ಸೋಮವಾರಪೇಟೆ: ಪಟ್ಟಣ , ಗ್ರಾಮೀಣ ಪ್ರದೇಶದಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ

KannadaprabhaNewsNetwork |  
Published : May 25, 2025, 01:38 AM IST
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ: ಕೊಚ್ಚಿ ಹೋದ ಕಾಮಗಾರಿ | Kannada Prabha

ಸಾರಾಂಶ

ಕಳೆದ ಎರಡು ದಿನಗಳಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಭಾರಿ ಮಳೆಗೆ ಕಾಮಗಾರಿಗಳು ಕೊಚ್ಚಿ ಹೋಗಿವೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕಳೆದ ಎರಡು ದಿನಗಳಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಭಾರೀ ಮಳೆಗೆ ಹಲವಾರು ಕಾಮಗಾರಿಗಳು ಕೊಚ್ಚಿಹೋಗಿವೆ. ಪಟ್ಟಣದ ಪವರ್ ಹೌಸ್ ರಸ್ತೆಯಲ್ಲಿ ಮಳೆಯ ನಡುವೆಯೂ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಚರಂಡಿಗೆ ಬಳಸಿರುವ ಸಿಮೆಂಟ್ ಕೊಚ್ಚಿಕೊಂಡು ಹೋಗಿದೆ. ಈ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚರಂಡಿಯನ್ನು 7 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಕಾಮಗಾರಿಯು ಮಳೆಯ ನೀರಿನಲ್ಲಿ ಕೊಚ್ಚಿಹೋಗಿದೆ. ಇದರ ಬಗ್ಗೆ ಪಟ್ಟಣ ಪಂಚಾಯಿತಿ ಇಂಜಿನಿಯರ್ ಮತ್ತು ಅಧಿಕಾರಿಗಳು ಗಮನ ಹರಿಸದೆ, ನಷ್ಟ ಮಾಡುತ್ತಿದ್ದಾರೆ. ಸಾರ್ವಜನಿಕರ ಹಣ ಈ ರೀತಿ ವ್ಯರ್ಥ ಮಾಡುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ವಾರವೇ ಚರಂಡಿ ನಿರ್ಮಾಣಕ್ಕೆ ಸಿದ್ಧತೆಗಳನ್ನು ಗುತ್ತಿಗೆದಾರರು ಮಾಡಿಕೊಂಡಿದ್ದರು. ಆದರೆ, ಮಳೆ ಪ್ರಾರಂಭವಾದ ನಂತರ ಕಾಮಗಾರಿ ಮಾಡುತ್ತಿದ್ದಾರೆ. ಕಾಮಗಾರಿಯನ್ನು ತಕ್ಷಣ ನಿಲ್ಲಿಸಿ, ಗುತ್ತಿಗೆದಾರರು ಮರು ನಿರ್ಮಾಣ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಒತ್ತಾಯಿಸಿದರು. ಕಾಮಗಾರಿಯ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ತಕ್ಷಣ ಕಾಮಗಾರಿ ನಿಲ್ಲಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಮಳೆ ನಿಂತ ನಂತರ ಕಾಮಗಾರಿ ಮುಂದುವರೆಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿಯೂ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯು ಸುರಿಯುತ್ತಿದ್ದು, ಗ್ರಾಮೀಣ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಜೂನ್1 ರಿಂದ ಆರಂಭವಾಗಬೇಕಾಗಿದ್ದ ಮಳೆಯು ಮೇ ತಿಂಗಳಿನಲ್ಲಿಯೇ ಆರಂಭವಾದಂತಿದೆ.

ಕಳೆದ 24 ಗಂಟೆಗಳಲ್ಲಿ ಪಟ್ಟಣದಲ್ಲಿ 12.6ಮಿ.ಮೀ ಮಳೆಯಾಗಿದ್ದು, ಮೇ ತಿಂಗಳಿನಲ್ಲಿ 6.14 ಇಂಚು ಮಳೆಯಾಗಿದೆ. ಈ ಸಾಲಿನಲ್ಲಿ ಈವರೆಗೆ ಒಟ್ಟು 11.43 ಇಂಚು ಮಳೆಯಾಗಿರುವ ಕುರಿತು ವರದಿಯಾಗಿದೆ.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