ಕಾವೇರಿ: ರಾಜ್ಯದ ಹಿತ ಕಾಯಲು ಮುಂದಾದ ಸರ್ಕಾರ

KannadaprabhaNewsNetwork |  
Published : Aug 02, 2026, 01:45 AM IST
ಮಾರಡಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಉಪನ್ಯಾಸವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶವಿದ್ದರೂ ರಾಜ್ಯದ ಜನರ, ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿಯೇ ನೀರು ಬಿಡುವಂತೆ ಆದೇಶಿಸಿ ನಾಲ್ಕು ದಿನಗಳಾದರೂ ಇನ್ನೂ ತಮಿಳುನಾಡಿಗೆ ನಿಗದಿಯಷ್ಟು ಕಾವೇರಿ ನೀರು ಹರಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶವಿದ್ದರೂ ರಾಜ್ಯದ ಜನರ, ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿಯೇ ನೀರು ಬಿಡುವಂತೆ ಆದೇಶಿಸಿ ನಾಲ್ಕು ದಿನಗಳಾದರೂ ಇನ್ನೂ ತಮಿಳುನಾಡಿಗೆ ನಿಗದಿಯಷ್ಟು ಕಾವೇರಿ ನೀರು ಹರಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ.

ತಮಿಳುನಾಡಿಗೆ ಪ್ರತಿದಿನ 3500 ಕ್ಯುಸೆಕ್‌ನಂತೆ ಮುಂದಿನ 15 ದಿನಗಳ ಕಾಲ 4.50 ಟಿಎಂಸಿ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶಿಸಿವೆ. ಅದರಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯು ಕಳೆದ ಜು. 28ರಂದು ನೀರು ಹರಿಸುವಂತೆ ಆದೇಶಿಸಿದ್ದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಜು.30ರಂದು ಆ ಆದೇಶ ಎತ್ತಿ ಹಿಡಿದು ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿತ್ತು.

ಅದರ ಪ್ರಕಾರ ಈ ವೇಳೆಗಾಗಲೇ ಕನಿಷ್ಠ 11,574 ಕ್ಯುಸೆರ್‌ (1 ಟಿಎಂಸಿ) ನೀರು ತಮಿಳುನಾಡಿಗೆ ಬಿಡಬೇಕಿತ್ತು. ಆದರೆ, ಈವರೆಗೆ ಕೇವಲ 0.06 ಟಿಎಂಸಿ (694.4 ಕ್ಯುಸೆಕ್‌) ನೀರು ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಹರಿಸಲಾಗಿದೆ. ಕಳೆದ 100 ವರ್ಷಗಳಲ್ಲಿ ಇಷ್ಟು ಕಡಿಮೆ ಪ್ರಮಾಣದ ನೀರು ಹರಿದಿರುವುದು ಇದೇ ಮೊದಲು.

ಅದರ ಜತೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಸಭೆಗಳಲ್ಲಿ ತಮಿಳುನಾಡು ಸರ್ಕಾರ ಪ್ರತಿದಿನ 9500 ಕ್ಯುಸೆಕ್‌ ನೀರು ಹರಿಸುವಂತೆ ಪಟ್ಟು ಹಿಡಿದಿತ್ತು. ಅಲ್ಲದೆ, ಕಾವೇರಿ ನೀರು ಹಂಚಿಕೆ ಸೂತ್ರ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿತ್ತು. ಆದರೆ, ಸಂಕಷ್ಟದ ಸ್ಥಿತಿಯಲ್ಲಿ ಕಾವೇರಿ ನೀರು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ವಸ್ತುಸ್ಥಿತಿ ಮುಂದಿಟ್ಟು ಬಲವಾದ ವಾದ ಮಂಡಿಸಿತ್ತು. ಅದರ ಫಲವಾಗಿ ಪ್ರತಿದಿನ 3500 ಕ್ಯುಸೆಕ್‌ ನೀರು ಹರಿಸಲು ಪ್ರಾಧಿಕಾರ-ಸಮಿತಿ ಆದೇಶಿಸಿವೆ. ಆದರೂ, ರಾಜ್ಯ ಸರ್ಕಾರ ಆದೇಶದಷ್ಟು ನೀರು ಬಿಡದೆ ಕಠಿಣ ಕ್ರಮ ಕೈಗೊಂಡಿದೆ.

