ಹೋಟೆಲ್, ಅಂಗಡಿಗಳಿಗೆ ನುಗ್ಗಿದ ನೀರು ಅಪಾರ ನಷ್ಟ, ಬೈಕ್‌ಗಳಿಗೆ ಭಾರೀ ಹಾನಿ ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ ಭಾರೀ ಮಳೆಯಿಂದಾಗಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭಾಗಶಃ ನೀರು ತುಂಬಿ ಕೆರೆಯಂತಾಗಿದೆ. ನಿಲ್ದಾಣದೊಳಗಿದ್ದ ಹೋಟೆಲ್ ಹಾಗೂ ಅಂಗಡಿಗಳಿಗೆ ಮಳೆ ನೀರು ನುಗ್ಗಿ ಲಕ್ಷಾಂತರ ರು. ನಷ್ಟವಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಸ್ಟಾಂಡ್‌ನಲ್ಲಿ ನಿಲ್ಲಿಸಿದ್ದ ನೂರಾರು ಬೈಕ್‌ಗಳು ನೀರಿನಲ್ಲಿ ಮುಳುಗಿವೆ. ಬೈಕ್ ಮಾಲೀಕರು ತಮ್ಮ ವಾಹನ ಸರಿಪಡಿಸಿಕೊಳ್ಳಲು ಸಾವಿರಾರು ದಂಡ ತೆತ್ತಬೇಕಾದ ದುಸ್ಥಿತಿ ಎದುರಾಗಿದೆ. ಸಾರಿಗೆ ಸಂಸ್ಥೆ ತನ್ನ ಆವರಣದಲ್ಲಿರುವ ವಾಹನ ನಿಲ್ದಾಣಕ್ಕೆ ಯಾವುದೇ ರೀತಿಯ ಸೌಕರ್ಯ ಕಲ್ಪಿಸಿಕೊಟ್ಟಿಲ್ಲ. ಆದರೂ ಪಾರ್ಕಿಂಗ್ ಏಜೆನ್ಸಿ ಮೂಲಕ ಶುಲ್ಕ ವಸೂಲಿ ಮಾಡುತ್ತಿದೆ. ಮಳೆ ಬಿದ್ದ ಕೂಡಲೇ ಕೆರೆಯಂತಾಗುವ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯನ್ನು ನಂಬಿ ಶುಲ್ಕ ಕೊಟ್ಟು ನಿಲ್ಲಿಸಿದ ಬೈಕ್‌ಗಳು ನೀರಿನಲ್ಲಿ ಮುಳುಗಿ ವಾಹನ ಸವಾರರು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಮುಳುಗಿದ ಬೈಕ್‌ಗಳ ರಿಪೇರಿ ವೆಚ್ಚವನ್ನು ಪಾರ್ಕಿಂಗ್ ಏಜೆನ್ಸಿಯವರು ಭರಿಸುತ್ತಿಲ್ಲ. ಬಸ್ ನಿಲ್ದಾಣದೊಳಗೆ ಮತ್ತು ಹೊರಗಿನ ವ್ಯಾಪಾರಿಗಳೂ ಕೆರೆಯಂತಾಗುವ ಬಸ್ ನಿಲ್ದಾಣದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದುಬಾರಿ ಬಾಡಿಗೆ ನೀಡಿ ಸಾರಿಗೆ ಸಂಸ್ಥೆಯ ಆವರಣದಲ್ಲಿ ಅಂಗಡಿ ಮುಂಗಟ್ಟು ಮತ್ತು ಹೋಟೆಲ್ ನಡೆಸುತ್ತಿರುವವರು ತಮ್ಮ ತಮ್ಮ ಅಂಗಡಿ ಮಳಿಗೆಗಳಿಗೆ ಮಳೆ ನೀರು ನುಗ್ಗುವುದರಿಂದ ನಷ್ಟಕ್ಕೊಳಗಾಗಿದ್ದಾರೆ. ಮಳೆ ನೀರು ಬಸ್ ನಿಲ್ದಾಣದಲ್ಲಿ ತುಂಬಿಕೊಂಡ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿರುವ ಬೇಕರಿಯಲ್ಲಿದ್ದ ಲಕ್ಷಾಂತರ ರು. ಮೌಲ್ಯದ ತಿಂಡಿ, ತಿನಿಸುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಟ್ರಾಫಿಕ್ ಕಂಟ್ರೋಲರ್ ಕಚೇರಿಯೊಳಗಿದ್ದ ಹಲವು ದಾಖಲೆ ಪತ್ರಗಳು ನೀರಿನಿಂದ ತೋಯ್ದು ಹಾಳಾಗಿವೆ. ಬಸ್ ನಿಲ್ದಾಣದೊಳಗೆ ಎರಡು ಜನರಲ್ ಸ್ಟೋರ್‌ಗಳಿದ್ದು, ಈ ಎರಡೂ ಅಂಗಡಿಮಳಿಗೆಯೊಳಗೆ ದಾಸ್ತಾನು ಮಾಡಿದ್ದ ಬಿಸ್ಕೆಟ್ ಪ್ಯಾಕೆಟ್‌ಗಳು, ಚಾಕಲೇಟ್ ಮತ್ತಿತರ ತಿಂಡಿ, ತಿನಿಸುಗಳು ನೀರಿನಲ್ಲಿ ಮುಳುಗಿವೆ. ಇದರಿಂದ ಅಂಗಡಿ ಮಳಿಗೆಗಳ ಮಾಲೀಕರಿಗೆ ಲಕ್ಷಾಂತರ ರು. ನಷ್ಟವಾಗಿದೆ. ಪಟ್ಟಣದ ಬಸ್ ನಿಲ್ದಾಣವನ್ನು ಚನ್ನಪ್ಪನಕಟ್ಟೆ ಕೆರೆಯನ್ನು ಮುಚ್ಚಿ ನಿರ್ಮಿಸಲಾಗಿದೆ. ಆದರೆ, ನಿಲ್ದಾಣವನ್ನು ನಿರ್ಮಿಸುವಾಗ ಸಾರಿಗೆ ಅಧಿಕಾರಿಗಳು ಕೆರೆ ಆವರಣವನ್ನು ಎತ್ತರಿಸಿ ಮಳೆ ನೀರು ರಾಜ ಕಾಲುವೆಯ ಮುಖಾಂತರ ಸುಲಭವಾಗಿ ಹರಿದು ಹೋಗುವಂತೆ ಮಾಡಬೇಕಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ. ಕಳೆದ ವರ್ಷ ಇದೇ ರೀತಿ ಮಳೆ ಸುರಿದ ಕಾರಣ ಬಸ್ಸಿಗಾಗಿ ಕಾಯುತ್ತಿದ್ದ ನೂರಾರು ಪ್ರಯಾಣಿಕರು ಅಪಾಯಕ್ಕೆ ಸಿಲುಕಿದ್ದರು. ಅವರನ್ನು ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಸಾರ್ವಜನಿಕರ ಸಹಾಯದೊಂದಿಗೆ ನಾಡದೋಣಿ ಬಳಸಿ ಪ್ರಯಾಣಿಕರನ್ನು ಪಾರು ಮಾಡಿದ್ದರು. ಮಳೆ ಬಂದು ಬಸ್ ನಿಲ್ದಾಣ ಕೆರೆಯಾದಗಲೆಲ್ಲಾ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸ್ಥಳ ಪರಿಶೀಲನೆ ಮಾಡುತ್ತಾರೆ. ಆದರೆ, ಸಮಸ್ಯೆಗೆ ಪರಿಹಾರ ಮಾತ್ರ ದೊರಕುತ್ತಿಲ್ಲ. ಬಸ್ ನಿಲ್ದಾಣದ ಅಭಿವೃದ್ಧಿಯ ಹೆಸರಿನಲ್ಲಿ ಹತ್ತಾರು ಬಾರಿ ಅನುದಾನ ಬಂದರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿಲ್ದಾಣದೊಳಗೆ ನೀರು ಬರದಂತೆ ಎತ್ತರದ ತಡೆಗೋಡೆ ನಿರ್ಮಿಸಿ ಹಳ್ಳದ ನೀರು ಸುಲಲಿತವಾಗಿ ಹರಿದು ಹೋಗಲು ವೈಜ್ಞಾನಿಕವಾಗಿ ರಾಜ ಕಾಲುವೆಯನ್ನು ನಿರ್ಮಿಸಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 17ಕೆಎಂಎನ್ ಡಿ28,29 ಭಾರೀ ಮಳೆಯಿಂದಾಗಿ ಕೆ.ಆರ್.ಪೇಟೆ ಬಸ್ ನಿಲ್ದಾಣ, ಅಂಗಡಿಯಲ್ಲಿ ನೀರು ನಿಂತು ಕೆರೆಯಂತಾಗಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.