ಸೈನ್ಯಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗಲಿ: ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ

KannadaprabhaNewsNetwork |  
Published : May 25, 2025, 01:37 AM IST
ಪೋಟೊ24ಕೆಎಸಟಿ3: ಕುಷ್ಟಗಿ ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ ಸಾಮರಸ್ಯ ಸಂಗಮ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಎಲ್ಲ ಧರ್ಮದಲ್ಲಿ ಕೆಟ್ಟವರು, ಒಳ್ಳೆಯವರು ಇರುತ್ತಾರೆ. ಆದರೆ, ಒಳ್ಳೆಯವರು ಕೆಟ್ಟವರನ್ನು ತಿದ್ದುವ ಮೂಲಕ ಸರಿದಾರಿಗೆ ತರುವ ಕೆಲಸ ಮಾಡಬೇಕಾಗಿದೆ. ನಾವೆಲ್ಲ ಒಂದೇ ಎಂಬ ಮನೋಭಾವನೆಯೊಂದಿಗೆ ಸಮಾಜದಲ್ಲಿ ಉತ್ತಮ ಬದುಕು ನಡೆಸಬೇಕು. ಅಂದಾಗ ಮಾತ್ರ ಸಾಮರಸ್ಯದ ಜೀವನ ಸಾಧ್ಯವಾಗಲಿದೆ.

ಕುಷ್ಟಗಿ:

ಪ್ರತಿಯೊಬ್ಬರ ಮಕ್ಕಳು ಸೈನ್ಯಕ್ಕೆ ಸೇರುವಂತೆ ಪಾಲಕರು ಪ್ರೇರೇಪಿಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಪಟ್ಟಣದ ಶ್ರೀಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಮುಸ್ಲಿಂ ಯೂತ್‌ ಕಮಿಟಿ ವತಿಯಿಂದ ಸಾಮರಸ್ಯ ಸಂಗಮ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವಂತಾಗಬೇಕು ಎಂದರು.

ಎಲ್ಲ ಧರ್ಮದಲ್ಲಿ ಕೆಟ್ಟವರು, ಒಳ್ಳೆಯವರು ಇರುತ್ತಾರೆ. ಆದರೆ, ಒಳ್ಳೆಯವರು ಕೆಟ್ಟವರನ್ನು ತಿದ್ದುವ ಮೂಲಕ ಸರಿದಾರಿಗೆ ತರುವ ಕೆಲಸ ಮಾಡಬೇಕಾಗಿದೆ. ನಾವೆಲ್ಲ ಒಂದೇ ಎಂಬ ಮನೋಭಾವನೆಯೊಂದಿಗೆ ಸಮಾಜದಲ್ಲಿ ಉತ್ತಮ ಬದುಕು ನಡೆಸಬೇಕು. ಅಂದಾಗ ಮಾತ್ರ ಸಾಮರಸ್ಯದ ಜೀವನ ಸಾಧ್ಯವಾಗಲಿದೆ ಎಂದು ಹೇಳಿದರು.

ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿಆರ್. ಅಂಬೇಡ್ಕರ್‌ ಸೇರಿದಂತೆ ಅನೇಕ ಮಹನಿಯರು ಸಮಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದರು.

ಕಾಡಾ ನಿಗಮ ಅಧ್ಯಕ್ಷ ಹಸನಸಾಬ್‌ ದೋಟಿಹಾಳ ಮಾತನಾಡಿ, ದೇಶಪ್ರೇಮ ಹೊಂದುವುದು ಅವಶ್ಯಕವಾಗಿದೆ. ದೇಶದ ಬಗ್ಗೆ ಅಭಿಮಾನ ಹೊಂದಬೇಕು. ಜಾತಿ-ಧರ್ಮ ನೋಡದೆ ದೇಶಕ್ಕಾಗಿ ಹೋರಾಟ ಮಾಡಬೇಕು ಎಂದ ಅವರು, ತಾಲೂಕಿನಲ್ಲಿ ಎಲ್ಲರು ಸಾಮರಸ್ಯದಿಂದ ಇದ್ದೇವೆ. ಇಲ್ಲಿಯ ಸಾಮರಸ್ಯದ ಜೀವನ ಎಲ್ಲಿಯೂ ಸಿಗುವುದಿಲ್ಲ ಎಂದು ಹೇಳಿದರು.