ಒಗ್ಗಟ್ಟಿಗೆ ಪ್ರಾಮುಖ್ಯತೆ:

ನೀರು ಹರಿಸದಿರುವ ನಿರ್ಧಾರದ ಜತೆಗೆ ರಾಜ್ಯದ ಹಿತಕ್ಕಾಗಿ ರಾಜಕೀಯ ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಸಾಗುವಂತೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಅದಕ್ಕಾಗಿಯೇ ವಿರೋಧ ಪಕ್ಷಗಳ ಅಭಿಪ್ರಾಯ, ಸಲಹೆ ಪಡೆಯಲು ಭಾನುವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಈವರೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳು, ರಾಜ್ಯದ ಹಿತ ಕಾಪಾಡಲು ತೆಗೆದುಕೊಂಡ ನಿರ್ಧಾರಗಳು, ಮುಂದಿನ ಸರ್ಕಾರದ ನಿರ್ಧಾರಗಳ ಕುರಿತು ವಿವರಿಸಲಾಗುತ್ತದೆ.ಈವರೆಗಿನ ಕಾವೇರಿ ಆದೇಶ, ತೆಗೆದುಕೊಂಡ ನಿರ್ಧಾರಗಳು:

ಕಾವೇರಿ ನದಿ ನೀರಿನ ವಿಚಾರವಾಗಿ 1991ರಿಂದಲೂ ರಾಜ್ಯದ ಹಿತ ಕಾಪಾಡಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಕಾವೇರಿ ವಿಚಾರವಾಗಿ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. 1991ರಲ್ಲಿ ಕಾವೇರಿ ನ್ಯಾಯಮಂಡಳಿ ತಮಿಳುನಾಡಿಗೆ ವಾರ್ಷಿಕ 205 ಟಿಎಂಸಿ ನೀರು ಬಿಡುಗಡೆಗೆ ಆದೇಶಿಸಿತ್ತು. ಅಂದಿನ ಸಿಎಂ ಬಂಗಾರಪ್ಪ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಆದೇಶದ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಿ, ನೀರು ಬಿಡುವುದಿಲ್ಲ ಎಂದು ದೃಢ ನಿಲುವು ತೆಗೆದುಕೊಳ್ಳಲಾಗಿತ್ತು.

ಹಾಗೆಯೇ, ಎಸ್‌.ಎಂ.ಕೃಷ್ಣ ಸಿಎಂ ಆಗಿದ್ದಾಗ 2002-03ರಲ್ಲಿ 9000 ಕ್ಯುಸೆಕ್‌ ನೀರು ಬಿಡಲು ಆದೇಶಿಸಲಾಗಿತ್ತು. ಅದನ್ನು ಖಂಡಿಸಿದ್ದ ಕೃಷ್ಣ ಬೆಂಗಳೂರಿನಿಂದ ಕೆಆರ್‌ಎಸ್‌ವರೆಗೆ ಐತಿಹಾಸಿಕ ಪಾದಯಾತ್ರೆ ನಡೆಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಸುಪ್ರೀಂಕೊರ್ಟ್‌ ಪ್ರತಿದಿನ 15000 ಕ್ಯುಸೆಕ್‌ ನೀರು ಹರಿಸುವಂತೆ ಆದೇಶಿಸಿತ್ತು. ಆಗಲೂ ರಾಜ್ಯ ಸರ್ಕಾರ ಕಾನೂನು ಹೋರಾಟದ ಮೂಲಕ 12000 ಕ್ಯುಸೆಕ್‌ ನೀರು ಹರಿಸಲು ಆದೇಶಿಸುವಂತೆ ಮಾಡಿತ್ತು. ಆದರೆ, ಅಂತಿಮವಾಗಿ ಕಾಂಗ್ರೆಸ್‌ ಸರ್ಕಾರ 10000 ಕ್ಯುಸೆಕ್‌ ನೀರು ಮಾತ್ರ ಹರಿಸಿತ್ತು. ಆಗಿನ ಜಲಸಂಪನ್ಮೂಲ ಸಚಿವರೂ ಆಗಿದ್ದ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಜತೆಗೂಡಿ ವಕೀಲರ ತಂಡಕ್ಕೆ ಮಾರ್ಗದರ್ಶನ ಮಾಡಿ ರಾಜ್ಯದ ಪರ ಬಲವಾದ ವಾದ ಮಂಡನೆ ಮಾಡಿಸಿದ್ದರು. ಹಾಗೆಯೇ, ಆ ವರ್ಷ 177 ಟಿಎಂಸಿ ಬದಲು 81 ಟಿಎಂಸಿ ಮಾತ್ರ ನೀರು ಹರಿಸಲಾಗಿತ್ತು.

