ಹೆದ್ದಾರಿಯಲ್ಲೇ ಹರಿದ ನೀರು । ಕೃತಕ ಪ್ರವಾಹ ಸ್ಥಿತಿ ನಿರ್ಮಾಣ । ಇಂದು ರೆಡ್ ಅಲರ್ಟ್
ಕನ್ನಡಪ್ರಭ ವಾರ್ತೆ ಉಡುಪಿಇನ್ನೂ ಮುಂಗಾರು ಮಳೆ ಆರಂಭವಾಗಿಲ್ಲದಿದ್ದರೂ, ಸೋಮವಾರ ಕರಾವಳಿವಲ್ಲಿ ಭಾರಿ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಂದೇ ರಾತ್ರಿಯಲ್ಲಿ ಸರಸಾರಿ 32.90 ಮಿ.ಮೀ. ಮಳೆಯಾಗಿದ್ದು, ಈ ಅಕಾಲಿಕ ಭಾರಿ ಮಳೆಯಿಂದ ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಕಾರಣದಿಂದ ರಾಜ್ಯದಲ್ಲಿ ಮುಂದಿನ 5 ದಿನ ಜೋರಾದ ಮಳೆಯಾಗುವ ಬಗ್ಗೆ ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಜೊತೆಗೆ ಮಂಗಳವಾರ ಭಾರಿ ಗಾಳಿ ಮಳೆಯಾಗುವ ಬಗ್ಗೆ ರೆಡ್ ಅಲರ್ಟ್ ಮುನ್ನೆಚ್ಚರಿಕೆ ನೀಡಲಾಗಿತ್ತು. ಅದರಂತೆ ಉಡುಪಿ ಜಿಲ್ಲಾದ್ಯಂತ ದಿನವಿಡೀ ಧಾರಾಕಾರ ಮಳೆಯಾಗಿದೆ.
ಮಳೆಯ ಜೊತೆಗೆ ಗಾಳಿಯೂ ಬೀಸಿದ್ದು, ಕಾಪು, ಕಾರ್ಕಳ ತಾಲೂಕುಗಳ ಅನೇಕ ಕಡೆಗಳಲ್ಲಿ ವಿದ್ಯುತ್ - ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಂಡಿತ್ತು. ಬೇಸಿಗೆ ಸೆಕೆಯಿಂದ ತತ್ತರಿಸಿದ್ದ ಉಡುಪಿ ಜಿಲ್ಲೆ, ಒಂದೇ ಮಳೆಗೆ ತಂಪಿನ ಅನುಭವ ಪಡೆದಿದೆ.* ಹೆದ್ದಾರಿಯಲ್ಲಿ ಹರಿದ ನೀರು:
ಮಣಿಪಾಲದ ಸಿಂಡಿಕೇಟ್ ವೃತ್ತದಲ್ಲಿ ನಗರಸಭೆಯ ಒಳಚರಂಡಿಯ ನಾದುರಸ್ತಿಯಿಂದಾಗಿ ಮಳೆ ನೀರು ಕಾಲುವೆಯಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು ಕೃತಕ ಪ್ರವಾಹದ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಹೆದ್ದಾರಿಯಿಂದ ಚರಂಡಿಗೆ ನೀರಿಳಿಯುವ ತೂತುಗಳಲ್ಲಿ ಕಸ - ಪ್ಲಾಸ್ಟಿಕ್ ತುಂಬಿಕೊಂಡು, ನೀರು ಹೆದ್ದಾರಿಯಲ್ಲಿ ಹರಿದು ಈ ದುಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ಪಕ್ಕದಲ್ಲಿ ರಾಶಿ ಹಾಕಲಾಗಿದ್ದ ಜಲ್ಲಿ ಕಲ್ಲು, ಇಟ್ಟಿಗೆ ತುಂಡುಗಳು ನೀರಿನ ರಭಸಕ್ಕೆ ರಸ್ತೆ ಮಧ್ಯೆ ಬಂದುಬಿದ್ದಿದ್ದವು. ಇದರಿಂದ ಕೆಲವು ದ್ವಿಚಕ್ರ ವಾಹನಗಳು ಉರುಳಿಬಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.