ಇಳಕಲ್ಲಿನ ಮೌಲ್ವಿ ಮುಕ್ತಿ ಫಾರೂಖ್‌ ಮಾತನಾಡಿ, ದೇಶದ ಭದ್ರತಾ ದೃಷ್ಟಿಯಿಂದ ಗಡಿಯಲ್ಲಿ ಹಗಲಿರುಳೆನ್ನದೆ ಗಡಿ ಕಾಯುವ ಯೋಧರೆ ನಿಜವಾದ ದೇವರು. ಯೋಧರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಭಾರತೀಯ ಸೈನ್ಯ ಪ್ರಬಲವಾಗಿದೆ. ಭಯೋತ್ಪಾದನಾ ಪಿಡುಗು ತಡೆಯಬೇಕಾದರೆ ಎಲ್ಲರೂ ಒಂದಾಗಬೇಕು. ಭಾವೈಕ್ಯತೆ ಬೆಸೆಯಬೇಕು, ಭಯೋತ್ಪಾದನೆ ಬಿತ್ತುವ ಮನಸ್ಥಿತಿಯನ್ನು ವಿರೋಧಿಸಿ ಭಾರತದ ಐಕ್ಯತೆ ಸಾರೋಣ ಎಂದು ಕರೆ ನೀಡಿದರು.

ಫಾದರ್ ರೆವರೆಂಡ್ ಜಾನ ಪೀಟರ್ ಮಾತನಾಡಿ, ಪರಸ್ಪರ ಪ್ರೀತಿ, ಕ್ಷಮೆ, ಐಕ್ಯತೆ, ಹೊಂದಾಣಿಕೆ ಮೂಲಕ ದೇಶದ ಸುಭದ್ರತೆ ಕಾಪಾಡೋಣ. ನಿಜವಾಗಿ ಸೈನಿಕರ ಸೇವೆಯಿಂದ ನಾವೆಲ್ಲರೂ ಸುಖವಾಗಿದ್ದೇವೆ ಎಂದರು.

ಮಾಜಿ ಶಾಸಕ ಕೆ. ಶರಣಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ. ಬಸವರಾಜ ಸೇರಿದಂತೆ ಅನೇಕರು ಮಾತನಾಡಿದರು. ನಂತರ ಸೈನಿಕರನ್ನು ಸನ್ಮಾನಿಸಲಾಯಿತು. ಈ ವೇಳೆ ಶಿವಸಂಗಪ್ಪ ಬಿಜಕಲ್, ಮಹಾಂತೇಶ ಕಲ್ಲಬಾವಿ, ವಸಂತ ಮೇಲಿನಮನಿ, ಭೀಮನಗೌಡ ಜಾಲಿಹಾಳ, ಹನುಮಂತಪ್ಪ ವೆಂಕಟಾಪುರ, ಮುರ್ತುಜಾಸಾಬ್‌ ಪೇಂಟರ್, ಸಂಗಪ್ಪ ನಂದಾಪುರ, ಹಂಪನಗೌಡ ಪಾಟೀಲ, ತಿಪ್ಪಣ್ಣ, ಜೀವನಸಾಬ್‌ ಬಿನ್ನಾಳ, ಶಿವಬಸಪ್ಪ ಹಡಪದ ಹಾಗೂ ಮುಸ್ಲಿಂ ಯೂತ್‌ ಕಮಿಟಿ ಸದಸ್ಯರು ಇದ್ದರು.

PREV

Recommended Stories

ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ
ಎಸ್ಸೆಸ್ಸೆಲ್ಸಿ ಪಾಸ್‌ಗೆ 33% ಅಂಕ: ಮಿಶ್ರ ಪ್ರತಿಕ್ರಿಯೆ