ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದೆ. ಕಾರವಾರ ತಾಲೂಕಿನ ಕದ್ರಾದಿಂದ ಕೊಡಸಳ್ಳಿ ಡ್ಯಾಂಗೆ ಹೋಗುವ ರಸ್ತೆಯ ಮೇಲೆ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿದೆ. ಈ ರಸ್ತೆಯಲ್ಲಿ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಟ್ಕಳದಲ್ಲಿ ಬೆಳಗ್ಗೆಯಿಂದ ಸಂಜೆ ತನಕ ಬಿರುಗಾಳಿಯೊಂದಿಗೆ ಭಾರಿ ಮಳೆ ಸುರಿದಿದೆ. ಕುಮಟಾ, ಹೊನ್ನಾವರ, ಅಂಕೋಲಾ, ಕಾರವಾರದಲ್ಲೂ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ವ್ಯಾಪಕ ಮಳೆಯಾಗಿದೆ. ಸಂಜೆಯಾಗುತ್ತಿದ್ದಂತೆ ಮಳೆಯ ಪ್ರಮಾಣದಲ್ಲಿ ಇಳಿಮುಖವಾಗಿದೆ.
ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿ, ಯಲ್ಲಾಪುರ, ಸಿದ್ದಾಪುರ, ಮುಂಡಗೋಡದಲ್ಲಿ ಭಾರಿ ಮಳೆಯಾಗಿದೆ. ಜೋಯಿಡಾ, ದಾಂಡೇಲಿಗಳಲ್ಲಿ ಸಾಧಾರಣ ಮಳೆಯಾಗಿದೆ. ಆದರೂ ಒಮ್ಮೊಮ್ಮೆ ಭಾರಿ ಮಳೆಯಾಗಿದೆ.ಕೆಲ ದಿನಗಳಿಂದ ಮಳೆ ಇಳಿಮುಖವಾಗಿತ್ತು. ಗುರುವಾರ ನಸುಕಿನಿಂದಲೇ ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಅಬ್ಬರದ ಮಳೆ ಆರಂಭವಾಯಿತು. ಗುರುವಾರ ಜೋಯಿಡಾ ಹಾಗೂ ದಾಂಡೇಲಿ ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿತ್ತು.