ಮಳೆ ಕಡಿಮೆಯಾಗುತ್ತಿದ್ದಂತೆ ಪರಿಸ್ಥಿತಿ ಮತ್ತೆ ಸುಸ್ಥಿತಿಗೆ ಬಂತು. ಅಷ್ಟರಾಗಲೇ ಈ ಕೃತಕ ನೆರೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಉಡುಪಿಯ ಕಲ್ಸಂಕದಲ್ಲಿಯೂ ಕೆಲಕಾಲ ಹೆದ್ದಾರಿಯಲ್ಲಿ ಮಳೆ ನೀರು ಹರಿದು ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಯಾವುದೇ ಅನಾಹುತಗಳಾಗಿಲ್ಲ.* ನದಿಗಳಿಗೆ ಜೀವಕಳೆ
ಬೇಸಿಗೆಗಾಲದಲ್ಲಿ ಬತ್ತಿರುವ ಜಿಲ್ಲೆಯ ಬಹುತೇಕ ನದಿಗಳಿಗೆ ಈ ಒಂದು ಮಳೆಯಿಂದ ಜೀವಕಳೆ ಬಂದುಬಿಟ್ಟಿದೆ. ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಸುವರ್ಣ ನದಿಯ ಬಜೆ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.ಕಳೆದ ಹತ್ತು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಮುಂಗಾರುಪೂರ್ವ ಗಾಳಿಮಳೆಯಾಗುತ್ತಿದೆ. ಗಾಳಿಯಿಂದ ಅಲ್ಲಲ್ಲಿ ಮನೆಗಳಿಗೆ ಮತ್ತು ಬಾಳೆ - ಅಡಕೆ ತೋಟಗಳಿಗೆ ಹಾನಿಯೂ ಸಂಭವಿಸಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಕಾರ್ಕಳ ತಾಲೂಕೊಂದರಲ್ಲಿಯೇ 6 ಮನೆಗಳಿಗೆ ನಷ್ಟ ಉಂಟಾಗಿದೆ.
ಕಾರ್ಕಳ ತಾಲೂಕಿನಲ್ಲಿ 72.60 ಮಿ.ಮೀ. ಮಳೆಯಾಗಿದ್ದು, ಇಲ್ಲಿನ ನಿಟ್ಟೆ ಗ್ರಾಮದ ಬೇಬಿ ಪೂಜಾರಿ ತೂಡಲೆ, ಜಯ ಪೂಜಾರಿ ತೂಡಲೆ, ರತ್ನಾಕರ ಪೂಜಾರಿ ತೂಡಲೆ, ಮಹಾಬಲ ಪೂಜಾರಿ ತೂಡಲೆ ಅವರ ಮನೆಗಳಿಗೆ ಗಾಳಿಮಳೆಯಿಂದ ಹಾನಿಯಾಗಿ ತಲಾ 20 ಸಾವಿರ ರು.ಗಳಷ್ಟು ನಷ್ಟವಾಗಿದೆ. ಎರ್ಲಪಾಡಿ ಗ್ರಾಮದ ವಿನೋದ್ ಶೆಟ್ಟಿ ಅವರ ಮನೆಗೆ 20 ಸಾವಿರ ರು. ಮತ್ತು ಕಾರ್ಕಳ ನಗರದ ಶರ್ಮಿಳಾ ದಿನೇಶ್ ಅವರ ಮನೆಗೆ 10 ಸಾವಿರ ರು. ಹಾನಿಯಾಗಿದೆ.ಕಳೆದ 24 ಗಂಟೆಗಳಲ್ಲಿ ಕಾಪು ತಾಲೂಕಿನಲ್ಲಿ ಅತೀ ಹೆಚ್ಚು 76.30, ಕಾರ್ಕಳ ತಾಲೂಕು 72.60, ಉಡುಪಿ ತಾಲೂಕು 60.50, ಹೆಬ್ರಿ ತಾಲೂಕು 21.60, ಬ್ರಹ್ಮಾವರ ತಾಲೂಕು 18.60, ಬೈಂದೂರು ತಾಲೂಕು 9.70, ಕುಂದಾಪುರ 6.60 ಮಿ.ಮೀ.ಗಳಷ್ಟು ಮಳೆಯಾಗಿದೆ.
ಇಂದು ಭಾರಿ ಮಳೆ !ಹವಾಮಾನ ಇಲಾಖೆ ಇಂದೂ ಭಾರೀ ಮಳೆಯಾಗುವ ಬಗ್ಗೆ ರೆಡ್ ಅಲರ್ಟ್ ಮುನ್ಸೂಚನೆ ನೀಡಿದೆ. ಮಳೆಯ ಜೊತೆಗೆ 35 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನಚ್ಚರಿಕೆ ನೀಡಲಾಗಿದೆ.