ಅದೇ 1995, 2009 ಹಾಗೂ 2012-13ರಲ್ಲಿ ಕಾಂಗ್ರೇಸೇತರ ಸರ್ಕಾರಗಳು ತಮಿಳುನಾಡಿನ ಒತ್ತಡ ಹಾಗೂ ಆದೇಶ ಪಾಲನೆ ಸಂಕಷ್ಟಕ್ಕೆ ಸಿಲುಕಿ ಹೋರಾಟವಿಲ್ಲದೆ ತಮಿಳುನಾಡಿಗೆ ನೀರು ಹರಿಸಿದ್ದವು.

ಮೇಕೆದಾಟು ಹೋರಾಟಕ್ಕೂ ಬಲ:

ಪದೇ ಪದೆ ಸೃಷ್ಟಿಯಾಗುವ ಕಾವೇರಿ ನೀರು ಹಂಚಿಕೆ ಸಮಸ್ಯೆ ಪರಿಹರಿಸಲು ಮೇಕೆದಾಟು ಯೋಜನೆ ಅನುಕೂಲವಾಗಲಿದೆ. ಖುದ್ದು ಡಿ.ಕೆ.ಶಿವಕುಮಾರ್‌ ಅವರು ಮುತುವರ್ಜಿ ವಹಿಸಿರುವ ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್‌ ಆದೇಶ ದೊಡ್ಡ ಬಲ ತುಂಬಿದೆ. ಅದರ ಜತೆಗೆ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ಸೇರಿ ಯಾವುದೇ ಅನ್ಯರಾಜ್ಯಗಳ ಅನುಮತಿ ಅನಗತ್ಯ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್‌ ಸೇರಿ ಕಾಂಗ್ರೆಸ್‌ ನಾಯಕರ ಹೋರಾಟಕ್ಕೆ ದೊಡ್ಡ ಫಲ ದೊರೆತಂತಾಗಿದೆ.ಕಾವೇರಿ ‘ವರಿ’ ಚರ್ಚೆಗೆ ಇಂದು ಸರ್ವ ಪಕ್ಷ ಸಭೆ:

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಅಭಿಪ್ರಾಯ ಪಡೆದು, ರಾಜ್ಯದ ಮುಂದಿನ ಕ್ರಮ ನಿರ್ಧರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಭಾನುವಾರ ಸರ್ವ ಪಕ್ಷ ಸಭೆ ನಡೆಯಲಿದೆ.ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಹರಿವು ಕುಸಿತ ಕಂಡಿದ್ದು, ಇಂಥ ಸಂಕಷ್ಟದ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಅಸಾಧ್ಯ ಎಂದು ರಾಜ್ಯ ಸರ್ಕಾರ ಹೇಳಿದೆ. ಹೀಗಿರುವಾಗಲೂ ತಮಿಳುನಾಡಿಗೆ ಪ್ರತಿದಿನ 3500 ಕ್ಯುಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶಿಸಿದೆ. ಈ ಆದೇಶ ಪಾಲನೆ ಅಥವಾ ತಿರಸ್ಕಾರ ಹಾಗೂ ರಾಜ್ಯದ ಮುಂದಿರುವ ಆಯ್ಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವ ಪಕ್ಷ ಸಭೆ ನಡೆಸಲಾಗುತ್ತಿದೆ.ಜತೆಗೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶ ಪಾಲಿಸದಿದ್ದರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳು ಹಾಗೂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾದರೆ, ಯಾವೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆಯೂ ಚರ್ಚಿಸಿ ನಿರ್ಧರಿಸಲಾಗುತ್ತದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ ಕೂಡ ನೀರು ಬಿಡಲು ಆದೇಶಿಸಿದರೆ, ಆಗ ರಾಜ್ಯ ಸರ್ಕಾರ ಯಾವ ನಡೆ ಇಡಬೇಕು ಎಂಬ ಬಗ್ಗೆಯೂ ವಿಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.

