ಭದ್ರಾವತಿ: ಮಲೆಯಾಳಿ ಭಾಷಿಕರು ದೇಶದ ವಿವಿಧ ಭಾಗಗಳಲ್ಲಿ ನೆಲೆಸಿ, ತಮ್ಮದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು. ನಗರದ ಕೇರಳ ಸಮಾಜಂ ವತಿಯಿಂದ ಬಿ.ಎಚ್. ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ 11ನೇ ವರ್ಷದ ಓಣಂ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕೇರಳ ರಾಜ್ಯದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ವಿದ್ಯಾವಂತರಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೇ, ಎಲ್ಲರೊಂದಿಗೆ ಸೌಹಾರ್ದದಿಂದ ಬದುಕುವ ಗುಣ ರೂಪಿಸಿಕೊಂಡಿದ್ದಾರೆ. ಅವರ ಏಳಿಗೆಗೆ ಬದ್ಧನಾಗಿದ್ದು, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಉಡುಪಿಯ ಕೇರಳ ಸಮಾಜಂ ಅಧ್ಯಕ್ಷ ಸುಗುಣಕುಮಾರ್ ಮಾತನಾಡಿ, ಮಲಯಾಳಿ ಭಾಷಿಕರು ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಿಸಬೇಕು. ಎಲ್ಲರ ಪ್ರೀತಿ- ವಿಶ್ವಾಸಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ ಮಾತನಾಡಿ, ಸಮಾಜದ ಸದಸ್ಯರು ತಮ್ಮ ಸಮುದಾಯದ ಕಷ್ಟದಲ್ಲಿ ಇರುವವರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮರಣದ ನಂತರ ತಮ್ಮ ಕಣ್ಣುಗಳನ್ನು ಮತ್ತೊಬ್ಬರಿಗೆ ದಾನ ಮೂಲಕ ಅವರ ಬಾಳಿಗೆ ಬೆಳಕಾಗಬೇಕು ಎಂದರು. ಪ್ರಮುಖರಾದ ಎನ್.ಡಿ.ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಬಾಲಚಂದ್ರನ್, ಯುವ ಘಟಕದ ಅಧ್ಯಕ್ಷ ಎಸ್.ಪ್ರಸನ್ನಕುಮಾರ್, ಅಬ್ದುಲ್ ನಜೀಬ್, ಡಾ.ಪ್ರವೀಣ ಜೇಕೋಬ್, ಕೆ.ಇಬ್ರಾಹಿಂ ಇತರರು ಉಪಸ್ಥಿತರಿದ್ದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಓಣಂ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಆರ್ಯ ಚಂದ್ರನ್ ಪ್ರಾರ್ಥಿಸಿ, ವಿಜಯ್ ಕುಮಾರ್ ಸ್ವಾಗತಿಸಿದರು. ಪ್ರಶಾಂತ್ ನಿರೂಪಿಸಿ, ವಂದಿಸಿದರು. - - - -ಡಿ16-ಬಿಡಿವಿಟಿ3: ಶಾಸಕ ಬಿ.ಕೆ. ಸಂಗಮೇಶ್ವರ್ ಓಣಂ ದಿನಾಚರಣೆ ಉದ್ಘಾಟಿಸಿದರು.