋರಾಟದ ಬಗ್ಗೆ ಅಭಿಪ್ರಾಯ ಸಂಗ್ರಹಣೆ ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ರೈತ ಸಂಘದ ಅಧ್ಯಕ್ಷ ಜಿ.ಎ.ಶಂಕರ್. ಜಿ.ಟಿ.ಪುಟ್ಟಸ್ವಾಮಿ, ಜಿ.ಟಿ.ಚಂದ್ರಶೇಖರ್, ಜಿ.ಪಿ.ಯೋಗೇಶ್, ವೀರಪ್ಪ, ಮೋಹನ್, ಸತ್ಯ ಪ್ರೇಮಕುಮಾರಿ, ರಾಧಾ ಮತ್ತಿತರರಿದ್ದರು.
-------------7ಕೆಎಂಎನ್ ಡಿ28
ಮದ್ದೂರು ನಗರಸಭೆ ವ್ಯಾಪ್ತಿಯಿಂದ ಕೈ ಬಿಡುವವರೆಗೆ ಗ್ರಾಮದಲ್ಲಿ ನಡೆಯುವ ಯಾವುದೇ ಚುನಾವಣೆಗಳ ಮತದಾನವನ್ನು ಬಹಿಷ್ಕರಿಸಲು ಗ್ರಾಮಸ್ಥರು, ಪ್ರತಿಭಟನಾಕಾರರು ಒಮ್ಮತದ ತೀರ್ಮಾನ ಕೈಗೊಂಡರು.