ಕನ್ನಡಪ್ರಭ ವಾರ್ತೆ ನಾಪೋಕ್ಲು
ಅಲ್ಲಲ್ಲಿ ಮರಗಳು ಮುರಿದು ಬಿದ್ದ ಪರಿಣಾಮ ಮನೆಗಳಿಗೆ ಹಾನಿ ಸಂಭವಿಸಿದಲ್ಲದೆ ಹೋಬಳಿ ವ್ಯಾಪ್ತಿಯ ಹಲವೆಡೆ ವಿದ್ಯುತ್ ಕಡಿತಗೊಂಡಿದೆ.
ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮದ ನಬೀಶ ಅವರ ವಾಸದ ಮನೆಗೆ ರಾತ್ರಿ ಭಾರೀ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಸೋಮವಾರ ರಾತ್ರಿ ಬಿದ್ದ ಮರದಿಂದಾಗಿ ಮನೆಯ ಚಾವಣಿಗೆ ಅಳವಡಿಸಿದ 5 ಸಿಮೆಂಟ್ ಶೀಟ್ ಹುಡಿಯಾಗಿರುವುದಲ್ಲದೆ ಗೋಡೆ ಬಿರುಕು ಬಿಟ್ಟು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.ಕಕ್ಕಬೆ -ಕುಂಜಿಲ ಗ್ರಾಮದ ನಿವಾಸಿ ಕೆ.ಎಂ ಮರಿಯಮ್ಮ ಅವರ ವಾಸದ ಮನೆ ಗೋಡೆ ಕುಸಿದು ಹಾನಿ ಸಂಭವಿಸಿದೆ.
ಮನೆ ಸಮೀಪದ ತೋಟದಲ್ಲಿದ್ದ ಭಾರಿ ಗಾತ್ರದ ಕಾಡು ಬೇವು ಮರ ಗಾಳಿ ಮಳೆಗೆ ಮುರಿದು ಬಿದ್ದು ಛಾವಣಿ ಹಾಗೂ ಮನೆಯೊಳಗಡೆಯಿದ್ದ ಪರಿಕರಗಳಿಗೆ ಭಾರಿ ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಗ್ರಾಮ ಲೆಕ್ಕಿಗೆ ಶರ್ಮಿಳಾ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಸಮೀಪದ ನಾಲಡಿಯಲ್ಲಿ 24 ಗಂಟೆಯಲ್ಲಿ 192.4 ಮಿಲಿ ಮೀಟರ್ ದಾಖಲೆ ಮಳೆಯಾಗಿದೆ. ನಾಲಡಿ ಗ್ರಾಮದಲ್ಲಿ ಇದುವರೆಗೆ ಒಟ್ಟು 68.81 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 19.48 ಇಂಚು ಮಳೆಯಾಗಿತ್ತು.
ಭಾಗಮಂಡಲಕ್ಕೆ ಇದುವರೆಗೆ 83 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 27 ಇಂಚು ಮಳೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ 56 ಇಂಚು ಹೆಚ್ಚು ಮಳೆಯಾಗಿದೆ. ತಲಕಾವೇರಿಯಲ್ಲಿ ಒಂದು ದಿನದಲ್ಲಿ ಎಂಟು ಇಂಚು ದಾಖಲೆ ಮಳೆ ಸುರಿದಿದೆ. ಭಾಗಮಂಡಲ ಸೇರಿದಂತೆ ವಿವಿಧೆಡೆ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಮಳೆ ಬಿರುಸು ಹೆಚ್ಚಿದರೆ ವಿವಿಧೆಡೆ ರಸ್ತೆ ಸಂಚಾರ ಕಡಿತಗೊಳ್ಳುವ ಆತಂಕ ಎದುರಾಗಿದೆ.