ಮೇಕೆದಾಟು ಪ್ರಸ್ತಾಪ?:ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಕ್ಕಪಕ್ಕದ ರಾಜ್ಯಗಳಿಂದ ಒಪ್ಪಿಗೆ ಅಗತ್ಯವಿಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದೆ. ಅದರ ನಡುವೆಯೇ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಯ ಪರಿಷ್ಕೃತ ಡಿಪಿಆರ್‌ ತಿರಸ್ಕರಿಸಿ, ಹೊಸದಾಗಿ ಡಿಪಿಆರ್‌ ಸಲ್ಲಿಸುವಂತೆಯೂ ಸೂಚಿಸಿದೆ. ಈ ವಿಚಾರಗಳೂ ಸರ್ವ ಪಕ್ಷ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ.

ಸಭೆಯಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಾದ ಕೆಆರ್‌ಎಸ್‌, ಹೇಮಾವತಿ, ಹಾರಂಗಿ ಮತ್ತು ಕಬಿನಿಯಲ್ಲಿನ ನೀರಿನ ಶೇಖರಣೆ, ತಮಿಳುನಾಡಿಗೆ ನೀರು ಹರಿಸಿದರೆ ಉಳಿಯುವ ನೀರಿನ ಪ್ರಮಾಣ, ಮುಂದಿನ ಮಳೆಗಾಲದವರೆಗೆ ಕುಡಿಯುವ ಉದ್ದೇಶಕ್ಕೆ ಅಗತ್ಯವಿರುವ ನೀರಿನ ಪ್ರಮಾಣ ಹಾಗೂ ಜಲಾಶಯಗಳಲ್ಲಿ ಉಳಿಯುವ ನೀರು ಸಾಕಾಗಲಿದೆಯೇ ಎಂಬ ಕುರಿತು ಸರ್ಕಾರದಿಂದ ವಿರೋಧ ಪಕ್ಷದ ನಾಯಕರು, ಶಾಸಕರಿಗೆ ಮಾಹಿತಿ ನೀಡಲಾಗುತ್ತದೆ.ಒಂದು ವೇಳೆ ಹೊಸದಾಗಿ ಡಿಪಿಆರ್‌ ಸಲ್ಲಿಸಬೇಕೆಂದರೆ ಯಾವೆಲ್ಲ ಅಂಶಗಳನ್ನು ಸೇರಿಸಬೇಕು, ಮೇಕೆದಾಟು ಯೋಜನೆ ಕುರಿತು ಕೇಂದ್ರ ಸರ್ಕಾರದ ಎದುರು ರಾಜಕೀಯವಾಗಿ ಒಗ್ಗಟ್ಟು ಪ್ರದರ್ಶಿಸುವ ಕುರಿತೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ವಿಪಕ್ಷ ನಾಯಕರನ್ನು ಕೋರುವ ಸಾಧ್ಯತೆಗಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಬಳಗದ ಕಾರ್ಯಕ್ಕೆ ಶ್ಲಾಘನೆ
ಶೈಕ್ಷಣಿಕ ಸೇವಾ ಚಟುವಟಿಕೆಗಳಿಗೆ ಆದ್ಯತೆ: ರಾಜುಚಂದ್ರಶೇಖರ್‌