ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಲೆನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಚುರುಕುಗೊಂಡಿರುವ ಮುಂಗಾರು ಪೂರ್ವ ಮಳೆ ಬಿರುಸುಗೊಂಡಿದೆ. ಹಲವೆಡೆ ಮಳೆಯ ಅಬ್ಬರ ಜೋರಾಗಿದೆ.ಈ ನಡುವೆ ಶಿವಮೊಗ್ಗ ನಗರದಲ್ಲಿಯೂ ವರ್ಷಧಾರೆ ಮುಂದುವರಿದಿದೆ. ಭಾನುವಾರ ಮಧ್ಯಾಹ್ನ ನಗರ ವ್ಯಾಪ್ತಿ ಸೇರಿ ಹೊರವಲಯದ ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಸರಿ ಸುಮಾರು 1 ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆಯಾಗಿದೆ. ನಗರದಲ್ಲಿ ಬೆಳಗ್ಗೆಯಿಂದಲೂ ಇದ್ದ ಮೋಡ ಕವಿದ ವಾತಾವರಣ ಮಧ್ಯಾಹ್ನ ವೇಳೆಗೆ ಮಳೆ ಶುರುವಾಯಿತು. ಜೋರು ಮಳೆಯಿಂದಾಗಿ ವಿವಿಧ ರಸ್ತೆಗಳ ಮೇಲೆ ನೀರು ನಿಂತಿತ್ತು. ಮಳೆ ನೀರು ಸರಾಗವಾಗಿ ಚರಂಡಿಗೆ ಹರಿದು ಹೋಗಲಾಗದೆ ಈ ಸಮಸ್ಯೆ ಉಂಟಾಗಿತ್ತು. ಸೊಮಿನಕೊಪ್ಪ ರೈಲ್ವೆ ಮೇಲ್ಸೇತುವೆ ಬಳಿ ರಸ್ತೆ ಮೇಲೆ ನೀರು ನಿಂತಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ದುರ್ಗಿಗುಡಿಯಲ್ಲಿಯು ಇದೇ ಸ್ಥಿತಿ ಇತ್ತು. ಎಡೆಬಿಡದೆ ಸುರಿದ ಮಳೆಯಿಂದ ಹಲವೆಡೆ ರಸ್ತೆಗಳು ಕೆರೆಯಂತಾಗಿ ಪರಿವರ್ತಿತವಾಗಿದ್ದವು. ಹಲವೆಡೆ ಚರಂಡಿಗಳಲ್ಲಿ ಸರಾಗವಾಗಿ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಯ ಮೇಲೆಯೇ ಹರಿದು ಹೋಗುತ್ತಿದ್ದ ದೃಶ್ಯ ಕಂಡುಬಂದಿತು.
ಸಮುದಾಯ ಭವನಕ್ಕೆ ನುಗ್ಗಿದ ನೀರು:ತೀವ್ರ ಸ್ವರೂಪದ ಬಿಸಿಲು ಹಾಗೂ ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯ ಹಲವೆಡೆ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿದ್ದವು. ಆದರೆ, ಪ್ರಸ್ತುತ ಬೀಳುತ್ತಿರುವ ಭಾರೀ ಮಳೆಯಿಂದ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಂಡು ಬರಲಾರಂಭಿಸಿದೆ. ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಮಳೆಯ ನೀರು ಮದುವೆ ಛತ್ರಕ್ಕೆ ನುಗ್ಗಿರುವ ಬಗ್ಗೆ ತಿಳಿದು ಬಂದಿದೆ. ನಗರದ ಗುಡ್ಡೆಕಲ್‌ನಲ್ಲಿ ದೇವಸ್ಥಾನಕ್ಕೆ ಸೇರಿದ ಸಮುದಾಯ ಭವನದಲ್ಲಿ ಈ ಘಟನೆ ನಡೆದಿದೆ. ಮದುವೆ ಸಮಾರಂಭದಲ್ಲಿ ತಿಂಡಿ ಮಾಡುವ ವೇಳೆ ನೀರು ನುಗ್ಗಿದೆ. ಊಟದ ಹಾಲ್‌ಗೆ ನೀರು ನುಗ್ಗಿ ಕೊಂಚ ಗಲಿಬಿಲಿಗೊಳಿಸಿದೆ.