ಲಕ್ಷ್ಮೇಶ್ವರ ತಾಲೂಕಿನಲ್ಲಿ ಆರ್ಭಟಿಸಿದ ಮಳೆ

KannadaprabhaNewsNetwork | Published : Mar 25, 2025 12:52 AM

ಸಾರಾಂಶ

ಲಕ್ಷ್ಮೇಶ್ವರ ತಾಲೂಕಿನಲ್ಲಿ ಮಳೆ ತನ್ನ ಆರ್ಭಟ ತೋರಿಸಿದೆ. ತಾಲೂಕಿನ ರಾಮಗೇರಿ ಮತ್ತು ಬಸಾಪುರ ಗ್ರಾಮಗಳಲ್ಲಿ ಆಲಿಕಲ್ಲಿನ ಮಳೆ ಸುರಿಯುವ ಮೂಲಕ ರೈತಾಪಿ ವರ್ಗಕ್ಕೆ ಸಂತಸ ಮೂಡಿಸಿದೆ.

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಮಳೆ ತನ್ನ ಆರ್ಭಟ ತೋರಿಸಿದೆ. ತಾಲೂಕಿನ ರಾಮಗೇರಿ ಮತ್ತು ಬಸಾಪುರ ಗ್ರಾಮಗಳಲ್ಲಿ ಆಲಿಕಲ್ಲಿನ ಮಳೆ ಸುರಿಯುವ ಮೂಲಕ ರೈತಾಪಿ ವರ್ಗಕ್ಕೆ ಸಂತಸ ಮೂಡಿಸಿದೆ.

45 ನಿಮಿಷ ಸುರಿದ ಮಳೆಯ ಜೊತೆಯಲ್ಲಿ ಆಲಿಕಲ್ಲು ಬೀಳುವ ಮೂಲಕ ಜನರಿಗೆ ಅಚ್ಚರಿ ಮೂಡಿಸಿದೆ. ರಾಮಗೇರಿ ಹಾಗೂ ಬಸಾಪುರ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಗೆ ಬಸಾಪುರ ಕೆರೆಗೆ ನೀರು ಬಂದಿದೆ.

ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ರಾಮಗೇರಿ, ಬಸಾಪುರ, ಮುಕ್ತಿಮಂದಿರ, ಗೋವನಾಳ ಗ್ರಾಮಗಳಲ್ಲಿ ಮಳೆಯು ಉತ್ತಮವಾಗಿ ಸುರಿದು ಬಿಸಿಲಿನ ಬೇಗೆಯನ್ನು ಕೊಂಚ ಕಡಿಮೆ ಮಾಡಿದೆ ಎಂದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಆಲಿಕಲ್ಲು ಮಳೆಗೆ ಬೆಚ್ಚಿ ಬಿದ್ದ ರಾಮಗೇರಿ ಜನತೆ

ಸಮೀಪದ ರಾಮಗೇರಿಯಲ್ಲಿ ಮಳೆಯೊಂದಿಗೆ ಸತತವಾಗಿ ಬಿದ್ದ ಆಲಿಕಲ್ಲನ್ನು ಸಾರ್ವಜನಿಕರು ಆರಿಸಿಕೊಂಡು ಬುಟ್ಟಿಯಲ್ಲಿ ತುಂಬಿ ಸಂಭ್ರಮಿಸಿದ್ದಾರೆ. ಇಂತಹ ಆಲಿಕಲ್ಲಿನ ಮಳೆಯನ್ನು ನಾವು ಹಿಂದೆಂದೂ ಕಂಡಿಲ್ಲವೆಂದು ಗ್ರಾಪಂ ಮಾಜಿ ಅಧ್ಯಕ್ಷ ಬಸಣ್ಣ ಬೆಟಗೇರಿ ಹೇಳಿದರು.

ಮಳೆ-ಗಾಳಿಗೆ ಹಾರಿಹೋದ ಶಾಲೆ ಚಾವಣಿ

ಸೋಮವಾರ ಸಂಜೆ ತಾಲೂಕಿನಲ್ಲಿ ಸುರಿದ ಭಾರೀ ಮಳೆ, ಗಾಳಿಗೆ ತಾಲೂಕಿನ ಸೂರಣಗಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಹಾರಿ ಹೋಗಿದೆ.

ಶಾಲೆ ಬಿಟ್ಟ ಮೇಲೆ ಸಂಜೆ 5 ಗಂಟೆಗೆ ಮಳೆ-ಗಾಳಿಗೆ ಅನಾಹುತ ಉಂಟಾಗಿದ್ದು, ಸುದೈವವಶಾತ್ ವಿದ್ಯಾರ್ಥಿಗಳಿಗೆ ಏನೂ ಆಗಿಲ್ಲ.ಶಾಲಾ ಆವರಣದಲ್ಲಿ ಎರಡು ವಿದ್ಯುತ್ ಕಂಬಗಳಿಗೂ ಹಾನಿ ಉಂಟಾಗಿದೆ.

ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ:

ಪಟ್ಟಣದ ಸೋಮೇಶ್ವರ ತೇರಿನ ಮನೆಯ ಹತ್ತಿರದ ಬಸವೇಶ್ವರ ದೇವಸ್ಥಾನದ ಎದುರಿನ ತೆಂಗಿನ ಮರಕ್ಕೆ ಸಿಡಿಲು ಹೊಡೆದು ಹೊತ್ತಿ ಉರಿದ ಘಟನೆ ಸೋಮವಾರ ಸಂಜೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಸೋಮವಾರ ಸಂಜೆ ಗುಡುಗು ಸಿಡಿಲಿನೊಂದಿಗೆ ಆರ್ಭಟಿಸಿದ ಮಳೆಯು ಕೆಲ ಹೊತ್ತು ಸುರಿದು ಪಟ್ಟಣದ ಜನತೆಗೆ ತಂಪೆರಚಿದ್ದು ಕಂಡು ಬಂದಿತು.ಈ ವೇಳೆ ಸೋಮೇಶ್ವರ ತೇರಿನ ಮನೆಯ ಹತ್ತಿರ ಇದ್ದ ತೆಂಗಿನ ಮರಕ್ಕೆ ಏಕಾಏಕಿ ಸಿಡಿಲು ಅಪ್ಪಳಿಸಿ ಕ್ಷಣ ಮಾತ್ರದಲ್ಲಿ ತೆಂಗಿನ ಮರ ಹೊತ್ತಿ ಉರಿಯಿತು. ಸಿಡಿಲಿನ ಹೊಡೆತಕ್ಕೆ ಜನರು ಬೆಚ್ಚಿಬಿದ್ದರು.

ಸಿಡಿಲಿನ ಹೊಡೆತಕ್ಕೆ ಹೊತ್ತಿ ಉರಿಯುತ್ತಿದ್ದ ತೆಂಗಿನ ಮರದಲ್ಲಿನ ಬೆಂಕಿ ನಂದಿಸುವ ಕಾರ್ಯವನ್ನು ಯಶಸ್ವಿಯಾಗಿ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು ಮಾಡಿದರು.

Share this article