ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು, ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಕಡೂರು ತಾಲೂಕಿನ ಜಾನಪದ ಖ್ಯಾತಿಯ, ಐತಿಹಾಸಿಕ ಮದಗದ ಕೆರೆ (65 ಅಡಿ ಆಳದ ಕೆರೆ) ಕೋಡಿ ಬಿದ್ದು, ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದೆ. ನೀರಿನ ಹೊರಹರಿವು ಹೆಚ್ಚಾಗುವ ಸಾಧ್ಯತೆಯಿದ್ದು, ಕೆರೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಏರಿ ಮೇಲೆ ಓಡಾಡಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಈ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಹೆಚ್ಚಾದ ಪರಿಣಾಮ ಕೃಷ್ಣಾ ನದಿಗೆ ಬರುತ್ತಿರುವ ಒಳಹರಿವಿನ ಪ್ರಮಾಣ 1.40 ಲಕ್ಷ ಕ್ಯುಸೆಕ್‌ಗೆ ಏರಿದೆ. ಹೀಗಾಗಿ, ಕೃಷ್ಣಾ ಸೇರಿದಂತೆ ಅದರ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳು ಕೂಡ ತುಂಬಿ ಹರಿಯುತ್ತಿವೆ.ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಕಟ್ಟಡದ ಮೇಲೆಯೇ ಬೃಹತ್ ಮಾವಿನ ಮರ ಉರುಳಿ ಬಿದ್ದಿದ್ದು, ಮೇಲ್ಛಾವಣಿ ಕುಸಿದಿದೆ. ಶಾಲಾ ತರಗತಿ ಆರಂಭಕ್ಕೂ ಮೊದಲು ಮರ ಬಿದ್ದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದರಿಂದಾಗಿ ಬೆಳಗಾವಿ ಜಿಲ್ಲೆಯ ಕುಡಚಿ-ಉಗಾರ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲೂಕಿನಲ್ಲಿ ಕೆಳಹಂತದಲ್ಲಿರುವ 8 ಸೇತುವೆಗಳು ಮುಳುಗಡೆಯಾಗಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತಮಂದಿರ, ಬಾಗಲಕೋಟೆಯ ಮಾಚಕನೂರು ಹೊಳೆ ಬಸವೇಶ್ವರ ದೇವಸ್ಥಾನಗಳು ಜಲಾವೃತಗೊಂಡಿವೆ. ನದಿ ತೀರದಲ್ಲಿರುವ ಹೊಲಗದ್ದೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.